ನನಗೆ ಭಯ ಇರುತ್ತಿದ್ದರೆ, ಈ ಪುಸ್ತಕ ಬರೆಯುತ್ತಿರಲಿಲ್ಲ: ಡಾ. ಕಫೀಲ್ ಖಾನ್
ಬೆಂಗಳೂರು, ಜ.31: ಯುಪಿಯ ಎಲ್ಲಾ ಘಟನೆಗಳು ಪುಸ್ತಕವನ್ನು ಬರೆಯಲು ಪ್ರೇರಣೆ ನೀಡಿದ್ದು, ಪುಸ್ತಕದಲ್ಲಿ ಸತ್ಯಾಂಶವನ್ನು, ಜನರ ನೋವನ್ನು ಬರೆಯಲಾಗಿದೆ. ಯೋಗಿ ಸರಕಾರದ ಕಿರುಕುಳವನ್ನು ಬಿಂಬಿಸಲಾಗಿದೆ ಎಂದು ಲೇಖಕ ಮತ್ತು ವೈದ್ಯ ಕಫೀಲ್ ಖಾನ್ ಹೇಳಿದರು.
ಸೋಮವಾರ ಪ್ರೆಸ್‍ಕ್ಲಬ್‍ನಲ್ಲಿ ಮೆಡಿಕಲ್ ಸರ್ವೀಸ್ ಸೆಂಟರ್ ವತಿಯಿಂದ ಆಯೋಜಿಸಿದ್ದ ‘ದಿ ಗೋರಕ್‍ಪುರ್ ಹಾಸ್ಪಿಟಲ್ ಟ್ರಾಜಿಡಿ’ ಪುಸ್ತಕ ಲೋಕಾರ್ಪಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಯುಪಿಯ ಘಟನೆಗಳು ಪುಸ್ತಕವನ್ನು ಬರೆಯಲು ಪ್ರೇರಣೆ ನೀಡಿದ್ದು, ಪುಸ್ತಕದಲ್ಲಿ ಸತ್ಯಾಂಶವನ್ನು, ಜನರ ನೋವನ್ನು ಬರೆಯಲಾಗಿದೆ. ಯೋಗಿ ಸರಕಾರದ ಕಿರುಕುಳವನ್ನು ಬಿಂಬಿಸಲಾಗಿದೆ. ಮುಂಬೈನಲ್ಲಿ ಕುಳಿತ ಪತ್ರಕರ್ತರು ಗೋರಖ್‍ಪುರದ ದುರಂತವನ್ನು ತಿರುಚಿದ್ದಾರೆ. ದುರಂತಕ್ಕೆ ಬಲಿಯಾದ 80 ಕುಟುಂಬಗಳ ದುಃಖದ ಬಗ್ಗೆ ಸರಕಾರವು ತೋರಿದ ನಕಾರಾತ್ಮಕ ಧೋರಣೆಯನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಪುಸ್ತಕವನ್ನು ಪ್ರಕಟಿಸಲು ಭಾರತೀಯ ಪ್ರಕಾಶಕರು ಮುಂದೆ ಬಂದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
“2017ರ ಆಗಸ್ಟ್ ತಿಂಗಳಿನಲ್ಲಿ ಗೋರಖ್‍ಪುರದಲ್ಲಿರುವ ಬಾಬಾ ರಾಘವದಾಸ್ ಮೆಡಿಕಲ್ ಕಾಲೇಜಿನ ನೆಹರು ಆಸ್ಪತ್ರೆಯಲ್ಲಿ ಆಮ್ಲಜನಕ ಸರಬರಾಜು ನಿಂತುಹೋಯಿತು. ಪರಿಣಾಮವಾಗಿ 63 ಮಕ್ಕಳು ಸೇರಿದಂತೆ 18 ಮಂದಿ ವಯಸ್ಕರು ಎರಡು ತಿಂಗಳಿನಲ್ಲಿಯೇ ದುರ್ಮರಣ ಹೊಂದಿದರು. ಇದನ್ನು ಪರಿಶೀಲಿಸಿ, ಬೇರೆಡೆಯಿಂದ ಆಮ್ಲಜನಕವನ್ನು ತರಿಸಿ ಸಾವಿನ ಪ್ರಮಾಣವನ್ನು ಕಡಿಮೆ ಮಾಡಿದ ನನನ್ನು ಭ್ರಷ್ಟಾಚಾರ, ವೈದ್ಯಕೀಯ ನಿರ್ಲಕ್ಷ್ಯದಂತಹ ಆರೋಪಗಳನ್ನು ಹೊರಿಸಿ ಸೇವೆಯಿಂದ ವಜಾ ಮಾಡಲಾಯಿತು. ಸರಕಾರವು ಎಫ್‍ಐಆರ್ ದಾಖಲಾಗುವಂತೆ ಮಾಡಿ, ನನ್ನನ್ನು ಜೈಲಿಗೆ ಕಳುಹಿಸಲಾಗಿತ್ತು. ವಿಪರ್ಯಾಸವೆಂದರೆ ಈ ಆರೋಪಗಳಿಗೆ ಸಾಕ್ಷಿಗಳನ್ನು ಇಂದಿಗೂ ಒದಗಿಸುತ್ತಿಲ್ಲ. ಪರಿಣಾಮವಾಗಿ ಕೆಳ ನ್ಯಾಯಾಲಯಗಳಲ್ಲಿ ಈಗಲೂ ಮೊಕದ್ದಮೆಗಳು ಮುಂದುವರೆಯುತ್ತಿವೆ” ಎಂದು ಅವರು ಮಾಹಿತಿ ನೀಡಿದರು.
“ಸರಕಾರ, ಮಾಧ್ಯಮಗಳು ಸೇರಿದಂತೆ ರಾಜಕೀಯ ಪಕ್ಷಗಳು ಹೋರಾಟ ಮಾಡುವವರನ್ನು ಕೆಟ್ಟದಾಗಿ ಬಿಂಬಿಸಿದರೂ, ನ್ಯಾಯಾಂಗವು ನ್ಯಾಯಯುತ ಹೋರಾಟಗಾರರನ್ನು ರಕ್ಷಣೆ ಮಾಡುತ್ತದೆ” ಎಂದು ಕಫೀಲ್ ಖಾನ್ ಅಭಿಪ್ರಾಯಪಟ್ಟರು.
“ಅಲಿಗಡ ಮುಸ್ಲಿಂ ವಿವಿಯಲ್ಲಿ ಪ್ರಚೋದನಾತ್ಮಕ ಭಾಷಣವನ್ನು ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ಯೋಗಿ ಸರಕಾರವು ನನ್ನನ್ನು ಕಾನೂನುಬಾಹಿರವಾಗಿ ಬಂಧಿಸಿದರೂ, ಅಲಹಾಬಾದ್ ನ್ಯಾಯಾಲಯವು ನನ್ನ ಮೇಲಿರುವ ಆರೋಪಗಳನ್ನು ರದ್ದುಗೊಳಿಸಿತು. ಇದು ನ್ಯಾಯಕ್ಕೆ ಸಿಕ್ಕ ಬೆಲೆಯಾಗಿದೆ” ಎಂದರು.
“ಕಳೆದ ಐದು ವರ್ಷಗಳಿಂದ ಜಾತಿ ಮತ್ತು ಕೋಮುವಾದ ಹೆಸರಿನಲ್ಲಿ ರಾಜ್ಯದ ಜನರನ್ನು ವಿಭಜನೆ ಮಾಡಿರುವುದು ಯೋಗಿ ಸರಕಾರದ ಸಾಧನೆಯಾಗಿದೆ. ಹಾಗಾಗಿ ಆರೋಗ್ಯ ಸೇರಿದಂತೆ ಮೂಲಭೂತ ಸೌಕಾರ್ಯಗಳನ್ನು ಒದಗಿಸಲು ವಿಫಲರಾಗಿದ್ದಾರೆ. 2 ಕೋಟಿ ಜನಸಂಖ್ಯೆಗೆ ಒಂದೇ ಒಂದು ಮೆಡಿಕಲ್ ಕಾಲೇಜು ಸ್ಥಾಪನೆಯಾಗಿರುವುದು ಸರಕಾರದ ವೈಫಲ್ಯದ ಸಂಕೇತವಾಗಿದೆ” ಎಂದು ಅವರು ಹೇಳಿದರು.
“ಸಂಸತ್ತಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ಡಯಾಬಿಟಿಸ್‍ನಂತಹ ಕಾಯಿಲೆಗಳಗೆ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಲಾಗಿತ್ತು. ಅದನ್ನು ಇದುವರೆಗೆ ಕಾರ್ಯರೂಪಕ್ಕೆ ತರುವಲ್ಲಿ ಕೇಂದ್ರ ಸರಕಾರವು ವಿಫಲವಾಗಿದೆ. ಹಾಗಾಗಿ ಆರೋಗ್ಯ ವಿಚಾರದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಸಮಾನತೆ ಉಂಟಾಗಿದೆ. ಇದಕ್ಕೆ ಬಿಜೆಪಿ ಮಾತ್ರವಲ್ಲದೆ, ಹಿಂದಿನ ಕಾಂಗ್ರೆಸ್ ಸರಕಾರವು ಕಾರಣವಾಗಿದೆ” ಎಂದು ಅವರು ಕಿಡಿಕಾರಿದರು.
ಹಿರಿಯ ಪತ್ರಕರ್ತ ಎಂ.ಎ. ಸಿರಾಜ್ ಮಾತನಾಡಿ, ಪುಸ್ತಕವು ದೇಶದ ಆಸ್ಪತ್ರೆಗಳ ಸ್ಥಿತಿಗತಿಯನ್ನು ಹಾಗೂ ಜೈಲಿನಲ್ಲಿ ಖೈದಿಗಳ ನಡುವಿನ ತಾರತಮ್ಯದ ಕರಾಳ ಸತ್ಯವನ್ನು ಬಿಚ್ಚಿಡುತ್ತದೆ. ಜೈಲಿನಲ್ಲಿ ಮಾಜಿ ಮಂತ್ರಿಯೊಬ್ಬರಿಗೆ ಒಂದು ಕೊಠಡಿಯನ್ನು ನೀಡಲಾಗಿತ್ತು. ಆದರೆ 200 ಜನ ಖೈದಿಗಳಿಗೂ ಒಂದೇ ಶೌಚಾಲಯವಿರುವ ಒಂದೇ ರೂಮ್ ನೀಡಲಾಗಿತ್ತು. ಈ ಸತ್ಯಾಂಶವನ್ನು ಪುಸ್ತಕದಲ್ಲಿ ಬರಯಲಾಗಿದೆ ಎಂದರು.
ಸಮಾರಂಭದಲ್ಲಿ ಆಹಾರತಜ್ಞ ಹಾಗೂ ನೀತಿ ವಿಶ್ಲೇಷಕ ಡಾ. ಕೆ.ಸಿ. ರಘು, ಡಾ. ಕೆ.ಎಸ್. ಗಂಗಾಧರ್, ಡಾ. ರಾಜಶೇಖರ್ ಮತ್ತು ಡಾ. ಸುನೀತ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.