×
Ad

ದಲಿತ, ಹಿಂದುಳಿದ ಮಠಗಳಿಗೆ ಭೂಮಿ, ಅನುದಾನ ಕೋರಿ ಮುಖ್ಯಮಂತ್ರಿ ಬೊಮ್ಮಾಯಿಗೆ ಮಠಾಧೀಶರ ಮನವಿ

Update: 2022-01-31 18:26 IST

ಬೆಂಗಳೂರು, ಜ. 31: ‘ರಾಜ್ಯದಲ್ಲಿನ ದಲಿತ ಮತ್ತು ಹಿಂದುಳಿದ ಮಠಗಳಿಗೆ ಬೆಂಗಳೂರಿನಲ್ಲಿ 5 ಎಕರೆ ಜಮೀನು ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ 5 ಕೋಟಿ ರೂ.ಅನುದಾನ ನೀಡಬೇಕು' ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಆಗ್ರಹಿಸುವಂತೆ ಒತ್ತಾಯಿಸಿ ಹಿಂದುಳಿದ-ದಲಿತ ಮಠಾಧೀಶರ ಒಕ್ಕೂಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದೆ.

ಸೋಮವಾರ ಇಲ್ಲಿನ ರೇಸ್‍ಕೋರ್ಸ್ ರಸ್ತೆಯಲ್ಲಿನ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಪುರುಷೋತ್ತಮಾನಂದಪುರಿ ಸ್ವಾಮಿ, ಸಂಚಾಲಕ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿ, ನಿರಂಜನಾನಂದ ಪುರಿ ಸ್ವಾಮಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿ ಸೇರಿದಂತೆ ವಿವಿಧ ಮಠಗಳ ಸುಮಾರು 20ಕ್ಕೂ ಹೆಚ್ಚು ಸ್ವಾಮೀಜಿಗಳು ಸಿಎಂ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಭರವಸೆ: ‘ದಲಿತ-ಹಿಂದುಳಿದ ವರ್ಗಗಳ ಮೀಸಲಾತಿ ಕುರಿತು ಮಠಾಧೀಶರ ನಿಯೋಗದ ಜೊತೆ ಯಾವುದೇ ಚರ್ಚೆ ನಡೆಸಿಲ್ಲ. ಆದರೆ, 2022ರ ಆಯವ್ಯಯದಲ್ಲಿ ದಲಿತ ಮತ್ತು ಹಿಂದುಳಿದವರ್ಗಗಳ ಶ್ರೇಯೋಭಿವೃದ್ದಿಗೆ ಅಗತ್ಯ ಯೋಜನೆ ರೂಪಿಸುತ್ತೇವೆ. ಅಲ್ಲದೆ, ಬಜೆಟ್‍ನಲ್ಲಿ ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸ್ವಾಮೀಜಿಗಳಿಗೆ ಭರವಸೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಇದೇ ವೇಳೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಕಾಗಿನೆಲೆಯ ನಿರಂಜನಾನಂದಪುರಿ ಶ್ರೀಗಳ ನೇತೃತ್ವದಲ್ಲಿ 20ಕ್ಕೂ ಹೆಚ್ಚು ದಲಿತ-ಹಿಂದುಳಿದ ಮಠಗಳ ಮಠಾಧೀಶರು ತಮ್ಮನ್ನು ಭೇಟಿಯಾಗಿದ್ದಾರೆ. ರಾಜ್ಯದಲ್ಲಿನ ದಲಿತ, ಹಿಂದುಳಿದ ವರ್ಗಗಳ ಏಳಿಗೆಗಾಗಿ 2022ರ ಬಜೆಟ್‍ನಲ್ಲಿ ಕಾರ್ಯಕ್ರಮ ರೂಪಿಸಬೇಕು. ಸಮುದಾಯಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕೊಡಬೇಕು ಎಂದು ಚರ್ಚೆ ನಡೆಸಿದ್ದಾರೆಂದು ಮಾಹಿತಿ ನೀಡಿದರು.

ರಾಜ್ಯದಲ್ಲಿರುವ ಹಲವು ಮಠಗಳು ಬಡ ಮಕ್ಕಳಿಗೆ ಅನ್ನದಾಸೋಹ, ಶಿಕ್ಷಣ ದಾಸೋಹ ಮಾಡುತ್ತಿದ್ದು, ಶೈಕ್ಷಣಿಕ ಸಂಸ್ಥೆಗಳನ್ನು ಮುನ್ನಡೆಸುತ್ತಿವೆ. ಹೀಗಾಗಿ ಮಠಗಳಿಗೆ ಸಮುದಾಯ ಭವನ, ಹಾಸ್ಟೆಲ್ ಕಟ್ಟಡ ನಿರ್ಮಿಸಲು ಅಗತ್ಯವಿರುವ ಭೂಮಿ ಹಾಗೂ ಅನುದಾನ ನೀಡಲು ಮನವಿ ಮಾಡಿದ್ದು, ಆದ್ಯತೆ ಮೇಲೆ ಪರಿಗಣಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ದಲಿತ-ಹಿಂದುಳಿದ ಸಮುದಾಯದ ಯುವಕ-ಯುವತಿಯರಿಗೆ ವಿದ್ಯೆ, ಉದ್ಯೋಗ ನೀಡಬೇಕು. ಜೊತೆಗೆ ರಾಜಕೀಯವಾಗಿ ಆ ವರ್ಗಗಳಿಗೆ ಪ್ರಾತಿನಿಧ್ಯ ಕೊಡುವಂತೆ ಮನವಿ ಮಾಡಿದ್ದು, ಬೆಂಗಳೂರಲ್ಲಿ ಕಾರ್ಯ ಚಟುವಟಿಕೆ ಮಾಡಲು ಒಂದು ಸ್ಥಳ ಬೇಕೆಂಬ ಬೇಡಿಕೆ ಇತ್ತು. ಹಿಂದಿನ ಸರಕಾರ ಸ್ಥಳ ಮಂಜೂರು ಮಾಡಿದ್ದರೂ ಕಾನೂನಿನ ತೊಡಕಿನಿಂದ ಆ ಸ್ಥಳ ಸಿಕ್ಕಿಲ್ಲ. ಜಮೀನಿನ ಬಗ್ಗೆ ಕಡತ ತರಿಸಿ ಇದನ್ನು ಇತ್ಯರ್ಥ ಮಾಡಿ, ಜಮೀನು ಕೊಡಿಸಲು ಕೆಲಸ ಮಾಡುತ್ತೇನೆಂದು ತಿಳಿಸಿದ್ದೇನೆ ಎಂದರು.

ದಲಿತ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಯೋಜನೆ ರೂಪಿಸುತ್ತೇವೆ. ಬಜೆಟ್‍ನಲ್ಲಿ ನಾನು ಏನು ಮಾಡುತ್ತೇನೆ ಎಂದು ಹೇಳಲ್ಲ. ಆದರೆ, ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ದಿಗೆ ಯೋಜನೆ ರೂಪಿಸುತ್ತೇವೆ. ಆದರೆ, ಮೀಸಲಾತಿ ಬಗ್ಗೆ ಇಂದು ಯಾವುದೇ ಚರ್ಚೆ ಆಗಿಲ್ಲ ಎಂದು ಬಸವರಾಜ ಬೊಮ್ಮಾಯಿ ಇದೇ ವೇಳೆ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News