×
Ad

ಬೆಂಗಳೂರು: ರೈಲ್ವೇ ನಿಲ್ದಾಣದಲ್ಲಿರುವ ನಮಾಝ್ ಕೊಠಡಿಗೆ ಸಂಘಪರಿವಾರದಿಂದ ದಾಳಿ

Update: 2022-01-31 20:01 IST
Screengrab/twitter.com/keypadguerilla

ಬೆಂಗಳೂರು: ನಗರದ ರೈಲ್ವೇ ನಿಲ್ದಾಣದಲ್ಲಿರುವ ನಮಾಝ್ ಕೊಠಡಿಯೊಂದಕ್ಕೆ ಹಿಂದೂ ಜನಜಾಗೃತಿ ಸಮಿತಿಯ ಸದಸ್ಯರು ಏಕಾ ಏಕಿ ದಾಳಿ ನಡೆಸಿದ್ದಲ್ಲದೆ, ನಮಾಝ್ ಮಾಡದಂತೆ ಬೆದರಿಕೆ ಹಾಕಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ವೀಡಿಯೋಗಳು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ. ದಾಳಿಯ ವೇಳೆ ಪೊಲೀಸರ ಉಪಸ್ಥಿತಿಯೂ ಇದ್ದದ್ದು ವೀಡಿಯೋದಲ್ಲಿ ಕಂಡು ಬಂದಿದೆ. 

ರೈಲ್ವೇ ನಿಲ್ದಾಣದಲ್ಲಿದ್ದ ಕಾರ್ಮಿಕರ ವಿಶ್ರಾಂತಿ ಕೊಠಡಿಗಳನ್ನು ಮುಸ್ಲಿಮರ ನಮಾಝ್ ಕೊಠಡಿಯಾಗಿ ಪರಿವರ್ತಿಸಲಾಗಿದೆ. ಇದು ರಾಷ್ಟ್ರೀಯ ಭದ್ರತೆಗೆ ಅಪಾಯವಾಗಿದೆ ಎಂದು ಆರೋಪಿಸಿ ಹಿಂದೂಜನಜಾಗೃತಿ ಸಮಿತಿಯ ಸದಸ್ಯರು ನಮಾಝ್ ಕೊಠಡಿಯ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. 

ಪ್ರಾರ್ಥನಾ ಮಂದಿರಕ್ಕೆ ಅನುಮತಿ ರದ್ದುಪಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ವ್ಯಕ್ತಿಯೋರ್ವರು, ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಮುಸ್ಲಿಮರಿಗೆ ನಮಾಝ್‌ ಮಾಡಲು ಅವಶ್ಯಕವಾಗುವಂತೆ ನಮಾಝ್‌ ಕೊಠಡಿ ಇದೆ ಎಂದು ಜನರಿಗೆ ತಿಳಿಯಪಡಿಸುವ ಸಲುವಾಗಿ ಮಲಯಾಳಂ ಭಾಷೆಯಲ್ಲಿ ವೀಡಿಯೊವೊಂದನ್ನು ಹರಿಯಬಿಟ್ಟಿದ್ದರು. ಈ ವೀಡಿಯೋ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು, ಹಿಂದುತ್ವವಾದಿಗಳು ಮತ್ತು ಬಲಪಂಥೀಯರು ಈ ಕುರಿತು ದ್ವೇಷ ಹಬ್ಬಿಸಲು ಪ್ರಾರಂಭಿಸಿದ್ದರು. ಅದರ ಮುಂದುವರಿದ ಭಾಗವಾಗಿ ಈ ದಾಳಿ ನಡೆದಿದೆ. ಹಲವು ವರ್ಷಗಳಿಂದ ಅನುಮತಿಯ ಮೇರೆಗೆ ಈ ಕೊಠಡಿ ಕಾರ್ಯ ನಿರ್ವಹಿಸುತ್ತಿತ್ತು ಎಂದು ಸಾಮಾಜಿಕ ತಾಣದಲ್ಲಿ ಹಲವರು ತಿಳಿಯಪಡಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನೂ ತಿಳಿದು ಬಂದಿಲ್ಲ. 

ಈ ನಡುವೆ ಪತ್ರಕರ್ತ ಸಗಾಯ್‌ ರಾಜ್‌ ವೀಡಿಯೊಗಳನ್ನು ಟ್ವೀಟ್‌ ಮಾಡಿದ್ದು, ಬೆಂಗಳೂರು ರೈಲ್ವೆ ನಿಲ್ದಾಣದ ವಿವಿಧ ಪ್ಲಾಟ್‌ಫಾರ್ಮ್‌ ಗಳಿಗೆ ಹಿಂದೂ ಧರ್ಮೀಯರಿಗೆ , ಕ್ರೈಸ್ತ ಧರ್ಮೀಯರಿಗೂ ಪ್ರಾರ್ಥನಾ ಮಂದಿರಗಳಿರುವುದನ್ನು ಬೆಟ್ಟು ಮಾಡಿದ್ದಾರೆ. ಹಿಂದೂ ಜನಜಾಗೃತಿ ವೇದಿಕೆ ಕೇವಲ ಒಂದು ಧರ್ಮದ ಪ್ರಾರ್ಥನಾಯಲವನ್ನು ಗುರಿಪಡಿಸುತ್ತಿರುವುದು ಸರಿಯಲ್ಲ ಎಂದೂ ಅವರು ತಮ್ಮ ಟ್ವೀಟ್‌ ನಲ್ಲಿ ಉಲ್ಲೇಖಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News