ಬೆಂಗಳೂರಿನಲ್ಲಿ ವಾಹನ ಟೋಯಿಂಗ್‍ಗೆ ತಾತ್ಕಾಲಿಕ ತಡೆ
ಬೆಂಗಳೂರು, ಜ.31: ನಗರದೆಲ್ಲೆಡೆ ವಾಹನ ಟೋಯಿಂಗ್‍ಗಳನ್ನು ನಿಯಮ ಮೀರಿ ಮಾಡಲಾಗುತ್ತಿದೆ ಎಂದು ದೂರುಗಳು ಕೇಳಿಬರುತ್ತಿರುವ ಕಾರಣದಿಂದ ಗೊಂದಲ ಮುಗಿಯುವವರೆಗೆ ಟೋಯಿಂಗ್ ಮಾಡದಂತೆ ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಆದೇಶಿಸಿದ್ದಾರೆ.
ಟೋಯಿಂಗ್ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಹಾಗಾಗಿ ಟೋಯಿಂಗ್ ಕುರಿತು ಮುಖ್ಯಮಂತ್ರಿ ನಿರ್ಧಾರ ತೆಗೆದುಕೊಳ್ಳುವವರೆಗೆ ಬೆಂಗಳೂರಿನಲ್ಲಿ ಟೋಯಿಂಗ್ ನಿಲ್ಲಿಸುವಂತೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇದೇ ವಿಚಾರವಾಗಿ ಸೋಮವಾರ ಇಲ್ಲಿನ ಅರಮನೆ ಮೈದಾನದಲ್ಲಿ ಟೋಯಿಂಗ್ ವ್ಯವಸ್ಥೆ ಸುಧಾರಣೆ ಹೇಗೆ ಹಾಗೂ ಪೊಲೀಸರು ಜನರ ಜೊತೆ ಹೇಗೆ ನಡೆದುಕೊಳ್ಳಬೇಕೆಂಬುದನ್ನು ತಿಳಿಸಲು ಬಿ.ಆರ್. ರವಿಕಾಂತೇಗೌಡ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದರು.
ನಗರದ ಎಲ್ಲ ಸಂಚಾರ ಠಾಣೆಗಳ ಎಎಸ್ಸೈ, ಪಿಎಸ್ಸೈ, ಇನ್‍ಸ್ಪೆಕ್ಟರ್, ಎಸಿಪಿ ಹಾಗೂ ಡಿಸಿಪಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕೆಲ ಸೂಚನೆಗಳನ್ನು ಪಾಲಿಸಬೇಕು. ಸಾರ್ವಜನಿಕರ ಅಭಿಪ್ರಾಯಗಳನ್ನು ಗೌರವಿಸಬೇಕೆಂದು ತಿಳಿಸಿಕೊಡಲಾಯಿತು.