×
Ad

ಸಿ.ಎಂ.ಇಬ್ರಾಹೀಂ-ರೋಶನ್ ಬೇಗ್ ಭೇಟಿ

Update: 2022-01-31 23:44 IST

ಬೆಂಗಳೂರು, ಜ.31: ಕಾಂಗ್ರೆಸ್ ಪಕ್ಷವನ್ನು ತೊರೆಯುವುದಾಗಿ ಪ್ರಕಟಿಸಿರುವ ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹೀಂ ಅವರನ್ನು ನಗರದ ಬೆನ್ಸನ್‍ಟೌನ್‍ನಲ್ಲಿರುವ ಅವರ ನಿವಾಸದಲ್ಲಿ ಸೋಮವಾರ ಮಾಜಿ ಸಚಿವ ಆರ್.ರೋಶನ್ ಬೇಗ್ ಭೇಟಿಯಾಗಿ ಮಾತುಕತೆ ನಡೆಸಿದರು.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ವೇಳೆ ಕಾಂಗ್ರೆಸ್ ನಾಯಕತ್ವದ ವಿರುದ್ಧ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೆ ಯತ್ನಿಸಿ ವಿಫಲರಾದ ರೋಶನ್ ಬೇಗ್, ಇದೀಗ ಯಾವುದೆ ರಾಜಕೀಯ ಪಕ್ಷದ ಜೊತೆಗೂ ಗುರುತಿಸಿಕೊಳ್ಳದೆ ತಟಸ್ಥರಾಗಿದ್ದಾರೆ.

ಇದೀಗ ಸಿ.ಎಂ.ಇಬ್ರಾಹೀಂ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿರುವ ರೋಶನ್ ಬೇಗ್, ಸಿ.ಎಂ.ಇಬ್ರಾಹೀಂ ತೆಗೆದುಕೊಳ್ಳುವ ರಾಜಕೀಯ ನಿರ್ಧಾರದಂತೆ ತಾವು ಅವರಿಗೆ ಬೆಂಬಲ ನೀಡುತ್ತಾರೆಯೇ ಎಂಬ ಕುತೂಹಲ ಮೂಡಿದೆ.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಸಿ.ಎಂ.ಇಬ್ರಾಹೀಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೋಶನ್ ಬೇಗ್, ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಅಲ್ಪಸಂಖ್ಯಾತರ ನೆನಪಾಗುತ್ತೆ. ಮತದಾನ ಆದ ಬಳಿಕ ಅಲ್ಪಸಂಖ್ಯಾತರಿಗೆ ಟಾ ಟಾ ಬೈ ಬೈ ಅನ್ನುತ್ತಾರೆ ಎಂದು ಕಿಡಿಗಾರಿದರು.

ರಾಜ್ಯದಲ್ಲಿನ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಕುರಿತು ನಾವಿಬ್ಬರೂ ಚರ್ಚೆ ಮಾಡಿದ್ದೇವೆ. ನಾನು ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದಕ್ಕಾಗಿ ನನ್ನನ್ನು ಪಕ್ಷದಿಂದ ಅಮಾನತ್ತು ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದ ಅವರು, ನನ್ನ ಮುಂದಿನ ನಡೆ ಏನು ಹಾಗೂ ಇವತ್ತು ಏನು ಚರ್ಚೆ ಮಾಡಿದ್ದೇವೆ ಅನ್ನೋದನ್ನು ಸಮಯ ಬಂದಾಗ ತಿಳಿಸುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News