ಶಿಖರ್ ಧವನ್ ಸಹಿತ ಮೂವರಿಗೆ ಕೊರೋನ, ವಿಂಡೀಸ್ ವಿರುದ್ಧ ಸರಣಿಗೆ ಮೊದಲು ಹಿನ್ನಡೆ

Update: 2022-02-02 16:48 GMT

  ಹೊಸದಿಲ್ಲಿ, ಫೆ.2: ವೆಸ್ಟ್‌ಇಂಡೀಸ್ ವಿರುದ್ಧ ಅಹಮದಾಬಾದ್‌ನಲ್ಲಿ ಏಕದಿನ ಸರಣಿ ಆರಂಭವಾಗಲು 4 ದಿನ ಬಾಕಿ ಇರುವಾಗ ಭಾರತ ಕ್ರಿಕೆಟ್ ತಂಡದ ಮೂವರು ಆಟಗಾರರಾದ ಶಿಖರ್ ಧವನ್, ಮೀಸಲು ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್‌ಗೆ ಕೊರೋನ ದೃಢಪಟ್ಟಿದೆ. ಸಹಾಯಕ ಸಿಬ್ಬಂದಿಗಳಲ್ಲೂ ಕೊರೋನ ಇರುವುದು ಗೊತ್ತಾಗಿದೆ ಎಂದು ಹಿರಿಯ ಬಿಸಿಸಿಐ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

   ಏಕದಿನ ಸರಣಿಯು ಅಹಮದಾಬಾದ್‌ನಲ್ಲಿ ಫೆ.6ರಿಂದ ಆರಂಭವಾಗಲಿದೆ. ಇದು ಭಾರತದ 1000ನೇ ಏಕದಿನ ಪಂದ್ಯವಾಗಿದೆ. ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ಪ್ರಕಾರ ಎರಡೂ ತಂಡಗಳ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ವರ್ಗದ ಕನಿಷ್ಠ 4-5 ಸದಸ್ಯರಿಗೆ ಕೊರೋನ ಇರುವುದು ಬುಧವಾರ ಗೊತ್ತಾಗಿದೆ. ಉಭಯ ತಂಡಗಳು ಒಂದೇ ಹೊಟೇಲ್‌ನಲ್ಲಿ ತಂಗಿದ್ದು ಪ್ರತ್ಯೇಕ ಮಹಡಿಯಲ್ಲಿವೆ.

ಬಿಸಿಸಿಐ ಮುಂದಿನ ಹೆಜ್ಜೆ ಇಡುವ ಮೊದಲು ಗುರುವಾರ ಬೆಳಗ್ಗೆ ಮತ್ತೊಂದು ಸುತ್ತಿನ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಪಾಸಿಟಿವ್ ಆದವರು ಕೊಠಡಿಗಳಲ್ಲಿ ಪ್ರತ್ಯೇಕವಾಗುಳಿದು, ಸರಕಾರದ ಮಾರ್ಗಸೂಚಿಯನ್ನು ಪಾಲಿಸಲಿದ್ದಾರೆ ಎನ್ನಲಾಗಿದೆ.

ವೆಸ್ಟ್‌ಇಂಡೀಸ್ ಮಂಗಳವಾರ ಅಹಮದಾಬಾದ್‌ಗೆ ಆಗಮಿಸಿದ್ದು, ಭಾರತ ತಂಡ ಜ.31ರಂದು ಒಟ್ಟಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News