ವಿರೋಧಿಗಳನ್ನೂ ಕಿವಿಗೂಡುವಂತೆ ಮಾಡಿದ್ದು ಸಿದ್ದಲಿಂಗಯ್ಯರ ವಿಶೇಷ: ಅಗ್ರಹಾರ ಕೃಷ್ಣಮೂರ್ತಿ

Update: 2022-02-03 17:46 GMT
 ಅಗ್ರಹಾರ ಕೃಷ್ಣಮೂರ್ತಿ

ಬೆಂಗಳೂರು, ಫೆ. 3: `ಹಿರಿಯ ಕವಿ, ನಾಡೋಜ, ಮರಣೊತ್ತರ ಪದ್ಮಶ್ರೀ ಪುರಸ್ಕೃ ತ ಸಾಹಿತಿ ಡಾ.ಸಿದ್ದಲಿಂಗಯ್ಯನವರು ತಮ್ಮ ಅಭಿವ್ಯಕ್ತಿಗೆ ಹಾಸ್ಯ(ವೈನೋದಕ) ಸಂಹಿತೆ ಮೂಲಕ ತಮ್ಮ ವಿರೋಧಿಗಳನ್ನೂ ಕಿವಿಗೂಡುವ ರೀತಿಯಲ್ಲಿ ಮಾಡಿದ್ದು ಬಹಳ ವಿಶೇಷ' ಎಂದು ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಇಂದಿಲ್ಲಿ ಸ್ಮರಿಸಿದ್ದಾರೆ.

ಗುರುವಾರ ಡಾ.ಸಿದ್ದಲಿಂಗಯ್ಯನವರ ಜನ್ಮ ದಿನದ ಅಂಗವಾಗಿ ಏರ್ಪಡಿಸಿದ್ದ ಆನ್‍ಲೈನ್ ಸಂವಾದದಲ್ಲಿ ಮಾತನಾಡಿದ ಅವರು, `ಕನ್ನಡ ಸಾಹಿತ್ಯ ಮತ್ತು ಕಾವ್ಯ ಲೋಕದ ದಿಕ್ಕನ್ನೆ ಬದಲಿಸಿದ ಸಿದ್ದಲಿಂಗಯ್ಯನವರು ಜಾತಿ ತಾರತಮ್ಯ ಮೀರಿ ಸಮ ಸಮಾಜದ ಕನಸು ನನಸಾಗಿಸಲು ಹೋರಾಟದ ಶಕ್ತಿಯಾಗಿದ್ದರು' ಎಂದು ನೆನಪು ಮಾಡಿಕೊಂಡರು.

ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಭಾವಚಿತ್ರ ತೆರವು ಪ್ರಕರಣದ ಈ ಸಂದರ್ಭದಲ್ಲಿ ಸಿದ್ದಲಿಂಗಯ್ಯನವರು ಮತ್ತು ಅವರ ನೆನಪು ನಮ್ಮನ್ನು ಹೆಚ್ಚೆಚ್ಚು ಕಾಡುತ್ತದೆ. ನಮ್ಮ ವಿದ್ಯಾರ್ಥಿ ಜೀವನದಲ್ಲಿ ಸಿದ್ದಲಿಂಗಯ್ಯನವರು ಹೋರಾಟಗಳಿಗೆ ಪ್ರೇರಕ ಶಕ್ತಿಯಾಗಿದ್ದರು ಎಂದ ಅಗ್ರಹಾರ ಕೃಷ್ಣಮೂರ್ತಿ, ಸಿದ್ದಲಿಂಗಯ್ಯನವರು ತಮ್ಮ ಆತ್ಮಕತೆ ಊರು-ಕೇರಿಯನ್ನು ಇನ್ನೂ ಗಂಭೀರವಾಗಿ ಬರೆಯಬಹುದಿತ್ತು ಎಂದು ತಿಳಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಕಾರ್ಲ್ ಮಾರ್ಕ್ದ್ ಅವರ ವಿಚಾರಧಾರೆಗಳ ದಟ್ಟ ಪ್ರಭಾವದಲ್ಲಿದ್ದ ಸಿದ್ದಲಿಂಗಯ್ಯನವರು ಜನಪದ ನಾಯಕ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಸಿದ್ದಲಿಂಗಯ್ಯ ಅತ್ಯಂತ ದೊಡ್ಡ ವ್ಯಕ್ತಿತ್ವದ ಅಪರೂಪದ ಕವಿ. ಅವರ ಒಡನಾಟ ನಿಜಕ್ಕೂ ರೋಮಾಂಚನಕಾರಿ ಎಂದು ಅಗ್ರಹಾರ ಕೃಷ್ಣಮೂರ್ತಿ ತಿಳಿಸಿದರು.

ಸಂವಾದದಲ್ಲಿ ಹಿರಿಯ ಲೇಖಕಿ ಎಂ.ಎಸ್.ಆಶಾದೇವಿ, ರಾಜ್ಯಸಭಾ ಸದಸ್ಯ ಡಾ.ಹನುಮಂತಯ್ಯ, ಗಾಯಕರಾದ ಅಪ್ಪಗೆರೆ ತಿಮ್ಮರಾಜು, ಜನ್ನಿ, ಟಿ.ಎಸ್.ಆಶಾ, ಎಲ್.ಎಲ್.ಮುಕುಂದರಾಜು, ವಡ್ಡಗೆರೆ ನಾಗರಾಜಯ್ಯ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News