ಶ್ರೀಮಂತಿಕೆಯಲ್ಲಿ ಮಾರ್ಕ್ ಝುಕರ್ ಬರ್ಗ್ ಹಿಂದಿಕ್ಕಿದ ಮುಕೇಶ್ ಅಂಬಾನಿ, ಗೌತಮ್ ಅದಾನಿ; ವರದಿ

Update: 2022-02-04 11:35 GMT
ಮುಕೇಶ್ ಅಂಬಾನಿ / ಗೌತಮ್ ಅದಾನಿ (PTI)

ಹೊಸದಿಲ್ಲಿ: ಭಾರತದ ಅತ್ಯಂತ ಶ್ರೀಮಂತ ಕೈಗಾರಿಕೋದ್ಯಮಿಗಳಾದ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಈಗ ಫೇಸ್ಬುಕ್ ಸಿಇಒ ಮಾರ್ಕ್ ಮಾರ್ಕ್ ಝುಕರ್ ಬರ್ಗ್ ಅವರಿಗಿಂತಲೂ ಶ್ರೀಮಂತರಾಗಿದ್ದಾರೆ. ಗುರುವಾರ ಫೇಸ್ಬುಕ್ ಮಾಲಕ ಸಂಸ್ಥೆ ಮೆಟಾ ಪ್ಲಾಟ್‍ಫಾಮ್ರ್ಸ್ ಇಂಕ್ ಇದರ ಷೇರು ಮೌಲ್ಯ ಒಂದೇ ದಿನದಲ್ಲಿ ದಾಖಲೆ ಕುಸಿತ ಕಂಡ ನಂತರ ಝುಕರ್ ಬರ್ಗ್ ತಮ್ಮ 29 ಬಿಲಿಯನ್ ಡಾಲರ್ ಸಂಪತ್ತು ಕಳೆದುಕೊಂಡ ನಂತರ ಈ ಬೆಳವಣಿಗೆ ನಡೆದಿದೆ ಎಂದು ವರದಿಯಾಗಿದೆ.

ಇದರಿಂದಾಗಿ ಫೋರ್ಬ್ಸ್ ರಿಯಲ್-ಟೈಮ್ ಬಿಲಿಯನೇರ್ಸ್ ಪಟ್ಟಿಯಲ್ಲೂ ಝುಕರ್ ಬರ್ಗ್ ಅವರು 12ನೇ ಸ್ಥಾನಕ್ಕೆ ಕುಸಿದಿದ್ದು ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಇಬ್ಬರೂ ಫೇಸ್ಬುಕ್ ಸಿಇಒ ಅವರನ್ನು ಹಿಂದಿಕ್ಕಿದ್ದಾರೆ.

ಗುರುವಾರ ಷೇರು ಮಾರುಕಟ್ಟೆಯಲ್ಲಿ ಮೆಟಾ ಸ್ಟಾಕ್ ಬೆಲೆ ಶೇ 26ರಷ್ಟು ಕುಸಿದು ಒಂದೇ  ದಿನದಲ್ಲಿ ಹೂಡಿಕೆದಾರರು 200 ಬಿಲಿಯನ್ ಡಾಲರ್ ಕಳೆದುಕೊಳ್ಳುವಂತಾಯಿತು. ಅಮೆರಿಕಾದ ಕಂಪೆನಿಯೊಂದರ ಶೇರು ಬೆಲೆ ಒಂದೇ ದಿನದಲ್ಲಿ ಇಷ್ಟೊಂದು ಇಳಿಕೆ ಕಂಡಿರುವುದು ಇದೇ ಮೊದಲ ಬಾರಿ. ಇದರಿಂದಾಗಿ ಝುಕರ್ ಬರ್ಗ್ ಅವರ ಒಟ್ಟು ಸಂಪತ್ತಿನ ಮೌಲ್ಯ ಈಗ 85 ಬಿಲಿಯನ್ ಡಾಲರ್ ಆಗಿದೆ. ಮೆಟಾ ಸಂಸ್ಥೆಯ ಶೇ 12.8ರಷ್ಟು ಪಾಲನ್ನು ಅವರು ಹೊಂದಿದ್ದಾರೆ.

ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಟೆಸ್ಲಾ ಮಾಲಕ ಎಲೋನ್ ಮಸ್ಕ್ ಒಂದೇ ದಿನದಲ್ಲಿ 35 ಬಿಲಿಯನ್ ಡಾಲರ್ ಕಳೆದುಕೊಂಡಿದ್ದರು. ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಇವರು ತಮ್ಮ ಟೆಸ್ಲಾ ಕಂಪೆನಿಯಲ್ಲಿನ ಶೇ. 10ರಷ್ಟು ಪಾಲನ್ನು ಮಾರಾಟ ಮಾಡಬೇಕೇ ಎಂದು ಟ್ವಿಟರ್ ಪೋಲ್ ನಡೆಸಿದ ನಂತರ ಅವರ ಕಂಪೆನಿಯ ಷೇರು ಮೌಲ್ಯ ಕುಸಿದು ಇನ್ನಷ್ಟೇ ಚೇತರಿಸಿಕೊಳ್ಳಬೇಕಿದೆ.

ಇದನ್ನೂ ಓದಿ: ಬಜೆಟ್‌ ನಲ್ಲಿ ಸರಕಾರ ಕೈಗೊಂಡ ಈ ನಿರ್ಧಾರ ಅಂಬಾನಿ, ಅದಾನಿ ಸಂಸ್ಥೆಗಳಿಗೆ ಲಾಭ ತರಲಿದೆಯೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News