×
Ad

ಹಣ ವಂಚನೆ ; ಆರೋಪಿ ವಿರುದ್ಧ ಪ್ರಕರಣ ದಾಖಲಿಸಲು ಪುತ್ತೂರು ನ್ಯಾಯಾಲಯ ಆದೇಶ

Update: 2022-02-04 20:00 IST
ಅಬ್ದುಲ್ ಬಶೀರ್ ಇಬ್ರಾಹಿಂ

ಪುತ್ತೂರು: ಚಿನ್ನದ ಮೇಲೆ ಹೂಡಿಕೆ ಮಾಡಿ ಲಾಭಾಂಶ ನೀಡುವುದಾಗಿ ಭರವಸೆ ನೀಡಿ ಹಣ ವಂಚನೆ ಮಾಡಿದ ಆರೋಪದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ತನಿಖೆ ನಡೆಸುವಂತೆ ಪುತ್ತೂರು ಪ್ರಧಾನ ಸಿವಿಲ್ ನ್ಯಾಯಾಲಯದ ಹಿರಿಯ ವಿಭಾಗ ಮತ್ತು ಎಸಿಜೆಎಂ ನ್ಯಾಯಾಧೀಶರು ಪುತ್ತೂರು ನಗರ ಪೊಲೀಸ್ ಠಾಣೆಗೆ ಆದೇಶ ನೀಡಿದ್ದಾರೆ.

ಎಸ್ಡಿಪಿಐ ಪುತ್ತೂರು ನಗರದ ಮಾಜಿ ಅಧ್ಯಕ್ಷ ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆ ಪೈಸಾರಿ ನಿವಾಸಿ ಅಬ್ದುಲ್ ಬಶೀರ್ ಇಬ್ರಾಹಿಂ ವಂಚನೆ ಮಾಡಿರುವ ಆರೋಪಿ ಎಂದು ತಿಳಿದುಬಂದಿದೆ.

ಈತನ ವಿರುದ್ಧ ಬನ್ನೂರು ನಿವಾಸಿ ಬಿ. ಮಹಮ್ಮದ್ ಹನೀಫ್ ಎಂಬವರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದು, ತನಗೆ ಚಿನ್ನದ ಮೇಲೆ ಹೂಡಿಕೆ ಮಾಡಿ ಲಾಭಾಂಶ ನೀಡುವುದಾಗಿ ನಂಬಿಸಿ 38,50,000 ರೂ.  ಪಡೆದುಕೊಂಡು ಬಳಿಕ ಲಾಂಭಾಂಶವೂ ನೀಡದೆ, ಸಂಪರ್ಕಕ್ಕೂ ಸಿಗದೆ ಅಬ್ದುಲ್ ಬಶೀರ್ ಇಬ್ರಾಹಿಂ ವಂಚನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ವಂಚನೆಗೆ ಒಳಗಾದ ಮುಹಮ್ಮದ್ ಹನೀಫ್ ಅವರ ದೂರಿನಂತೆ ಅಬ್ದುಲ್ ಬಶೀರ್ ಇಬ್ರಾಹಿಂ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯ ಪುತ್ತೂರು ನಗರ ಪೊಲೀಸ್ ಠಾಣೆಗೆ ಆದೇಶ ನೀಡಿದೆ.

ದೂರುದಾರರ ಪರವಾಗಿ ನ್ಯಾಯವಾದಿಗಳಾದ ಹರೀಶ್ ಕುಮಾರ್ ಬಳಕ್ಕ, ದೀಪಕ್ ಬೊಳುವಾರು, ಬಬಿತಾ ಬಂಗೇರಾ, ಅಕ್ಷತಾ ಬನಾರಿ ವಾದಿಸಿದ್ದರು.

''ಅಬ್ದುಲ್ ಬಶೀರ್ ಇಬ್ರಾಹಿಂ ಈ ಹಿಂದೆ ನಮ್ಮ ಪಕ್ಷದ ನಗರ ಅಧ್ಯಕ್ಷರಾಗಿರುವುದು ಹೌದು. ಆದರೆ ಅಧಿಕಾರ ಮುಗಿದ ಬಳಿಕ ಅವರು ನಮ್ಮ ಸಂಪರ್ಕದಲ್ಲಿ ಇರುವುದಿಲ್ಲ. ಅಲ್ಲದೆ ಪಕ್ಷದ ಯಾವುದೇ ಚಟುವಟಿಕೆಯಲ್ಲಿಯೂ ಭಾಗಿಯಾಗಿರುವುದಿಲ್ಲ. ಹಣ ವಂಚನೆ ಪ್ರಕರಣವು ಅವರ ವೈಯಕ್ತಿಕ ವಿಚಾರವಾಗಿದ್ದು, ಇದಕ್ಕೂ ಎಸ್‍ಡಿಪಿಐ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ''

- ಕೆ.ಎ. ಸಿದ್ದೀಕ್ ಪುತ್ತೂರು, ಸಂಘಟನಾ ಕಾರ್ಯದರ್ಶಿ,
​ಎಸ್‍ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News