ಸಮುದಾಯದ ಆತಂಕವನ್ನು ಸಚಿವರ ಗಮನಕ್ಕೆ ತಂದಿದ್ದೇನೆ: ಎನ್.ಕೆ. ಶಾಫಿ ಸಅದಿ
ಬೆಂಗಳೂರು, ಫೆ.4: ವಿದ್ಯಾರ್ಥಿನಿಯರ ಹಿಜಾಬ್‍ಗೆ ಸಂಬಂಧಿಸಿದಂತೆ ಕಳೆದ ಒಂದು ತಿಂಗಳಿನಿಂದ ಉಡುಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಹಾಗೂ ಈ ವಿಚಾರದಲ್ಲಿ ಸಮುದಾಯದಲ್ಲಿರುವ ಆತಂಕವನ್ನು ಶಿಕ್ಷಣ ಸಚಿವರ ಗಮನಕ್ಕೆ ತಂದಿದ್ದೇನೆ ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ತಿಳಿಸಿದರು.
ಶುಕ್ರವಾರ ಮುಖ್ಯಮಂತ್ರಿಯ ಗೃಹ ಕಚೇರಿ ಕೃಷ್ಣಾದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಜೊತೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಜಾಬ್ ವಿಚಾರ ತುಂಬಾ ಸಂಕೀರ್ಣತೆಗೆ ಹೋಗುತ್ತಿದೆ. ಉಡುಪಿ ಸರಕಾರಿ ಕಾಲೇಜಿನಲ್ಲಿ ಪ್ರಾರಂಭವಾದ ಹಿಜಾಬ್‍ಗೆ ಸಂಬಂಧಿಸಿದ ವಿವಾದ ಈಗ ರಾಜ್ಯದ ಹಲವಾರು ಕಾಲೇಜುಗಳಲ್ಲಿ ನಡೆದಿದೆ ಎಂದರು.
ಹಿಜಾಬ್ ಧರಿಸಿರುವುದರಿಂದ ನಮಗೆ ತರಗತಿ ಪ್ರವೇಶಿಸಲು ಅನುಮತಿ ನೀಡುತ್ತಿಲ್ಲ ಎಂದು ವಕ್ಫ್ ಬೋರ್ಡ್ ಅಧ್ಯಕ್ಷನಾಗಿರುವ ನನಗೆ ರಾಜ್ಯದ ವಿವಿಧ ಕಡೆಯಿಂದ ದೂರುಗಳು ಬರುತ್ತಿವೆ. ಆದುದರಿಂದ, ಇಂದು ಶಿಕ್ಷಣ ಸಚಿವರ ಜೊತೆ ಚರ್ಚೆ ನಡೆಸಿದ್ದೇನೆ. ರಾಜ್ಯ ಶಿಕ್ಷಣ ಕಾಯ್ದೆ ಹಾಗೂ ನಿಯಮಾವಳಿಯಂತೆ ಸರಕಾರ ಸುತ್ತೋಲೆ ಹೊರಡಿಸಿದೆ ಎಂದು ಸಚಿವರು ಹೇಳಿದ್ದಾರೆ. ಅಲ್ಲದೆ, ಮುಂಬೈ ಹಾಗೂ ಕೇರಳ ಹೈಕೋರ್ಟ್ ಮಾಡಿರುವ ಆದೇಶಗಳನ್ನು ತೋರಿಸಿದ್ದಾರೆ. ಈ ಬಗ್ಗೆ ಸಮುದಾಯದ ಬಾಂಧವರೊಂದಿಗೆ ನಾನು ಚರ್ಚೆ ಮಾಡುತ್ತೇನೆ ಎಂದು ಅವರು ಹೇಳಿದರು.
ವಿದ್ಯಾರ್ಥಿನಿಯರ ವಿದ್ಯಾಭ್ಯಾಸ ಕುಂಠಿತವಾಗಬಾರದು. ಅವರು ತರಗತಿಗಳಿಗೆ ಹೋಗಬೇಕು. ಮುಸ್ಲಿಮ್ ಸಮುದಾಯ ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿದೆ. ಹೆಣ್ಣು ಮಕ್ಕಳು ಇತ್ತೀಚೆಗೆ ಶಿಕ್ಷಣ ಪಡೆಯಲು ಮುಂದೆ ಬರುತ್ತಿದ್ದಾರೆ. ಎಲ್ಲ ಕಡೆ ಇಂತಹ ವ್ಯವಸ್ಥೆ ಇದ್ದರೆ ನಮಗೆ ತೊಂದರೆಯಾಗುತ್ತದೆ ಎಂದು ಸಚಿವರ ಗಮನಕ್ಕೆ ತಂದಿದ್ದೇನೆ. ಯಾವುದೆ ವಿದ್ಯಾರ್ಥಿನಿಯರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಶಾಫಿ ಸಅದಿ ತಿಳಿಸಿದರು.
ಸರಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಯಥಾಸ್ಥಿತಿ ಕಾಪಾಡುವಂತೆ ತಿಳಿಸಲಾಗಿದೆ. ಅದರಂತೆ, ಎಲ್ಲಿ ಮುಂಚೆ ಹಿಜಾಬ್ ಧರಿಸಿಕೊಂಡು ಬರುತ್ತಿರಲಿಲ್ಲವೋ ಅಲ್ಲಿ ಧರಿಸಬಾರದು. ಎಲ್ಲಿ ಧರಿಸಿಕೊಂಡು ಬರುತ್ತಿದ್ದರೋ ಅಲ್ಲಿ ಧರಿಸಿಕೊಂಡು ಬರಬಹುದು ಎಂದು ತಿಳಿಸಲಾಗಿದೆ. ಅದಕ್ಕೆ ವಿರುದ್ಧವಾಗಿ ಯಾವುದಾದರೂ ಕಾಲೇಜುಗಳು ವರ್ತಿಸಿದರೆ ಅವರ ವಿರುದ್ಧವು ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ ಎಂದು ಅವರು ಹೇಳಿದರು.
ಅಲ್ಲದೆ, ಈ ವಿವಾದ ಈಗ ಹೈಕೋರ್ಟ್ ಮೆಟ್ಟಿಲೇರಿದೆ. ಆದುದರಿಂದ, ಹೈಕೋರ್ಟ್ ನೀಡುವ ಆದೇಶಕ್ಕೆ ಬದ್ಧವಾಗಿರುವುದಾಗಿ ಶಿಕ್ಷಣ ಸಚಿವರು ತಿಳಿಸಿದ್ದಾರೆ. ಈ ವಿಚಾರ ಇಂತಹ ವಿವಾದ ಆಗಬಾರದಿತ್ತು. ನಾನು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಜೊತೆಯೂ ಈ ಬಗ್ಗೆ ಮಾತನಾಡುತ್ತೇನೆ ಎಂದು ಶಾಫಿ ಸಅದಿ ಹೇಳಿದರು.