×
Ad

ಬೆಂಗಳೂರು: ಮರಳಿ ಉದ್ಯೋಗ ನೀಡುವಂತೆ ಫೆ.7ರಂದು ಐಟಿಐ ಕಾರ್ಮಿಕರ ರ್‍ಯಾಲಿ

Update: 2022-02-04 22:09 IST

ಬೆಂಗಳೂರು, ಫೆ.4: ಐಟಿಐ ಆಡಳಿತ ಮಂಡಳಿಯು ಕೆಲಸದಿಂದ ವಜಾ ಮಾಡಲಾದ ಕಾರ್ಮಿಕರು ಫೆ.7ರಂದು ಮರಳಿ ಉದ್ಯೋಗ ನೀಡುವಂತೆ ಐಟಿಐ ಗೇಟ್ ಮುಂಭಾಗದಿಂದ ಐಟಿಐನ ಕಾರ್ಪೋರೇಟ್ ಕಚೇರಿಯವರೆಗೆ ರ್‍ಯಾಲಿ ನಡೆಸಲಾಗುವುದು ಎಂದು ಕರ್ನಾಟಕ ಜನರಲ್ ಲೇಬರ್ ಯೂನಿಯನ್‍ನ ವಕ್ತಾರ ಹಾಗೂ ಐಟಿಐ ಕಾರ್ಮಿಕ ಹೇಮಂತ್ ಕುಮಾರ್ ತಿಳಿಸಿದ್ದಾರೆ. 

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾದೇಶಿಕ ಕಾರ್ಮಿಕ ಆಯುಕ್ತರ ನಿರ್ದೇಶನವನ್ನು ಪಾಲಿಸದೆ, ಕಾರ್ಮಿಕ ಕಾಯ್ದೆಗಳನ್ನು ಗಾಳಿಗೆ ತೂರಿ, ಕೇಂದ್ರ ಸರಕಾರ ಒಡೆತನದ ಐಟಿಐ ಆಡಳಿತ ಮಂಡಳಿಯು 80 ಮಂದಿ ಕಾರ್ಮಿಕರಿಗೆ ಕೆಲಸವನ್ನು ಕಳೆದ ಡಿ.1 ರಿಂದ ನಿರಾಕರಿಸಿದೆ. ಇದನ್ನು ಖಂಡಿಸಿ ಕಳೆದ 66 ದಿನಗಳಿಂದ ಕಾರ್ಖಾನೆಯ ಮುಂಭಾಗ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದೇವೆ. ಆದರೆ ಆಡಳಿತ ಮಂಡಳಿ, ರಾಜ್ಯ ಸರಕಾರ ಸೇರಿದಂತೆ ಕೇಂದ್ರ ಸರಕಾರವು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದರು. 

ಕಾರ್ಮಿಕರಿಗೆ ಸಂಬಳ, ಪಿಎಫ್ ಬಾಕಿ ಪಾವತಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಆಡಳಿತ ಮಂಡಳಿಗೆ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಆಡಳಿತ ಮಂಡಳಿಯಿಂದ ಯಾವುದೇ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿಲ್ಲ. ಬದಲಾಗಿ ಕಾರ್ಮಿಕ ಕೋರ್ಟ್‍ಗೆ ಹೋಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂದು ಉಡಾಫೆ ಉತ್ತರ ನೀಡಿತ್ತು. ಹಾಗಾಗಿ ಪ್ರಕರಣವನ್ನು ಪ್ರಾದೇಶಿಕ ಕಾರ್ಮಿಕ ಆಯುಕ್ತರಿಗೆ ತಿಳಿಸಲಾಯಿತು. ಅವರು ಐಟಿಐ ಆಡಳಿತ ಮಂಡಳಿಗೆ ಸಂಬಳವನ್ನು ಪಾವತಿ ಮಾಡುವಂತೆ ನಿರ್ದೇಶನ ನೀಡಿ, ಕಾರ್ಮಿಕರಿಗೆ ನ್ಯಾಯ ಒದಗಿಸಿದರು. ಬಳಿಕ ಸಂಬಳವನ್ನು ನೀಡಿದ ಆಡಳಿತ ಮಂಡಳಿಯು, ಕಾರ್ಮಿಕ ಕಾಯ್ದೆಗಳನ್ನು ಉಲ್ಲಂಘಿಸಿ 80 ಜನ ಕಾರ್ಮಿಕರನ್ನು ವಜಾಗೊಳಿಸಿದೆ ಎಂದು ಅವರು ಮಾಹಿತಿ ನೀಡಿದರು. 

ವಜಾಗೊಂಡ 80 ಜನ ಕಾರ್ಮಿಕರು ಸ್ಥಳೀಯ ನಿವಾಸಿಗಳಾಗಿದ್ದಾರೆ. ಹಾಗಾಗಿ ಸ್ಥಳೀಯ ಶಾಸಕ ಬೈರತಿ ಬಸವರಾಜು ಗಮನಕ್ಕೆ ವಿಷಯವನ್ನು ತರಲಾಗಿದೆ. ಆದರೆ ಅವರು ಯಾವುದೇ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಯಾವುದೇ ಪೂರ್ವಭಾವಿ ನೋಟಿಸ್ ಜಾರಿ ಮಾಡದೆ, ಕಾರ್ಮಿಕರನ್ನು ಕೆಲಸದಿಂದ ತೆಗೆದಿರುವುದರಿಂದ ಕಾರ್ಮಿಕರ ಕುಟುಂಬಗಳು ಬೀದಿಪಾಲಾಗಿವೆ. ಆದುದರಿಂದ ಮರಳಿ ಕೆಲಸ ನೀಡುವಂತೆ ಕಾರ್ಮಿಕರು ಕಳೆದ ಎರಡು ದಿನಗಳಿಂದ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ ಎಂದು ಅವರು ತಿಳಿಸಿದರು. 

ಕೇಂದ್ರ ಸರಕಾರವು ವರ್ಷಕ್ಕೆ 60 ಲಕ್ಷ ಉದ್ಯೋಗವನ್ನು ಸೃಷ್ಟಿ ಮಾಡಲಾಗುತ್ತದೆ ಎಂದು ಹೇಳುತ್ತದೆ. ಮತ್ತೊಂದೆಡೆ ಕೇಂದ್ರ ಸರಕಾರದ ಅಧೀನದಲ್ಲಿರುವ ಐಟಿಐ ಕಾರ್ಮಿಕರಿಗೆ ಕೆಲಸವನ್ನು ನಿರಾಕರಿಸಲಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಕಾರ್ಮಿಕ ವಿರೋಧಿ ದೋರಣೆಯನ್ನು ಹೊಂದಿರುವುದರಿಂದ ಇಂತಹ ಸಂಕಷ್ಟಗಳು ಕಾರ್ಮಿಕರಿಗೆ ಬರುತ್ತಿವೆ. ಮೂರು ದಶಕಗಳಿಂದ ಕೆಲಸ ಮಾಡುತ್ತಿದ್ದ ಐಟಿಐ ಕಾರ್ಮಿಕರನ್ನು ಪುನಾಃ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ವಿರೋಧ ಪಕ್ಷಗಳು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಆಡಳಿತ ಮಂಡಳಿಯ ಮನವೊಲಿಸಬೇಕು.

-ಅಪ್ಪಣ್ಣ, ರಾಜ್ಯ ಕಾರ್ಯದರ್ಶಿ, ಎಐಸಿಸಿಟಿಯು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News