ಹಿಜಾಬ್ ವಿವಾದವನ್ನು ಸರಕಾರ ನ್ಯಾಯಯುತವಾಗಿ ಬಗೆಹರಿಸಲಿ: ಕರ್ನಾಟಕ ಮುಸ್ಲಿಂ ಜಮಾಅತ್

Update: 2022-02-05 04:39 GMT

ಬೆಂಗಳೂರು, ಫೆ.5: ರಾಜ್ಯದ ಉಡುಪಿ, ಕುಂದಾಪುರದ ಕಾಲೇಜುಗಳಲ್ಲಿ ಇತ್ತೀಚಿಗೆ ಉದ್ಭವಿಸಿದ ಹಿಜಾಬ್ ವಿವಾದವು ಸಮಾಜವನ್ನು ಧರ್ಮದ ಹೆಸರಿನಲ್ಲಿ ಒಡೆದು ತಮ್ಮ ಪಕ್ಷಗಳ ಮತಗಳನ್ನು ಭದ್ರಪಡಿಸುವ ರಾಜಕೀಯ ಷಡ್ಯಂತ್ರವಾಗಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಆತಂಕ ವ್ಯಕ್ತಪಡಿಸಿದೆ.

ಸಮಸ್ಯೆ ಯನ್ನು ಬಗೆಹರಿಸಲು ಪ್ರಯತ್ನಿಸುವ ಬದಲು ಅದನ್ನು ದೊಡ್ಡಮಟ್ಟದಲ್ಲಿ ತಲುಪಿಸಿ ರಾಜಕೀಯ ಲಾಭ ಗಳಿಸುವ ಪ್ರಯತ್ನ ಹಿಜಾಬ್ ವಿವಾದದಲ್ಲಿ ನಡೆದಿದೆ. ಈ ರೀತಿಯ ಸಮಾಜ ವಿಭಜನೆಯ ಪ್ರಯತ್ನ ಅತ್ಯಂತ ಖಂಡನೀಯವಾಗಿದೆ. ಭಾರತದ ಸಂವಿಧಾನದ ಮೇಲೆ ನಂಬಿಕೆ ಇಟ್ಟು ಅಸ್ತಿತ್ವಕ್ಕೆ ಬಂದಿರುವ ಸರಕಾರ  ಈ ರೀತಿಯ ವಿವಾದಗಳಿಗೆ ಅವಕಾಶ ನೀಡಬಾರದು. ಸರಕಾರದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆ ಯೊಂದಿಗೆ ಸಬ್ ಕಾ ವಿಶ್ವಾಸ್ ಎನ್ನುವ ಪದವು ಒಳಗೊಂಡಿದ್ದು,  ಭಾರತದಲ್ಲಿ ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ಪಡೆಯಲು ಹಾಗೂ ಅನುಭವಿಸಲು ಅವಕಾಶವನ್ನು ನೀಡಿ ಅನ್ಯಾಯಕ್ಕೆ ಒಳಗಾಗುವ ವಿಭಾಗಕ್ಕೆ ನ್ಯಾಯವನ್ನು ನೀಡುವ ವಿಶ್ವಾಸವನ್ನು ಮೂಡಿಸುವ ಪ್ರಯತ್ನವನ್ನು ಸರಕಾರ ಮಾಡಬೇಕೆಂದು  ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಮೌಲಾನ ಮುಫ್ತಿ ಅನ್ವರ್ ಆಲಿ ಸಾಹೇಬ್  ಆಗ್ರಹಿಸಿದ್ದಾರೆ.

ರಾಜ್ಯದ ವಿವಿಧ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳಾದ ಭಜನೆ, ಶಾರಾದೋತ್ಸವ ಹಾಗೂ ಇತರ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿದ್ದರೂ ಅದರ ವಿರುದ್ಧ ಯಾವುದೇ ರೀತಿಯ ಹೋರಾಟ, ಒತ್ತಾಯ, ಪ್ರತಿಭಟನೆಗಳನ್ನು ಮುಸ್ಲಿಂ ಸಮುದಾಯ ನಡೆಸಿಲ್ಲ. ಆದರೆ ಕೆಲವರು ,ವ್ಯಕ್ತಿಗಳಿಗೆ ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಪ್ರಯತ್ನಿಸುವವಾಗ ಸರಕಾರ ಅವರ ಪರವಾಗಿ ನಿಲ್ಲದೆ ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆಗೆ ಮುಂದಾಗಬೇಕಾಗಿದೆ. ಸರಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಅನಗತ್ಯ ಹೇಳಿಕೆಗಳ ಮೂಲಕ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸುವುದನ್ನು ನಿಲ್ಲಿಸಬೇಕು. ತಮ್ಮ ಪಕ್ಷಗಳನ್ನು  ಬೆಳೆಸಲು ಮತ್ತು ತಮ್ಮ ಮತಗಳನ್ನು ಭದ್ರಪಡಿಸುವ ರಾಜಕೀಯವನ್ನು ಎಲ್ಲಾ ಪಕ್ಷಗಳು ಕೊನೆಗೊಳಿಸಿ ಸಮಾಜದ ಶಾಂತಿಯನ್ನು ಕಾಪಾಡಬೇಕು. ಈ ಬಗ್ಗೆ  ರಾಜ್ಯದ ಮುಖ್ಯಮಂತ್ರಿ, ಸಚಿವರು, ವಿರೋಧ ಪಕ್ಷಗಳ ನಾಯಕರನ್ನು ಕರ್ನಾಟಕ ಮುಸ್ಲಿಂ ಜಮಾಅತ್ ನಿಯೋಗ ಭೇಟಿ ಮಾಡಿ ವಿವಾದದ ಸೂಕ್ತ ಪರಿಹಾರಕ್ಕೆ ಆಗ್ರಹಿಸಲಿದೆ ಎಂದು ಮುಫ್ತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News