"ತಾಲಿಬಾನ್ ಆಗಲು ಬಿಡಲ್ಲ ಎನ್ನುವವರಿಗೆ ಅಫ್ಘಾನಿಸ್ತಾನಕ್ಕೆ 200 ಕೋ.ರೂ. ನೀಡುವ ಕೇಂದ್ರದ ಪ್ರಸ್ತಾಪದ ಮಾಹಿತಿ ಇಲ್ಲವೇ?

Update: 2022-02-05 08:20 GMT

ಬೆಂಗಳೂರು, ಫೆ.5: ಕರ್ನಾಟಕವನ್ನು ತಾಲಿಬಾನ್ ಆಗಲು ಬಿಡುವುದಿಲ್ಲ ಎಂದು ತಮಾಷೆಯಾಗಿ ಮಾತನಾಡುತ್ತಿರುವ ಸಚಿವ ಸುನೀಲ್ ಕುಮಾರ್ ಅವರಿಗೆ ಕೇಂದ್ರದಲ್ಲಿರುವ ತಮ್ಮದೇ ಪಕ್ಷದ ಸರಕಾರವು ತಾಲಿಬಾನಿ ಆಡಳಿತದ ಅಫ್ಘಾನಿಸ್ತಾನಕ್ಕೆ 200 ಕೋಟಿ ರೂಪಾಯಿಗಳನ್ನು ನೀಡುವ ಪ್ರಸ್ತಾಪ ಮಾಡಿರುವ ಬಗ್ಗೆ ಮಾಹಿತಿ ಇಲ್ಲವೇ ಎಂದು ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಡಾ.ಎಚ್.ಸಿ.ಮಹದೇವಪ್ಪ, ನಾನು ಯಾವಾಗಲೂ ಹೇಳುವಂತೆ ಬಿಜೆಪಿಗರು ತಾವು ಏನನ್ನು ಹೇಳುತ್ತಾರೋ ಅದಕ್ಕೆ ವಿರುದ್ಧವಾದ ಕೆಲಸವನ್ನೇ ಮಾಡುತ್ತಾರೆ. ಉದಾಹರಣೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಎಂದು ಹೇಳಿ ವಿಪರೀತ ನಿರುದ್ಯೋಗ ಸೃಷ್ಟಿಸಿದರು. ಅಚ್ಚೇದಿನ್ ಎಂದು ಭಾರತವನ್ನು ಹಸಿವಿನ ರಾಷ್ಟ್ರವನ್ನಾಗಿಸಿದರು. ಡಾಲರ್ ಬೆಲೆ ಇಳಿಸುತ್ತೇವೆ ಎಂದು, ಡಾಲರ್ ಎದುರು ರೂಪಾಯಿ ಮೌಲ್ಯವು ಕುಸಿಯುವಂತೆ ಮಾಡಿದರು. ಬೇಟಿ ಬಚಾವ್ ಎಂದು ಹೇಳಿ, ಮಹಿಳೆಯರ ರಕ್ಷಣೆ ಮಾಡಲು ವಿಫಲವಾದರು. ಇದೀಗ ತಾಲಿಬಾನ್, ಪಾಕಿಸ್ತಾನ್ ಎನ್ನುತ್ತಾ ತಾಲಿಬಾನಿಗಳ ಆಡಳಿತವಿರುವ ಅಫ್ಘಾನಿಸ್ತಾನಕ್ಕೆ ಕೋಟಿಗಟ್ಟಲೇ ಸಹಾಯ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.

ಅಚ್ಚರಿ ಎಂದರೆ ಯಾವೊಬ್ಬ ಹಿಂದುತ್ವದ ಪ್ರತಿಪಾದಕನೂ ಸಹ ಈ ಬಗ್ಗೆ ಪ್ರಶ್ನಿಸಿಲ್ಲ ಎಂದರೆ ಅವರ ಉದ್ದೇಶ ಏನು ಮತ್ತು ಅವರ ಬೆಂಬಲ ಯಾರ ಪರವಾಗಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಬಿಜೆಪಿಗರು ಏನು ಹೇಳುತ್ತಾರೋ ನಾವು ಅದಕ್ಕೆ ವಿರುದ್ಧವಾಗಿ ಯೋಚಿಸಿದರೆ ಅದೇ ಅವರ ನಿಜ ಸ್ವರೂಪವಾಗಿರುತ್ತದೆ ಎಂಬ ಸಂಗತಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕು ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News