ಬೆಂಗಳೂರು: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆ ಪ್ರಕರಣ: ಇಬ್ಬರ ಬಂಧನ

Update: 2022-02-05 11:54 GMT
photo: @DCPWestBCP

ಬೆಂಗಳೂರು, ಫೆ.5: ರೈಸ್ ಪುಲ್ಲಿಂಗ್ ಹೆಸರಿನಲ್ಲಿ 78 ಲಕ್ಷ ರೂ.ಗಳನ್ನು ಪಡೆದು ವಂಚನೆ ನಡೆಸಿದ್ದ ಆರೋಪದಡಿ ಇಬ್ಬರನ್ನು ಇಲ್ಲಿನ ಬ್ಯಾಟರಾಯನಪುರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಾಗರಭಾವಿಯ ಡಿ ಗ್ರೂಪ್ ಲೇಔಟ್‍ನ ವಿಘ್ನೇಶ್(37), ಮುಳಬಾಗಿಲು ತಾಲೂಕಿನ ಚೆಂಗಲ್ ರಾಯಪ್ಪ(45) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ. ಸಂಜೀವ್‍ಪಾಟೀಲ್ ತಿಳಿಸಿದ್ದಾರೆ. 

ಆರೋಪಿಗಳು ಕಳೆದ ಜ.3 ರಂದು ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್‍ನಿಲ್ದಾಣದ ಬಳಿ ನಿತಿನ್‍ರಾಜ್ ಹಾಗೂ ಗೋಪಿ ಕಾರ್ತಿಕ್ ಎಂಬುವರಿಗೆ ರೈಸ್ ಪುಲ್ಲಿಂಗ್ ಹೆಸರಿನಲ್ಲಿ ಸಿಡಿಲು ಬಡಿದ ಅದೃಷ್ಟದ ಚೆಂಬು ಎಂದು ತೋರಿಸಿದ್ದಾರೆ. ಈ ಚೆಂಬಿನಲ್ಲಿ ಐಸೋಟೋಪೊ ರೇಡಿಯೇಷನ್ ಎಂದು ಅಮೆರಿಕದ ನಾಸಾ, ಜಪಾನಿನ ಜಾಕ್ಸಾ ಕಂಪೆನಿಯವರಿಗೆ ಮಾರಾಟ ಮಾಡುತ್ತಿದ್ದೇವೆ. 

ಈ ಯೋಜನೆಯಲ್ಲಿ 1 ಕೋಟಿ ರೂ.ಗಳ ಹೂಡಿಕೆ ಮಾಡಿದರೆ, ಒಂದಕ್ಕೆ 5 ಕೋಟಿ ರೂ. ಹಣವನ್ನು ನೀಡುವುದಾಗಿ ನಂಬಿಸಿ 78 ಲಕ್ಷ 89 ಸಾವಿರ ಹಣವನ್ನು ಪಡೆದುಕೊಂಡಿದ್ದರು. ಬಳಿಕ ಹಲವು ದಿನಗಳಾದರೂ ಹಣ ವಾಪಸ್ ಕೊಡದೆ ತಲೆಮರೆಸಿಕೊಂಡಿದ್ದು, ಈ ಸಂಬಂಧ ದೂರು ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳಿಂದ 15 ಲಕ್ಷ ನಗದು ವಶಪಡಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿಗಳು ಉಳಿದ ಹಣಕ್ಕಾಗಿ ಶೋಧ ನಡೆಸಲಾಗಿದೆ ಎಂದು ಡಿಸಿಪಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News