ರಾಜ್ಯ ವಕ್ಫ್ ಮಂಡಳಿಗೆ 665 ಕೋಟಿ ರೂ.ಮೀಸಲಿಡುವಂತೆ ಮನವಿ ಸಲ್ಲಿಕೆ: ಶಾಫಿ ಸಅದಿ

Update: 2022-02-05 13:31 GMT

ಬೆಂಗಳೂರು, ಫೆ.5: 2022-23ನೆ ಸಾಲಿನ ಬಜೆಟ್‍ನಲ್ಲಿ ರಾಜ್ಯ ವಕ್ಫ್ ಮಂಡಳಿಗೆ 665 ಕೋಟಿ ರೂ.ಗಳ ಅನುದಾನವನ್ನು ಮೀಸಲಿಡುವಂತೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ತಿಳಿಸಿದರು.

ವಿಕಾಸಸೌಧಲ್ಲಿ ಮುಜುರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆಯವರನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ಮಾಡಿ ವಕ್ಫ್ ಮಂಡಳಿಯ ವಿವಿಧ ಕಾರ್ಯಗಳಿಗೆ ಅಗತ್ಯವಿರುವ ಅನುದಾನದ ವಿವರಗಳನ್ನೊಳಗೊಂಡ ಮನವಿಯನ್ನು ಅವರು ಸಲ್ಲಿಸಿದರು.

ಸರಕಾರಕ್ಕೆ ಸಲ್ಲಿಕೆ ಮಾಡಿರುವ ಬೇಡಿಕೆಗಳ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಶಾಫಿ ಸಅದಿ, ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ವಕ್ಫ್ ಮಂಡಳಿಗೆ ಅಗತ್ಯವಿರುವ ಅನುದಾನ ಲಭ್ಯವಾಗಿಲ್ಲ. ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ ನಾವು ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ. ಸಚಿವರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಬಗ್ಗೆ ಮುಖ್ಯಮಂತ್ರಿಯ ಗಮನ ಸೆಳೆಯುವುದಾಗಿ ಭರವಸೆ ನೀಡಿದ್ದಾರೆ ಎಂದರು.

ರಾಜ್ಯದಲ್ಲಿ 43,337 ವಕ್ಫ್ ಸಂಸ್ಥೆಗಳಿವೆ. ಇವುಗಳ ಅಭಿವೃದ್ಧಿ ಮತ್ತು ಆಸ್ತಿ ರಕ್ಷಣೆ ಮತ್ತು ಆಧುನೀಕರಣಕ್ಕಾಗಿ ಸರಕಾರದಿಂದ 165 ಕೋಟಿ ರೂ.ಗಳ ಅನುದಾನವನ್ನು ಮಂಡಳಿಯು ಕೋರಿದೆ. ಬೆಂಗಳೂರಿನಲ್ಲಿರುವ ಹಜ್ ಭವನದ ಮಾದರಿಯಲ್ಲಿ ವಕ್ಫ್ ಭವನ ನಿರ್ಮಾಣಕ್ಕೆ 50 ಕೋಟಿ ರೂ., ಜಿಲ್ಲೆಗಳಲ್ಲಿ ವಕ್ಫ್ ಭವನ ನಿರ್ಮಾಣಕ್ಕೆ 44 ಕೋಟಿ ರೂ. ಒದಗಿಸುವಂತೆ ಕೋರಲಾಗಿದೆ ಎಂದು ಅವರು ಹೇಳಿದರು.

ಇಮಾಮ್ ಮತ್ತು ಮುಅದ್ದೀನ್‍ಗಳಿಗೆ ಗೌರವ ಧನ ನೀಡಲು 55 ಕೋಟಿ ರೂ.ನೀಡುವಂತೆ ಕೋರಲಾಗಿದೆ. ಅಲ್ಲದೆ, ಈ ಗೌರವ ಧನಕ್ಕೆ ಮೀಸಲಿಡುವ ಮೊತ್ತವನ್ನು 100 ಕೋಟಿ ರೂ.ಗಳಿಗೆ ಹೆಚ್ಚಿಸಿದಲ್ಲಿ 10,370 ಮಂದಿಗೆ ಗೌರವ ಧನ ನೀಡಬಹುದು. ರಾಜ್ಯದಲ್ಲಿ ಒಟ್ಟು 1679 ಈದ್ಗಾ ಮತ್ತು 5765 ಸ್ಮಶಾನಗಳಿದ್ದು ಅದರಲ್ಲಿ 4475 ಸ್ಮಶಾನಗಳು ಮತ್ತು ಈದ್ಗಾಗಳಿಗೆ ಭದ್ರತೆಯಿಲ್ಲ. ಆದುದರಿಂದ, ಸ್ಮಶಾನಗಳಿಗೆ ಬೇಲಿ ಹಾಕಲು 44 ಕೋಟಿ ರೂ.ನೀಡಬೇಕು ಎಂದು ಮನವಿ ಸಲ್ಲಿಸಲಾಗಿದೆ ಎಂದು ಶಾಫಿ ಸಅದಿ ತಿಳಿಸಿದರು.

ರಾಜ್ಯದಲ್ಲಿ ವಕ್ಫ್ ಟ್ರಿಬ್ಯೂನಲ್ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ವಕ್ಫ್ ಕಾಯಿದೆಯ ಪ್ರಕಾರ ನಾಲ್ಕು ವಿಭಾಗಗಳಲ್ಲಿ ವಕ್ಫ್ ನ್ಯಾಯಮಂಡಳಿಗಳನ್ನು ಸ್ಥಾಪಿಸಬೇಕು ಮತ್ತು ಅದಕ್ಕೆ ಸದಸ್ಯರನ್ನು ನಾಮನಿರ್ದೇಶನ ಮಾಡಬೇಕು. ಅಲ್ಲದೆ, ಈ ನ್ಯಾಯ ಮಂಡಳಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಅನುದಾನ ನೀಡುವಂತೆ ಕೋರಲಾಗಿದೆ ಎಂದು ಅವರು ಹೇಳಿದರು.

ಪ್ರಸಕ್ತ ಸಾಲಿನಲ್ಲಿ ವಕ್ಫ್ ಮಂಡಳಿಗೆ ರಾಜ್ಯ ಸರಕಾರವು 95 ಕೋಟಿ ರೂ.ಗಳನ್ನು ಒದಗಿಸಿದೆ. ಮುಂದಿನ ಬಜೆಟ್‍ನಲ್ಲಿ 500 ಕೋಟಿ ರೂ. ಸಿಗುವ ನಿರೀಕ್ಷೆಯಿದೆ ಎಂದು ಶಾಫಿ ಸಅದಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News