ಫೆ.10ರಿಂದ ಮಾ.6ರವರೆಗೆ ಉಳ್ಳಾಲ ದರ್ಗಾ ಉರೂಸ್: ಹಾಜಿ ಅಬ್ದುಲ್ ರಶೀದ್

Update: 2022-02-05 13:39 GMT

ಬೆಂಗಳೂರು, ಫೆ.5: ಮಂಗಳೂರಿನ ಉಳ್ಳಾಲದಲ್ಲಿರುವ ಹಝ್ರತ್ ಅಸ್ಸಯ್ಯದ್ ಮುಹಮ್ಮದ್ ಶರೀಫುಲ್ ಮದನಿ ತಂಙಳ್‌ರವರ ದರ್ಗಾದ ಉರೂಸ್ ಕಾರ್ಯಕ್ರಮವನ್ನು ಫೆ.10 ರಿಂದ ಮಾ.6ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಸಲು ನಿರ್ಧರಿಸಲಾಗಿದೆ ಎಂದು ದರ್ಗಾ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ತಿಳಿಸಿದರು.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪರಂಪರೆಯಂತೆ ಐದು ವರ್ಷಕ್ಕೊಮ್ಮೆ ದರ್ಗಾದಲ್ಲಿ ಉರೂಸ್ ನಡೆಸಲಾಗುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ 2020ರಲ್ಲಿ ನಡೆಸಬೇಕಾದ ಉರೂಸ್ ಅನ್ನು 2021ರ ಡಿ.23ರಿಂದ 2022ರ ಜ.16ರವರೆಗೆ ನಡೆಸಲು ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು ಎಂದರು.

ಸುಮಾರು 1.50 ಕೋಟಿ ರೂ.ವೆಚ್ಚ ಮಾಡಿ ದರ್ಗಾದ ಆವರಣದಲ್ಲಿ ದೀಪದ ವ್ಯವಸ್ಥೆ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಆದರೆ, ಸರಕಾರದ ಆದೇಶದ ಹಿನ್ನೆಲೆಯಲ್ಲಿ ಆಗ ಈ ಕಾರ್ಯಕ್ರಮ ನಡೆಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಫೆ.10 ರಿಂದ ಮಾ.6ರವರೆಗೆ ವಿಜೃಂಭಣೆಯಿಂದ ಉರೂಸ್ ಕಾರ್ಯಕ್ರಮ ನಡೆಸಲು ಸಮಿತಿಯವರು ತೀರ್ಮಾನಿಸಿದ್ದೆವೆ ಎಂದು ಹಾಜಿ ಅಬ್ದುಲ್ ರಶೀದ್ ತಿಳಿಸಿದರು.

ರಾಜ್ಯದ ಜನರು ಈ ಉಳ್ಳಾಲ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಮಾ.5ರಂದು ರಾತ್ರಿ ಸಂದಲ್ ಕಾರ್ಯಕ್ರಮ ಇದೆ. ಫೆ.10 ರಿಂದ ಮಾ.5ರವರೆಗೆ ಪ್ರತಿದಿನ ರಾತ್ರಿ ರಾಜ್ಯ ಮತ್ತು ಕೇರಳದ ವಿದ್ವಾಂಸದಿಂದ ಮತಪ್ರವಚನ ಕಾರ್ಯಕ್ರಮ ಇದೆ. ಬೃಹತ್ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಸೌಹಾರ್ದ ಸಮ್ಮೇಳನಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

ಎರಡು ದಿನದ ಅನ್ನದಾನ ಕಾರ್ಯಕ್ರಮ ಇರುತ್ತದೆ. ಅದರಲ್ಲಿ ಸುಮಾರು 35 ಸಾವಿರ ಕೆಜಿ ತುಪ್ಪದ ಅನ್ನ, 1500 ಕುರಿ/ಮೇಕೆಗಳು ಇದಕ್ಕೆ ಬಳಕೆಯಾಗಲಿವೆ. ಉರೂಸ್ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಪರಿಷತ್ ಸದಸ್ಯರಾದ ನಸೀರ್ ಅಹ್ಮದ್, ಬಿ.ಎಂ.ಫಾರೂಕ್, ರಾಜ್ಯಸಭಾ ಸದಸ್ಯ ಡಾ.ಸೈಯ್ಯದ್ ನಾಸೀರ್ ಹುಸೇನ್, ಉಳ್ಳಾಲ ಶಾಸಕ ಯು.ಟಿ.ಖಾದರ್, ಝಮೀರ್ ಅಹ್ಮದ್ ಖಾನ್, ಸಚಿವರಾದ ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್ ಸೇರಿದಂತೆ ಇನ್ನಿತರರನ್ನು ಆಹ್ವಾನಿಸಲಾಗಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಸೂಫಿ ಸಂತರ ಸಂಘದ ಅಧ್ಯಕ್ಷ ಸೂಫಿ ವಲಿಬಾ, ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಸುಹೇಲ್ ಅಹ್ಮದ್, ಮುಖಂಡ ಯು.ಟಿ.ಝುಲ್ಫೀಖಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News