ರಾಮನಗರ: `ಟೊಯೋಟಾಗೆ ಭೂಮಿ ನೀಡಿದ ರೈತರಿಗೆ 20 ವರ್ಷಗಳಾದರೂ ಪರಿಹಾರ ನೀಡದ ಕೆಐಎಡಿಬಿ
ಬೆಂಗಳೂರು, ಫೆ. 5: `ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಟೊಯೋಟ ಕಾರ್ಖಾನೆಗಾಗಿ ಶಾನಮಂಗಳ, ಬಾನಂದೂರು, ಅಬ್ಬಿನಕುಂಟೆ ಗ್ರಾಮಗಳಲ್ಲಿ 500 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರು ಇದಕ್ಕೆ ಪರಿಹಾರ ಪಡೆಯಲು 20 ವರ್ಷಗಳಿಂದ ಕೆಐಎಡಿಬಿ ಕಚೇರಿಗೆ ಅಲೆದು, ಅಲೆದು ಬಸವಳಿದಿದ್ದು, ಇನ್ನೂ ಪರಿಹಾರ ರೈತರಿಗೆ ಮರೀಚಿಕೆಯಾಗಿಯೇ ಇದೆ.
ಪರಿಹಾರ ನೀಡುವಂತೆ ರಾಮನಗರ ಜಿಲ್ಲಾ ನ್ಯಾಯಾಲಯ, ಹೈಕೋರ್ಟ್, ಸುಪ್ರೀಂ ಕೋರ್ಟ್ ನೀಡಿದ ಆದೇಶಗಳಿಗೆ ಕೆಐಎಡಿಬಿ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ರೈತರ ಮನವಿಗೆ ಬೆಲೆ ನೀಡುತ್ತಿಲ್ಲ. ಇದರಿಂದಾಗಿ ಭೂಮಿ ಕಳೆದುಕೊಂಡ ರೈತರು ಕೆಐಎಡಿಬಿ ಕಚೇರಿಗೆ ಅಲೆದು ಚಪ್ಪಲಿ ಸವೆಸಿದ್ದು, ಪರಿಹಾರದ ವಿಶ್ವಾಸವನ್ನೇ ಕಳೆದುಕೊಂಡಿದ್ದು, ತಲೆ ಮೇಲೆ ಕೈಹೊತ್ತು ಕೂತಿದ್ದಾರೆ.
ಬಹುತೇಕ ರೈತರಿಗೆ ವಯಸ್ಸಾಗಿದ್ದು, ಕೆಲ ರೈತರು ಮರಣ ಹೊಂದಿದ್ದಾರೆ. ಬದುಕುಳಿದವರು ಸಂಧ್ಯಾ ಕಾಲದಲ್ಲಾದರೂ ಪರಿಹಾರ ಸಿಗಲಿ ಎಂಬ ಆಸೆ ಕಂಗಳಿಂದ ಕಾಯುತ್ತಿದ್ದಾರೆ. ಇಂದಲ್ಲಾ ನಾಳೆ ಪರಿಹಾರ ದೊರೆಯಬಹುದು ಎನ್ನುವ ನಿರೀಕ್ಷೆಯಿಂದ ಚಾತಕ ಪಕ್ಷಿಗಳಂತೆ ಈ ರೈತರು ಕಾಯುತ್ತಿದ್ದಾರೆ. ಈ ಕೃಷಿಕರ ಗೋಳು ತಬರನ ಕಥೆಯಂತಾಗಿದೆ. 1998ರಲ್ಲಿ ಟೊಯೋಟ ಕಾರ್ಖಾನೆಗಾಗಿ ಈ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡ ಕೃಷಿ ಭೂಮಿಗೆ ಕೆಐಎಡಿಬಿ ಪರಿಹಾರ ಬಿಡುಗಡೆ ಮಾಡಿದೆ. ಆದರೆ, ಎ ಖರಾಬು ಭೂಮಿಗೆ ಈವರೆಗೆ ನಯಾ ಪೈಸೆ ಪರಿಹಾರ ದೊರೆತಿಲ್ಲ. ಎ ಖರಾಬು ಭೂಮಿ ಸರಕಾರಕ್ಕೆ ಸೇರಿದ್ದು ಎಂದು ರೈತರನ್ನು ಕೆಐಎಡಿಬಿ ದಾರಿ ತಪ್ಪಿಸಿತ್ತು.
ಕೆಐಎಡಿಬಿ ವರ್ತನೆಯಿಂದ ರೋಸಿ ಹೋದ ಸುಮಾರು 50 ಮಂದಿ, ಸಣ್ಣ, ಅತಿ ಸಣ್ಣ ರೈತರ ಗುಂಪು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದಾಗ ಎ ಖರಾಬು ಭೂಮಿ ಸರಕಾರದ್ದಲ್ಲ, ಇದು ಭೂ ಮಾಲಕರಿಗೆ ಸೇರುತ್ತದೆ. ಹೀಗಾಗಿ ಪರಿಹಾರ ನೀಡುವಂತೆ 2003 ರ ಆಗಸ್ಟ್ 26 ರಂದು ರೈತರ ಮನವಿಯನ್ನು ಪುರಸ್ಕರಿಸಿ ಆದೇಶಿಸಿತು. ಇದೇ ಕಾಲಕ್ಕೆ ಪ್ರಕರಣವನ್ನು ರಾಮನಗರ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿ ಭೂ ಮಾಲಕತ್ವದ ನೈಜತೆಯನ್ನು ಪರಿಶೀಲಿಸಿ ಖರಾಬು ಭೂಮಿ ಹೊಂದಿದವರಿಗೆ ಪರಿಹಾರ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತು. ಆದರೆ ರಾಮನಗರ ನ್ಯಾಯಾಲಯವೂ ಭೂ ಮಾಲಕರ ನೈಜತೆಯನ್ನು ಪರಿಗಣಿಸಿ ಆದೇಶ ಜಾರಿ ಮಾಡಲು ಸುದೀರ್ಘ 10 ವರ್ಷ ತೆಗೆದುಕೊಂಡಿತು. 2013ರಲ್ಲಿ ಸರಕಾರದ ನಿಯಮಾವಳಿಗಳಂತೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಕೆಐಎಡಿಬಿಗೆ ಆದೇಶ ನೀಡಿತು.
ಆದರೆ, ಇದನ್ನು ಪ್ರಶ್ನಿಸಿ ಕೆಐಎಡಿಬಿ ಹೈಕೋರ್ಟ್, ತರುವಾಯ ಸುಪ್ರೀಂ ಕೋರ್ಟ್ ಮೊರೆ ಹೋಯಿತು. ಆದರೆ ಈ ಮೇಲ್ಮನವಿ ಸಂದರ್ಭದಲ್ಲಿ ರಾಮನಗರ ನ್ಯಾಯಾಲಯ ನೀಡಿರುವ ಆದೇಶ ಕ್ರಮಬದ್ಧವಾಗಿದೆ. ತಕ್ಷಣವೇ ಪರಿಹಾರ ನೀಡುವಂತೆ ಆದೇಶಿಸಿತು. ಕೆಐಎಡಿಬಿ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಮನಗರ ನ್ಯಾಯಾಲಯ ಕೆಐಎಡಿಬಿಯನ್ನೇ ಅಟ್ಯಾಚ್‍ಮೆಂಟ್ ಮಾಡುವಂತೆ ಮತ್ತೊಂದು ಆದೇಶ ಹೊರಡಿಸಿತು. ಇಷ್ಟಾದರೂ ಕೆಐಎಡಿಬಿ ಅಧಿಕಾರಿಗಳು ಪರಿಹಾರ ನೀಡಲು ಇನ್ನೂ ಮೀನಾ ಮೇಷ ಎಣಿಸುತ್ತಿದ್ದಾರೆ.
ಟೊಯೋಟಾ ಕಂಪೆನಿಗಾಗಿ ಭೂಮಿ ಕಳೆದುಕೊಂಡ ರೈತರೇನು ದೊಡ್ಡ ರೈತರಲ್ಲ. ಹತ್ತು ಗುಂಟೆ, ಇಪ್ಪತ್ತು ಗುಂಟೆ, ಒಂದು, ಎರಡು ಎಕರೆ ಭೂಮಿ ಹೊಂದಿರುವ ಸಣ್ಣ, ಅತಿ ಸಣ್ಣ ಹಿಡುವಳಿ ಹೊಂದಿದ್ದ ರೈತರು. ಕೆಐಎಡಿಬಿ ಈ ಭೂಮಿ ಟೊಯೋಟಾಗೆ ಹಸ್ತಾಂತರವಾಗಿದ್ದು, ಆ ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆ ಯಶಸ್ವಿಯಾಗಿ ನಡೆಯುತ್ತಿದೆ. ಆದರೆ, ಕೈಗಾರಿಕಾಭಿವೃದ್ಧಿಗಾಗಿ ಭೂಮಿ ನೀಡಿದ ರೈತರು ಮಾತ್ರ ಇನ್ನೂ ಸಂಕಷ್ಟದಲ್ಲಿಯೇ ಬದುಕು ದೂಡುವಂತಹ ದುಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ.
`ಕೆಐಎಡಿಬಿ ನಮ್ಮ `ಎ ಖರಾಬು' ಭೂಮಿಗೆ ಸರಕಾರದ ಮಾರ್ಗಸೂಚಿಯಂತೆ ಪರಿಹಾರವನ್ನಷ್ಟೇ ಅಲ್ಲ, ನ್ಯಾಯಾಲಯದ ಆದೇಶದಂತೆ ನಮಗೆ ಬಡ್ಡಿ ಸಮೇತ ಪರಿಹಾರ ಮೊತ್ತವನ್ನು ಪಾವತಿಸಬೇಕು. ಹೀಗಾಗಿ ಆ ನಿಟ್ಟಿನಲ್ಲಿ ವಿವಿಧ ರೀತಿಯಲ್ಲಿ ಹೋರಾಟ ಮಾಡುತ್ತಿದ್ದು, ಇದಕ್ಕಾಗಿ ನಮ್ಮ ಹೋರಾಟ ಮುಂದುವರೆಯಲಿದೆ'
-ಪತ್ತಿ ಕುಮಾರ ಸ್ವಾಮಿ ಶಾನಮಂಗಲದಲ್ಲಿ ಭೂಮಿ ಕಳೆದುಕೊಂಡ ರೈತ