×
Ad

ಹಿಜಾಬ್ ವಿವಾದ; ಕ್ಯಾಂಪಸನ್ನು ರಾಜಕೀಯಕ್ಕೆ ಬಳಸದಂತೆ ಎಸ್‌ವೈಎಸ್ ಅಭಿಮತ

Update: 2022-02-05 22:44 IST

ಮಂಗಳೂರು, ಫೆ.5: ಹಿಜಾಬ್ ವಿಚಾರದಲ್ಲಿ ನಡೆಯುತ್ತಿರುವ ವಿವಾದ ದುರದೃಷ್ಟಕರ. ಹಿಜಾಬ್ ಮುಸ್ಲಿಂ ಹೆಣ್ಣು ಮಕ್ಕಳಿಗೆ ಕಡ್ಡಾಯವಿರುವ ಉಡುಗೆಯಾಗಿದೆ. ಅದು ಧರ್ಮ ಪೈಪೋಟಿಯ ವಸ್ತುವಲ್ಲ. ಕೆಲವರು ಅದನ್ನು ಇತರ ಧರ್ಮದವರೊಂದಿಗಿನ ವಿರೋಧದ ವಸ್ತುವಾಗಿ ಬಿಂಬಿಸುತ್ತಿರುವುದು ನಾಚಿಗೆಗೇಡಿನ ಸಂಗತಿಯಾಗಿದೆ. ಜಗತ್ತಿನ ಎಲ್ಲಾ ಕಡೆ ಹಿಜಾಬ್ ಧರಿಸುವುದಕ್ಕೆ ಮನ್ನಣೆ ಇರುವಾಗ ಭಾರತದಲ್ಲಿ ಅದನ್ನು ವಿವಾದಕ್ಕೆ ಎಳೆದು ತರುವುದು ರಾಜಕೀಯ ದುರುದ್ದೇಶದಿಂದಾಗಿದೆ ಎಂದು ನಗರದ ಸಮಸ್ತಾಲಯದಲ್ಲಿ ಶನಿವಾರ ನಡೆದ ಎಸ್‌ವೈಎಸ್ ಜಿಲ್ಲಾ ಪ್ರತಿನಿಧಿಗಳ ಸಭೆಯು ಅಭಿಪ್ರಾಯಪಟ್ಟಿದೆ.

ಅಲ್ಪಸಂಖ್ಯಾತ ಹೆಣ್ಣುಮಕ್ಕಳನ್ನು ಹಿಜಾಬ್ ಮುಂದಿಟ್ಟು ಶಿಕ್ಷಣದಿಂದ ತಡೆಯುವುದು ಸಮಾಜಕ್ಕೆ ಶೋಭೆ ತರುವ ವಿಚಾರವಲ್ಲ. ಕೂಡಲೇ ಸರಕಾರವು ಸಂವಿಧಾನಾತ್ಮಕ ಕಾನೂನು ಪ್ರಕಾರ ವಿದ್ಯಾರ್ಥಿಗಳಿಗೆ ಮೂಲಭೂತ ಹಕ್ಕನ್ನು ನೀಡಿ ಸಮಸ್ಯೆಗೆ ಪರಿಹಾರ ನೀಡಬೇಕೇಂದು ಎಸ್‌ವೈಎಸ್ ಕರೆ ನೀಡಿತು.

ಕೆಲವು ರಾಜಕಾರಣಿಗಳಿಂದ ಸೌಹಾರ್ದತೆಯ ಹೆಸರಲ್ಲಿ ವ್ಯವಹರಿಸುವಾಗ ಧರ್ಮದ ಚೌಕಟ್ಟನ್ನು ಮೀರುತ್ತಿರುವ ಸಂಗತಿ ವರದಿಯಾಗುತ್ತಿದೆ. ಯಾವುದೇ ಧರ್ಮದ ಆಚರಣೆಗಳನ್ನು ಇನ್ನೊಂದು ಧರ್ಮೀಯರ ಮೇಲೆ ಒತ್ತಾಯಪಡಿಸುವುದು ಸರಿಯಾದ ಕ್ರಮವಲ್ಲ. ಅದೇ ರೀತಿ ಜನಪ್ರತಿನಿಧಿಗಳು ಧರ್ಮದ ಇತಿಮಿತಿಗಳನ್ನು ಅರಿತು ವರ್ತಿಸಬೇಕು ಎಂದು ಎಸ್‌ವೈಎಸ್ ತಿಳಿಸಿದೆ.

ಫೆ.9ರಂದು ಬಿಸಿ ರೋಡ್‌ನಲ್ಲಿ ನಡೆಯುವ ಪ್ರತಿನಿಧಿಗಳ ಕಾರ್ಯಾಗಾರ ತಝ್ಲಿಯಾವನ್ನು ಯಶಸ್ಸುಗೊಳಿಸಲು ಸಭೆ ಕರೆ ನೀಡಿತು. ಸಭೆಯಲ್ಲಿ ಎಸ್‌ವೈಎಸ್ ಅಧ್ಯಕ್ಷ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಕೆಎಲ್ ಉಮರ್ ದಾರಿಮಿ, ರಿಯಾಝ್ ಹಾಜಿ ಬಂದರು. ಅಬ್ದುಸ್ಸಲಾಂ, ಝಾಕಿರ್ ಬಂದರ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News