×
Ad

ಮಂಗಳೂರು; ವಿವಾಹಿತೆಯ ನಿಗೂಢ ಸಾವು: ಕೊಲೆ ಶಂಕೆ

Update: 2022-02-06 10:31 IST

ಮಂಗಳೂರು, ಫೆ.6: ವಾರದ ಹಿಂದೆ ವಿವಾಹಿತೆಯೊಬ್ಬರು ನಿಗೂಢವಾಗಿ ಸಾವಿಗೀಡಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಗರದ ಬಂದರ್ ಕಸೈಗಲ್ಲಿ ನಿವಾಸಿ ಎಂ. ಹಸನಬ್ಬ ಅವರ ಪುತ್ರಿ ಆಯಿಶಾ ಹಫೀಫಾ ನಿಗೂಢವಾಗಿ ಸಾವಿಗೀಡಾದವರಾಗಿದ್ದು, ಹಫೀಫಾಳ ಪತಿ ಶಹ್‌ಬಾನ್ ಮಿಸ್ಬಾ ಮತ್ತು ಆಕೆಯ ಅತ್ತೆ ರಝಿಯಾ ವಿರುದ್ಧ ಪ್ರಕರಣ ದಾಖಲಾಗಿದೆ.

ಆಯಿಶಾ ಹಫೀಫಾಳನ್ನು ಎಪ್ರಿಲ್ 14, 2019ರಂದು ಶಹ್‌ಬಾನ್ ಮಿಸ್ಬಾಗೆ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿಗೆ ಮಕ್ಕಳಿಲ್ಲ. ಜ.30ರ ರವಿವಾರ ಮಧ್ಯಾಹ್ನ ನನ್ನ ಮಗನಿಗೆ ಅಳಿಯ ಶಹ್‌ಬಾನ್ ಮಿಸ್ಬಾ ಕರೆ ಮಾಡಿ, ಹಫೀಫಾ ಅಸೌಖ್ಯದಿಂದಿದ್ದು ಬೇಗ ಮನೆಗೆ ಬನ್ನಿ ಎಂದಿದ್ದ. ಅದರಂತೆ ನನ್ನ ಮಗ ಮತ್ತು ನನ್ನ ಹೆಂಡತಿ ತಕ್ಷಣ ಮಗಳು ವಾಸವಾಗಿದ್ದ ಫಳ್ನೀರ್‌ನ ಫ್ಲ್ಯಾಟ್‌ಗೆ ತೆರಳಿದಾಗ ಮಗಳು ಸೋಫಾದಲ್ಲಿ‌ ಮಲಗಿದ್ದು, ಮಾತನಾಡುತ್ತಿರಲಿಲ್ಲ. ಗಾಬರಿಗೊಂಡ ಅವರು ತಕ್ಷಣ ಮಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಪರೀಕ್ಷಿಸಿದ ವೈದ್ಯರು‌ ಹಫೀಫಾ ಮೃತಪಟ್ಟಿರುವುದಾಗಿ ತಿಳಿಸಿದರು. ನಂತರ ಮಗಳ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಮಗಳಿಗೆ ಅತ್ತೆ ಮತ್ತು ಅಳಿಯ ಸೇರಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದರು. ಅವರಿಬ್ಬರು ಸೇರಿ ಮಗಳನ್ನು ಕೊಲೆ ಮಾಡಿ ನಂತರ ಆತ್ಮಹತ್ಯೆಗೈದಿದ್ದಾಳೆ ಎಂದು ಸುಳ್ಳು ಹೇಳಿದ್ದಾರೆ.‌ ಹಾಗಾಗಿ ಇಬ್ಬರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹಸನಬ್ಬ ಅವರು ಪಾಂಡೇಶ್ವರ ಪೊಲೀಸರಿಗೆ ನೀಡಿದ ದೂರಿನಲ್ಲಿ ಅಗ್ರಹಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು‌ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News