ಹಿಜಾಬ್ ವಿಚಾರ: ಮುಖ್ಯಮಂತ್ರಿ ಮಧ್ಯಪ್ರವೇಶಕ್ಕೆ ಪಿಯುಸಿಎಲ್ ಆಗ್ರಹ

Update: 2022-02-06 17:09 GMT

ಬೆಂಗಳೂರು, ಫೆ. 6: `ಕುಂದಾಪುರದ ಪಿಯು ಕಾಲೇಜು ಮತ್ತು ಇತರೆ ಶೈಕ್ಷಣಿಕ ಸಂಸ್ಥೆಗಳಲ್ಲಿ `ಹಿಜಾಬ್' ಧರಿಸಿ ಕಾಲೇಜಿಗೆ ಹಾಜರಾಗುವ ಮುಸ್ಲಿಂ ವಿದ್ಯಾರ್ಥಿನಿಯರ ಹಕ್ಕಿನ ಮೇಲೆ ದಾಳಿ ನಡೆಸುತ್ತಾ ಅನಗತ್ಯ ವಿವಾದ ಸೃಷ್ಟಿಸಲಾಗುತ್ತಿದ್ದರೂ, ತುರ್ತಾಗಿ ಮಧ್ಯಪ್ರವೇಶಿಸಿ, ಈ ವಿವಾದವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಯಾವ ಕ್ರಮವನ್ನೂ ಕೈಗೊಳ್ಳದಿರುವ ಶಿಕ್ಷಣ ಇಲಾಖೆ ಮತ್ತು ಈ ಬಗ್ಗೆ ರಾಜ್ಯ ಸರಕಾರವು ವಹಿಸಿರುವ ಜಾಣ ಮೌನ ವಹಿಸಿರುವುದನ್ನು `ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್'(ಪಿಯುಸಿಎಲ್) ಖಂಡಿಸಿದೆ.

ಈ ಸಂಬಂಧ ಪಿಯುಸಿಎಲ್‍ನ ಅಧ್ಯಕ್ಷ, ವಕೀಲ ಅರವಿಂದ್ ನರ್ರೈನ್ ಹಾಗೂ ಪ್ರಧಾನ ಕಾರ್ಯದರ್ಶಿ ರಾಬಿನ್ ಕ್ರಿಸ್ಟೋಫರ್ ಜೆ. ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದು, `ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕೂಡಲೇ ಮಧ್ಯಪ್ರವೇಶಿಸಿ, ಈ ಕಾಲೇಜುಗಳು ನೀಡಿರುವ ಅಸಾಂವಿಧಾನಿಕ ಮತ್ತು ಅನುಚಿತ ಆದೇಶಗಳನ್ನು ವಜಾಗೊಳಿಸಿ, ಈ ಹಿಂದಿನಂತೆ, ಎಲ್ಲ ವಿದ್ಯಾರ್ಥಿನಿಯರು ತಮ್ಮ ಕಾಲೇಜುಗಳಿಗೆ ಮತ್ತು ತರಗತಿಗಳಿಗೆ ಹಿಂದಿರುಗುವ ಅವಕಾಶವನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

`ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ ಕಾಲೇಜುಗಳ ಪ್ರಾಂಶುಪಾಲರು ಏಕಾಏಕಿ, ತಮ್ಮ ಸ್ವೆಚ್ಚಾನುಸಾರ ಈ ರೀತಿಯ ಅಸಾಂವಿಧಾನಿಕ ನಡೆಯನ್ನು ಏಕೆ ತೆಗೆದುಕೊಂಡರು ಎಂಬ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಮತ್ತು ಈ ತನಿಖೆ ಕೊನೆಗೊಳ್ಳುವ ವರೆಗೂ ಈ ಕಾಲೇಜಿನ ಪ್ರಾಂಶುಪಾಲರನ್ನು ಅಮಾನತಿನಲ್ಲಿರಿಸಬೇಕು. ಸರಕಾರ ಜಾತ್ಯತೀತ ಮತ್ತು ತಾರತಮ್ಯ ರಹಿತವಾದ, ಎಲ್ಲ ವಿದ್ಯಾರ್ಥಿಗಳು ತಮ್ಮ ಧರ್ಮ ಮತ್ತು ವ್ಯಕ್ತಿತ್ವವನ್ನು ಸಂಪೂಣವಾಗಿ ವ್ಯಕ್ತಪಡಿಸಲಿಕ್ಕೆ ನಿರ್ಭೀತ ಮತ್ತು ಕಲಿಕೆಗೆ ಅನುಕೂಲಕರ ವಾತಾವರಣವನ್ನು ಶಾಲಾ-ಕಾಲೇಜುಗಳಲ್ಲಿ ಕಲ್ಪಿಸಬೇಕು ಮತ್ತು ಮುಂದೆಂದೂ ಈ ರೀತ್ಯ ಘಟನೆಗಳು ಸಂಭವಿಸದಂತೆ ಎಚ್ಚರವಹಿಸಬೇಕು' ಎಂದು ಒತ್ತಾಯಿಸಿದ್ದಾರೆ.

`ಮಾನವ ಹಕ್ಕುಗಳ ಆಯೋಗ ಮತ್ತು ಅಲ್ಪಸಂಖ್ಯಾತರ ಆಯೋಗವು ಸ್ವಯಂ ಪ್ರೇರಿತವಾಗಿ ಈ ಪ್ರಕರಣಗಳನ್ನು ಗಮನಿಸಿ, ಕಾಲೇಜುಗಳ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಕಾನೂನು ಸೇವೆಗಳ ಪ್ರಾಧಿಕಾರವು ಈ ಪ್ರಕರಣಗಳಲ್ಲಿ ಮಧ್ಯಪ್ರವೇಶಿಸಿ, ಎಲ್ಲ ವಿದ್ಯಾರ್ಥಿಗಳ ಸಾಂವಿಧಾನಿಕ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಕಾನೂನು ಸೇವೆಗಳನ್ನು ಒದಗಿಸಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಮತ್ತು ಅವರ ಸಂಪುಟದ ಸಹೋದ್ಯೋಗಿಗಳು ತಾವು ಸಂವಿಧಾನವನ್ನು ಉಳಿಸುವ ಮತ್ತು ರಕ್ಷಿಸುವ, ಜಾತ್ಯತೀತವಾಗಿ ಆಡಳಿತ ನಡೆಸುವ, ಮತ್ತು ಯಾವುದೇ ನಾಗರಿಕರನ್ನು ಧರ್ಮಾಧಾರಿತವಾಗಿ ಭೇದಮಾಡುವುದಿಲ್ಲ ಎಂದು ತೆಗೆದುಕೊಂಡಿರುವ ಪ್ರಮಾಣ ವಚನವನ್ನೂ ಅಲಕ್ಷಿಸಿ ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ಲಕ್ಷಿಸಿದ್ದಾರೆ. ಸರಕಾರವು ಸಾಂವಿಧಾನಿಕ ಮೌಲ್ಯಗಳನ್ನು ಗೌರವಿಸಿ ಅದಕ್ಕನುಗುಣವಾಗಿ ನಡೆದುಕೊಳ್ಳಬೇಕಿದ್ದು, ಯಾವುದೇ ಕಾರಣಕ್ಕೂ ದುರ್ಬಲ ಅಲ್ಪಸಂಖ್ಯಾತ ಸಮುದಾಯದ ಹಿನ್ನಲೆಯಿಂದ ಬರುವ ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ತಾರತಮ್ಯವೆಸಗಬಾರದು ಎಂದು ಅವರು ತಿಳಿಸಿದ್ದಾರೆ.

ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಶಿಕ್ಷಣದ ಹಕ್ಕನ್ನು ಪ್ರತಿಪಾದಿಸುತ್ತಿರುವ ಮತ್ತು ಶಿಕ್ಷಕರೊಬ್ಬರು ತಮ್ಮದೇ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾಲೇಜಿನ ಗೇಟ್‍ಗಳನ್ನು ಮುಚ್ಚುವ ಮೂಲಕ ಅವರ ಶಿಕ್ಷಣದ ಹಕ್ಕನ್ನು ನಿರಾಕರಿಸುತ್ತಿರುವ ಚಿತ್ರವು ನಮ್ಮ ಸಮಾಜದ ಸಾಮೂಹಿಕ ಆತ್ಮಸಾಕ್ಷಿಯನ್ನೇ ಇರಿದಿದೆ. ತನ್ನ ಕಣ್ಣು ಮುಂದೆಯೇ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದ್ದರೂ, ಅಲ್ಲಿಯೇ, ಶಾಲಾ ಆವರಣದಲ್ಲೇ ನಿಂತು ನೋಡುತ್ತಿರುವ, ಮೌನವಹಿಸಿರುವ ಸರಕಾರವು ಈಗಲಾದರೂ ಎಚ್ಚೆದ್ದು ಈ ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕನ್ನು ಪುನರ್ ಸ್ಥಾಪಿಸುವ ಮೂಲಕ, ಜನರು ಇರಿಸಿರುವ ಅಲ್ಪ ಭರವಸೆಯನ್ನಾದರೂ ಕಾಪಾಡಿಕೊಳ್ಳಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News