ಫೆ.9ರಿಂದ ಸಿಎಂ ಅಧ್ಯಕ್ಷತೆಯಲ್ಲಿ ಬಜೆಟ್ ಪೂರ್ವಭಾವಿ ಸಭೆ

Update: 2022-02-06 12:07 GMT

ಬೆಂಗಳೂರು, ಫೆ. 6: ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022-23ನೆ ಸಾಲಿನ ಆಯವ್ಯಯ ಸಿದ್ಧಪಡಿಸಲು ಫೆ.9ರಿಂದ 25ರ ವರೆಗೆ ಒಟ್ಟು ಎಂಟು ದಿನಗಳ ಕಾಲ ವಾಣಿಜ್ಯ ತೆರಿಗೆ, ಸಾರಿಗೆ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಬಜೆಟ್ ಪೂರ್ವಭಾವಿ ಸಭೆ ನಡೆಸಲಿದ್ದಾರೆ.

ಫೆ.9ರ ಬುಧವಾರದಿಂದ ಮೂರು ದಿನಗಳ ಕಾಲ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದ್ದು, ಫೆ.14 ಮತ್ತು 15ರಂದು ಇಲಾಖಾವಾರು ಚರ್ಚೆ ನಡೆಸಲಿದ್ದಾರೆ. ಫೆ.21ರಂದು ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ರೈತ ಸಂಘಟನೆಗಳ ಮುಖಂಡರು ಮತ್ತು ಇನ್ನಿತರ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಜತೆ ಬಜೆಟ್ ಸಂಬಂಧ ಸಮಾಲೋಚನೆ ನಡೆಸಲಿದ್ದಾರೆ.

ಫೆ.22ರಂದು ವಾಣಿಜ್ಯ ತೆರಿಗೆ, ಸಾರಿಗೆ, ಅಬಕಾರಿ, ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಂಬಂಧಿಸಿದ ಸಂಘ-ಸಂಸ್ಥೆಗಳು ಹಾಗೂ ರಾಜ್ಯ ಸರಕಾರಿ ನೌಕರರ ಸಂಘದ ಪ್ರತಿನಿಧಿಗಳ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚರ್ಚೆ ನಡೆಸಲಿದ್ದು,  ಫೆ.25ರಂದು ರಾಜ್ಯ ಸರಕಾರದ ಪ್ರಮುಖ ಆದಾಯದ ಮೂಲಗಳಾದ ವಾಣಿಜ್ಯ ತೆರಿಗೆ, ಅಬಕಾರಿ, ಸಾರಿಗೆ, ನೋಂದಣಿ ಮತ್ತು ಮುದ್ರಾಂಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಸಮಾಲೋಚನೆ ನಡೆಸಲಿದ್ದಾರೆ.

ಬಜೆಟ್ ಪೂರ್ವಭಾವಿ ಸಭೆಗೆ ನಿಗದಿಪಡಿಸಿರುವ ದಿನಾಂಕದಂದು ಆಯಾ ಇಲಾಖೆಯ ನಾಲ್ವರು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆಗೆ ಬರುವಂತೆ ಇಲಾಖೆಗೆ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಯವರೊಂದಿಗೆ ಪಾಲ್ಗೊಳ್ಳಬೇಕು. ಎಲ್ಲ ಸಚಿವರಿಗೂ ಬಜೆಟ್ ಪೂರ್ವಭಾವಿ ಸಭೆಗೆ ನಿಗದಿತ ದಿನಾಂಕದಂದು ಪೂರ್ವಭಾವಿ ಸಭೆಗೆ ಆಹ್ವಾನ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News