ಜಾಮೀನು ಷರತ್ತು ಉಲ್ಲಂಘನೆ; ಪ್ರಮುಖ ಆರೋಪಿ ನರೇಶ್ ಶೆಣೈಗೆ ಎಚ್ಚರಿಕೆ ನೀಡಿದ ಹೈಕೋರ್ಟ್
ಮಂಗಳೂರು, ಫೆ.6: ವಿನಾಯಕ ಬಾಳಿಗ ಕೊಲೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈ ಜಾಮೀನಿನ ಷರತ್ತನ್ನು ಉಲ್ಲಂಘನೆ ಮಾಡಿದ ಆರೋಪದ ಬಗ್ಗೆ ರಾಜ್ಯ ಹೈಕೋರ್ಟ್ ಜಾಮೀನು ರದ್ದತಿಯ ಎಚ್ಚರಿಕೆ ನೀಡಿದೆ.
ಆರೋಪಿ ನರೇಶ್ ಶೆಣೈ ಜಾಮೀನು ಷರತ್ತನ್ನು ಉಲ್ಲಂಘಿಸಿದ್ದಾನೆ. ಹಾಗಾಗಿ ಆತನ ಜಾಮೀನನ್ನು ರದ್ದು ಮಾಡಬೇಕು ಎಂದು ವಿನಾಯಕ ಬಾಳಿಗರ ಸಹೋದರಿ ಅನುರಾಧ ಬಾಳಿಗ ರಾಜ್ಯ ಹೈಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದರು.
ಆರೋಪಿ ನರೇಶ್ ಶೆಣೈಯು ಮಂಗಳೂರಿನ ವೆಂಕಟರಮಣ ದೇವಸ್ಥಾನ ಹಾಗೂ ಕಾಶಿ ಮಠದ ಕಾರ್ಯಕ್ರಮ ದಲ್ಲಿ ಭಾಗವಹಿಸಿದ ಭಾವಚಿತ್ರಗಳನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದ ಅನುರಾಧ ಬಾಳಿಗ ಇದು ಜಾಮೀನಿನ ಉಲ್ಲಂಘನೆ ಎಂದು ಪ್ರತಿಪಾದಿಸಿದ್ದರು.
ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯವು ಆರೋಪಿ ನರೇಶ್ ಶೆಣೈ ಜಾಮೀನು ಷರತ್ತನ್ನು ಉಲ್ಲಂಘನೆ ಮಾಡಿರುವುದು ನಿಜ. ಇನ್ನು ಮುಂದೆ ಆತ ವೆಂಕಟರಮಣ ದೇವಸ್ಥಾನ ಅಥವಾ ಕಾಶಿ ಮಠದ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾದರೆ ಆತನ ಜಾಮೀನನ್ನು ರದ್ದು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.