×
Ad

ರಸ್ತೆ ಗುಂಡಿ: ಬಿಬಿಎಂಪಿ ಮುಖ್ಯ ಎಂಜಿನಿಯರ್ ಜೈಲಿಗೆ ಕಳುಹಿಸುವ ಎಚ್ಚರಿಕೆ ನೀಡಿದ ಹೈಕೋರ್ಟ್

Update: 2022-02-07 22:22 IST

ಬೆಂಗಳೂರು, ಫೆ.7: ರಸ್ತೆ ಗುಂಡಿ ಮುಚ್ಚಲು ನೆಪಗಳನ್ನು ಹೇಳುತ್ತಿರುವ ಬಿಬಿಎಂಪಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಪಾಲಿಕೆಯ ಮುಖ್ಯ ಎಂಜಿನಿಯರ್‍ರನ್ನು ಜೈಲಿಗೆ ಕಳುಹಿಸುವ ಎಚ್ಚರಿಕೆ ನೀಡಿತು. 

ಈ ಕುರಿತಂತೆ ಕೋರಮಂಗಲದ ವಿಜಯ್ ಮೆನನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. 

ವಿಚಾರಣೆ ವೇಳೆ ನ್ಯಾಯಾಲಯದ ನಿರ್ದೇಶನದಂತೆ ಖುದ್ದು ಹಾಜರಾಗಿದ್ದ ಬಿಬಿಎಂಪಿ ಮುಖ್ಯ ಎಂಜಿನಿಯರ್ ವಿ.ಎಸ್ ಪ್ರಹ್ಲಾದ್, ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ಕಾರಣಗಳನ್ನು ನೀಡಲು ಮುಂದಾದರು.

ಇದಕ್ಕೆ ತೀವ್ರ ಅಸಮಾಧಾನ  ವ್ಯಕ್ತಪಡಿಸಿದ ಪೀಠ, ಎಸಿ ಕಚೇರಿಯಲ್ಲಿ ಕುಳಿತರೇ ಯಾವುದೇ ಕೆಲಸವಾಗುವುದಿಲ್ಲ. ರಸ್ತೆ ಗುಂಡಿ ತಪ್ಪಿಸಲು ಹೋಗಿ ಕಳೆದ ವಾರ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಇದಕ್ಕಿಂತ ಹೀನಾಯ ಸ್ಥಿತಿ ಮತ್ತೇನಿದೆ ಎಂದು ಪ್ರಶ್ನಿಸಿತು. ಅಲ್ಲದೆ, ಇದೇ ದಿನ ನಿಮ್ಮನ್ನು ಸೇವೆಯಿಂದ ಅಮಾನತು ಮಾಡಿ ಜೈಲಿಗೆ ಕಳುಹಿಸುತ್ತೇವೆ. ಇಲ್ಲವೇ ಸರಕಾರಕ್ಕೆ ನಿಮ್ಮನ್ನು ಅಮಾನತು ಮಾಡಲು ಹಾಗೂ ನಿಮ್ಮ ವಿರುದ್ಧ ಎಫ್‍ಐಆರ್ ದಾಖಲಿಸಲು ನಿರ್ದೇಶಿಸುತ್ತೇವೆ. ನ್ಯಾಯಾಲಯದ ಆದೇಶಗಳನ್ನು ಪಾಲಿಸದ ನೀವು ಬರೀ ನೆಪಗಳನ್ನೇ ಹೇಳಿಕೊಂಡು ಬರುತ್ತಿದ್ದೀರಿ. ನಿಮ್ಮ ನಿರ್ಲಕ್ಷ್ಯಕ್ಕೆ ಜನರು ಸಾಯಬೇಕೇ ಎಂದು ಅಸಮಾಧಾನ ವ್ಯಕ್ತಪಡಿಸಿತು. 

ಈ ವೇಳೆ ಪಾಲಿಕೆ ಮುಖ್ಯ ಎಂಜಿನಿಯರ್ ವಿ.ಎಸ್ ಪ್ರಹ್ಲಾದ್ ಪೀಠಕ್ಕೆ ಕೈಮುಗಿದು ಕ್ರಮ ಜರುಗಿಸದಂತೆ ಕೋರಿದರು. ಸರಕಾರದ ಪರ ವಕೀಲ ವಿ. ಶ್ರೀನಿಧಿ ಕೂಡ ಕಠಿಣ ಕ್ರಮ ಜರುಗಿಸದಂತೆ ಹಲವು ಬಾರಿ ಮನವಿ ಮಾಡಿದರು. ಅಂತಿಮವಾಗಿ ವಕೀಲರ ಮನವಿ ಪರಿಗಣಿಸಿದ ಪೀಠ, ನಿಮ್ಮ ಮಾತಿನ ಮೇಲೆ ಭರವಸೆ ಇಟ್ಟು 1 ವಾರ ಕಾಲಾವಕಾಶ ನೀಡುತ್ತೇವೆ. ಆದರೆ, ಮುಂದಿನ ವಿಚಾರಣೆ ವೇಳೆ ಕಾರಣಗಳನ್ನು ನೀಡಬಾರದು. ರಸ್ತೆ ಗುಂಡಿಗಳನ್ನು ಯಾರು, ಹೇಗೆ ಮುಚ್ಚುತ್ತಾರೆ ಎಂಬುದು ನಮಗೆ ಮುಖ್ಯವಲ್ಲ. ರಸ್ತೆಗಳು ಗುಣಮಟ್ಟದಿಂದ ಕೂಡಿರಬೇಕು.

ರಸ್ತೆ ಗುಂಡಿ ಮುಚ್ಚಲು ಯಾವ ತಂತ್ರಜ್ಞಾನ ಅನುಸರಿಸಲಾಗುತ್ತಿದೆ ಎಂಬ ಕುರಿತು ಮಾಹಿತಿ ನೀಡಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಫೆ.15ಕ್ಕೆ ಮುಂದೂಡಿತು. ಬಿಬಿಎಂಪಿ ರಸ್ತೆ ದುರಸ್ಥಿಗೆ 1 ಸಾವಿರ ಕೋಟಿ ರೂ.ಬಿಡುಗಡೆ ಮಾಡಿದೆ, ನೀವು ಎಲ್ಲಿ ದುರಸ್ಥಿ ಮಾಡಿದ್ದಿರಿ ಎಂಬುದು ತಿಳಿಯುತ್ತಿಲ್ಲ ಎಂದು ನ್ಯಾಯಪೀಠವು ಹೇಳಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News