×
Ad

ಹಿಜಾಬ್‌ಗೆ ಅವಕಾಶ ನಿರಾಕರಣೆ ಖಂಡಿಸಿ ಕರಾವಳಿ ಮಹಿಳಾ ಹಕ್ಕುಗಳ ವೇದಿಕೆಯಿಂದ ಪ್ರತಿಭಟನೆ

Update: 2022-02-07 22:33 IST

ಮಂಗಳೂರು, ಫೆ.7: ರಾಜ್ಯಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನಿರಾಕರಿಸುವ ನಡೆಯನ್ನು ಖಂಡಿಸಿ ಕರಾವಳಿ ಮಹಿಳಾ ಹಕ್ಕುಗಳ ವೇದಿಕೆಯ ವತಿಯಿಂದ ಸೋಮವಾರ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.

ಹಿಜಾಬ್ ರಕ್ಷಾ ಕವಚ, ಹಿಜಾಬ್ ಬಿಟ್ಡು ಬಿಡಲು ನಮ್ಮಿಂದ ಸಾಧ್ಯವಿಲ್ಲ, ಜನಪ್ರತಿನಿಧಿಗಳ ಮಾತು ರೋಸಿ ಹೋಗುವಂತದ್ದು, ಹಿಜಾಬನ್ನು ನಿಷೇಧಿಸಿ ರಾಜಕೀಯ ಬೇಳೆ ಬೆಯಿಸುತ್ತಿರುವವರಿಗೆ ಧಿಕ್ಕಾರ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಸ್ಕಾರ್ಫ್ ತಡೆದರೆ ಸ್ವಾಭಿಮಾನ ಕಿತ್ತಂತೆ ಇತ್ಯಾದಿ ಬರಹಗಳುಲ್ಲ ಭಿತ್ತಿಪತ್ರವನ್ನು ಪ್ರದರ್ಶಿಸಿ ಸರಕಾರಕ್ಕೆ ಧಿಕ್ಕಾರ ಕೂಗಲಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಮತಿ ಹೆಗ್ಡೆ ಹಿಜಾಬ್ ಚರ್ಚಾ ವಿಷಯವೇ ಅಲ್ಲ. ಗೊಂದಲ ಸೃಷ್ಟಿಸುವ ಅಗತ್ಯವೂ ಇರಲಿಲ್ಲ. ಕೇವಲ ಮತ ಭಿಕ್ಷೆಗಾಗಿ, ಅಧಿಕಾರಕ್ಕಾಗಿ ರಾಜಕಾರಣಿಗಳು ಹೆಣೆದ ತಂತ್ರ ಇದಾಗಿದೆ. ರಾಜ್ಯದ ಮೂಲೆ ಮೂಲೆಯಲ್ಲಿರುವ ಸರಕಾರಿ ಶಾಲಾ, ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ. ಅದಕ್ಕೆ ಸರಕಾರ ಸ್ಪಂದಿಸಿಲ್ಲ. ನಾರಾಯಣ ಗುರು ಸ್ತಬ್ಧಚಿತ್ರ ವಿವಾದ ತಿರುವು ಪಡೆಯುತ್ತಿರುವಾಗಲೇ ಅದನ್ನು ಮರೆಮಾಚಲು ಸರಕಾರ ಹಿಜಾಬ್ ವಿವಾದವನ್ನು ಸೃಷ್ಟಿಸಿದೆ ಎಂದು ಹೇಳಿದರು.

ಇಂದು ಹಿಜಾಬ್‌ಗಾಗಿ ಬೀದಿಗಿಳಿದ ಮಹಿಳೆಯರು ಎದೆಗುಂದುವ ಅಗತ್ಯವಿಲ್ಲ. ನ್ಯಾಯಾಲಯದಲ್ಲಿ ಹಿಜಾಬ್‌ಗೆ ಖಂಡಿತಾ ಜಯ ಸಿಗಲಿದೆ ಎಂದು ಸುಮತಿ ಹೆಗ್ಡೆ ನುಡಿದರು.

ವಿಮೆನ್ ಇಂಡಿಯ ಮೂವ್‌ಮೆಂಟ್ ರಾಜ್ಯಾಧ್ಯಕ್ಷ ಶಾಹಿದಾ ತಸ್ನೀಂ, ರಮ್ಲತ್ ಕುದ್ರೋಳಿ, ನಝೀಮ್ ಝುರೈ ಉಡುಪಿ, ಫಾತಿಮಾ ಉಸ್ಮಾನ್ ಮತ್ತಿತರರು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News