×
Ad

ವಿದ್ಯಾರ್ಥಿಗಳ ನಡುವೆ ಕೋಮು ಸಂಘರ್ಷ ಹುಟ್ಟು ಹಾಕುತ್ತಿರುವವರ ವಿರುದ್ಧ ಕ್ರಮದ ಬದಲು ಕಾಲಹರಣ ಯಾಕೆ: ಸಿದ್ದರಾಮಯ್ಯ

Update: 2022-02-09 12:55 IST

ಬೆಂಗಳೂರು, ಫೆ.9: ತಿಂಗಳ ಹಿಂದೆಯೇ ಹುಟ್ಟಿಕೊಂಡಿದ್ದ ಹಿಜಾಬ್-ಕೇಸರಿ ಶಾಲು ವಿವಾದ ಹೊತ್ತಿ ಉರಿಯತೊಡಗಿದ ನಂತರ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‍ ಅವರಿಗೆ ಇದರ ಹಿಂದೆ ಎಸ್ ಡಿಪಿಐ- ಸಿಎಫ್ ಐ ಇರಬಹುದೆಂಬ ಶಂಕೆ ಮೂಡಿದೆಯಂತೆ. ಇಲ್ಲಿಯ ವರೆಗೆ ಗೃಹಸಚಿವರು, ಪೊಲೀಸರು, ಇಂಟಲಿಜೆನ್ಸ್ ಏನು ಮಾಡ್ತಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಹಿಜಾಬ್-ಕೇಸರಿ ಶಾಲು ವಿವಾದದ ಹಿಂದೆ ಕಾಂಗ್ರೆಸ್ ಇದೆ ಎಂಬ ಬಿಜೆಪಿ ನಾಯಕರ ಆರೋಪದ ಹಿನ್ನೆಯಲ್ಲಿ ಸರಣಿ ಟ್ವೀಟ್ ಮೂಲಕ ಪ್ರತ್ಯುತ್ತರ ನೀಡಿರುವ ಸಿದ್ದರಾಮಯ್ಯ ಅವರು, ಗೃಹಸಚಿವ ಜ್ಞಾನೇಂದ್ರ ಆರಗ, ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಬಿಜೆಪಿ ನಾಯಕರು ಹಿಜಾಬ್-ಕೇಸರಿ ಶಾಲು ವಿವಾದದ ಹಿಂದೆ ಕಾಂಗ್ರೆಸ್ ಇದೆ ಎನ್ನುತ್ತಿದ್ದಾರೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಸಿಎಫ್ ಐ ಮೇಲೆ ಶಂಕೆಯಂತೆ. ಮೊದಲು ಎಲ್ಲರೂ ಕೂಡಿ ಒಂದು ತೀರ್ಮಾನಕ್ಕೆ ಬರುವುದು ಒಳ್ಳೆಯದು ಎಂದು ಹೇಳಿದ್ದಾರೆ.

ಎಸ್ ಡಿಪಿಐಯೋ, ಸಿಎಫ್ಐಯೋ ವಿದ್ಯಾರ್ಥಿಗಳ ನಡುವೆ ಕೋಮುಸಂಘರ್ಷ ಹುಟ್ಟು ಹಾಕುತ್ತಿರುವವರು ಯಾರೇ ಇರಲಿ, ಅಂತಹವರನ್ನು ಗುರುತಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ. ಇನ್ನೂ ಶಂಕೆ-ಅನುಮಾನ ಎಂದು ಕಾಲಹರಣ ಯಾಕೆ ಮಾಡುತ್ತೀರಿ? ಆರೋಪಿಗಳ ಜೊತೆ ಏನಾದರೂ ಒಳಒಪ್ಪಂದ ನಡೆದಿದೆಯೇ? ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿರುವ ಸಿದ್ದರಾಮಯ್ಯ, ಹಿಜಾಬ್ ಧಾರಣೆಯ ಸರಿ-ತಪ್ಪು ಬಗ್ಗೆ ನ್ಯಾಯಾಲಯ ನಿರ್ಧರಿಸಲಿ, ಅಲ್ಲಿಯ ವರೆಗೆ ಕಾಯೋಣ. ಆದರೆ ವಿದ್ಯಾರ್ಥಿನಿಗಳ ಮೇಲೆ ಹಲ್ಲೆಗೆ ಪ್ರಯತ್ನ, ಶಾಲೆಗೆ ಕಲ್ಲೆಸೆತ, ರಾಷ್ಟ್ರಧ್ವಜ ಸ್ತಂಭದಲ್ಲಿ ಕೇಸರಿ ಬಾವುಟ ಅಪರಾಧ ಹೌದಾದರೆ ಮೊದಲು ಈ ಪುಂಡ ವಿದ್ಯಾರ್ಥಿಗಳ ಮೇಲೆ ಕ್ರಮಕೈಗೊಳ್ಳಿ ಎಂದು ಮುಖ್ಯಮಂತ್ರಿಯನ್ನು ಒತ್ತಾಯಸಿದ್ದಾರೆ.

ಹಿಜಾಬ್-ಕೇಸರಿ ಶಾಲು ವಿವಾದದ ಹಿಂದೆ ಯಾರಿದ್ದಾರೆಂದು ರಾಜ್ಯ ಸರಕಾರ ತನಿಖೆ ನಡೆಸಿ ಪತ್ತೆಹಚ್ಚಿ ಜನರಿಗೆ ತಿಳಿಸಲಿ. ವಿವಾದದ ಮುಂದೆ ಯಾರಿದ್ದಾರೆ ಎನ್ನುವುದನ್ನು ರಾಜ್ಯ, ದೇಶ, ವಿದೇಶದ ಜನತೆ ಲೈವ್ ವಿಡಿಯೋಗಳಲ್ಲಿ ನೋಡುತ್ತಿದ್ದಾರೆ. ಅವರ ವಿರುದ್ದ ಕ್ರಮ ಯಾವಾಗ? ಎಂದು ಮುಖ್ಯಮಂತ್ರಿಯನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News