×
Ad

ಮಂಗಳೂರು; ವೇಶ್ಯಾವಾಟಿಕೆ ದಂಧೆ: ಮತ್ತೆ 7 ಮಂದಿ ಆರೋಪಿಗಳ ಬಂಧನ

Update: 2022-02-09 20:06 IST

ಮಂಗಳೂರು, ಫೆ.9: ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿಕೊಂಡು ನಡೆಸಲಾಗುತ್ತಿದ್ದ ವೇಶ್ಯಾವಾಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮತ್ತೆ 7 ಆರೋಪಿಗಳನ್ನು ಬಂಧಿಸಿದ್ದಾರೆ. ಇದರೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟವರ ಒಟ್ಟು ಆರೋಪಿಗಳ ಸಂಖ್ಯೆ 10ಕ್ಕೇರಿದೆ.

ಫೆ.3ರಂದು ನಗರದ ನಂದಿಗುಡ್ಡೆಯ ಅಪಾರ್ಟ್‌ಮೆಂಟ್‌ವೊಂದಕ್ಕೆ ದಾಳಿ ನಡೆಸಿದ್ದ ಮಂಗಳೂರು ಸಿಸಿಬಿ ಘಟಕದ ಪೊಲೀಸರು ಉಪ್ಪಳದ ಅಬೂಬಕ್ಕರ್ ಸಿದ್ದಿಕ್ (42), ನಂದಿಗುಡ್ಡೆಯ ಶಮೀನಾ(41) ಮತ್ತು ಅಡ್ಯಾರ್‌ ಪದವಿನ ಐಸಮ್ಮ (56)ನನ್ನು ಬಂಧಿಸಿದ್ದರು.

ಇದೇ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಮೂಡುಬಿದಿರೆ ಹೊಸಬೆಟ್ಟಿನ ಸಂದೀಪ್, ಕೈಕಂಬದ ಸಿಪ್ರಿಯಾನ್ ಅಂದ್ರಾದೆ, ಉದ್ಯಾವರ ಮಂಜೇಶ್ವರದ ಶರೀಫ್(46) ಎಂಬವರನ್ನು ಬಂಧಿಸಲಾಗಿದ್ದು ಇವರು ಗಿರಾಕಿಗಳಾಗಿ ಆಗಮಿಸಿ ದೌರ್ಜನ್ಯವೆಸಗಿದ್ದರೆನ್ನಲಾಗಿದೆ. ಇವರೊಂದಿಗೆ ವೇಶ್ಯಾವಾಟಿಕೆ ಜಾಲದಲ್ಲಿ ಕೆಲಸ ಮಾಡಿಕೊಂಡಿದ್ದ ತಲಪಾಡಿಯ ರಹಮತ್ (48), ಕಣ್ಣೂರಿನ ಸನಾ ಆಲಿಯಾಸ್ ಅಸ್ಮಾ (24), ಬಂಟ್ವಾಳ ನರಿಂಗಾನದ ಉಮ್ಮರ್ ಮತ್ತು ಬೆಂದೂರ್‌ವೆಲ್‌ನ ಹನೀಫ್‌ನನ್ನು ಬಂಧಿಸಲಾಗಿದೆ. ಇವರೆಲ್ಲರ ವಿರುದ್ಧ ವಿವಿಧ ಕಲಂಗಳ ಜತೆ ಪೊಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು, ಬಲವಂತದ ವೇಶ್ಯಾವಾಟಿಕೆಗೆ ಒಳಗಾಗಿ ಮಾನಸಿಕವಾಗಿ ನೊಂದಿದ್ದ ವಿದ್ಯಾರ್ಥಿನಿಯೋರ್ವಳು ಶಾಲಾ ಮುಖ್ಯಸ್ಥರಿಗೆ ನೀಡಿದ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಇಬ್ಬರು ಮಹಿಳೆಯರು ಮತ್ತು ಓರ್ವ ಪುರುಷನನ್ನು ಬಂಧಿಸಲಾಗಿತ್ತು. ಅಪ್ರಾಪ್ತರನ್ನು ಕೂಡ ಬಳಸಿಕೊಂಡ ಪ್ರಕರಣ ಇದಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮುಂದುವರೆಸಲಾಗಿತ್ತು. ಮತ್ತೆ 7 ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ 3 ಮಂದಿ ಗಿರಾಕಿಗಳಾಗಿ ಬಂದು ಅಪ್ರಾಪ್ತೆಯ ಮೇಲೆ ದೌರ್ಜನ್ಯ ಎಸಗಿದ್ದರು ಹಾಗೂ 4 ಮಂದಿ ಪಿಂಪ್‌ಗಳ ರೀತಿಯಲ್ಲಿ ವೇಶ್ಯಾವಾಟಿಕೆ ಜಾಲದಲ್ಲಿ ತೊಡಗಿಸಿಕೊಂಡಿದ್ದವರು ಸೇರಿದ್ದಾರೆ. ಈ ಜಾಲದಲ್ಲಿ ಇನ್ನಷ್ಟು ಮಂದಿ ಇರುವ ಸಾಧ್ಯತೆ ಇದ್ದು ತನಿಖೆ ಮುಂದುವರಿಸಲಾಗುವುದು. ಸದ್ಯ ಒಟ್ಟು ಪ್ರಕರಣಕ್ಕೆ ಸಂಬಂಧಿಸಿ 5 ಎಫ್‌ಐಆರ್‌ಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಅಪ್ರಾಪ್ತೆಗೆ 6 ಬಾರಿ ದೌರ್ಜನ್ಯ

ಬಲವಂತದ ವೇಶ್ಯಾವಾಟಿಕೆಯಲ್ಲಿ ಇಬ್ಬರು ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯರು ಪಾಲ್ಗೊಂಡಿರುವ ಮಾಹಿತಿ ಇದೆ. ಆದರೆ ಸದ್ಯ ಒಬ್ಬಳು ವಿದ್ಯಾರ್ಥಿನಿ ಮಾತ್ರ ತನಗಾದ ದೌರ್ಜನ್ಯದ ಬಗ್ಗೆ ತಿಳಿಸಿದ್ದಾಳೆ. ಆಕೆಗೆ 6 ಬಾರಿ ಲೈಂಗಿಕ ದೌರ್ಜನ್ಯ ನಡೆಸಿರುವುದು ತನಿಖೆ ವೇಳೆ ಗೊತ್ತಾಗಿದೆ. ಇನೋರ್ವಳು ವಿದ್ಯಾರ್ಥಿನಿಯನ್ನು ಕೂಡ ಸಂಪರ್ಕಿಸಿ ಆಕೆಗೆ ಅಗತ್ಯ ನೆರವು ಒದಗಿಸಲಾಗುತ್ತಿದೆ. ಆಕೆ ಹೇಳಿಕೆ ನೀಡಿದರೆ ಅದರಂತೆ ಕ್ರಮ ತೆಗೆದುಕೊಳ್ಳಲಾಗುವುದು. ಇಲ್ಲವಾದರೆ ಮಹಿಳಾ ಮತ್ತು ಕಲ್ಯಾಣ ಇಲಾಖೆ ಅಥವಾ ಮಕ್ಕಳ ಕಲ್ಯಾಣ ಸಮಿತಿಯಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಳ್ಳಲು ಅವಕಾಶವಿದೆ.

ಮನಪರಿವರ್ತನೆ ಮಾಡಿದ್ದ ಆರೋಪಿಗಳು

ಪೆಂಟ್‌ಹೌಸ್‌ನಲ್ಲಿ ಕ್ಯಾಮರಾ ಅಳವಡಿಸಿ ವೇಶ್ಯಾವಾಟಿಕೆಯ ದೃಶ್ಯ ಸೆರೆ ಹಿಡಿದು ಯುವತಿಯರನ್ನು ಪ್ರಕರಣದ ಪ್ರಮುಖ ಆರೋಪಿ ಬೆದರಿಸುತ್ತಿದ್ದಳು. ವೀಡಿಯೋ ಮೂಲಕ ದೂರು ನೀಡಿರುವ ಸಂತ್ರಸ್ತೆ ಯುವತಿಯನ್ನು ಸುಮಾರು ಎರಡು ತಿಂಗಳಿನಿಂದ ಬ್ಲಾಕ್‌ ಮೇಲ್ ಮಾಡಿರುವ ಬಗ್ಗೆ ತನಿಖೆಯ ವೇಳೆ ತಿಳಿದು ಬಂದಿದೆ. ಆರೋಪಿ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಸಂಪರ್ಕಿಸಿ ಆಕೆಗೆ ಗಿಫ್ಟ್, ಹಣ ನೀಡುತ್ತಿದ್ದಳು. ಏನಾದರೂ ಸಹಾಯ ಬೇಕಾದರೆ ಕೇಳುವಂತೆ ಹೇಳಿ ಮನಪರಿವರ್ತನೆ ಮಾಡಿ ಫ್ಲಾಟ್‌ಗೆ ಕರೆ ತರುತ್ತಿದ್ದಳು. ಮೊದಲ ಬಾರಿ ದೌರ್ಜನ್ಯವಾದಾಗ ವಿದ್ಯಾರ್ಥಿನಿ ಪ್ರತಿರೋಧ ತೋರಿಸಿದ್ದಳು. ಮನೆಯವರಿಗೆ, ಶಿಕ್ಷಕರಿಗೆ ಹೇಳುವುದಾಗಿ ಬೆದರಿಸಿದ್ದಳು. ತನ್ನನ್ನು ಬಿಟ್ಟು ಬಿಡುವಂತೆ ಅಂಗಲಾಚಿದ್ದಳು. ಆದರೆ ಆರೋಪಿಗಳು ಆಕೆಗೆ ಬೆದರಿಕೆ ಹಾಕುತ್ತಿದ್ದರು. ವೀಡಿಯೋ, ಪೊಟೋ, ಸಿಸಿ ಟಿವಿ ಫುಟೇಜ್ ಇದೆ ಎಂದು ಹೆದರಿಸಿ ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಬಲವಂತ ಮಾಡುತ್ತಿದ್ದರು. ಇದೇ ರೀತಿ ವಿದ್ಯಾರ್ಥಿನಿ ಗಿರಾಕಿಗಳೊಂದಿಗೆ ಸಹಕರಿಸಲು ಆರೋಪಿಗಳು ಒತ್ತಡ ಹಾಕಿದ್ದರು.

ವ್ಯವಸ್ಥಿತ ಜಾಲ

ವಿದ್ಯಾರ್ಥಿನಿಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುವ ವ್ಯವಸ್ಥಿತ ಜಾಲ ಇದು. ತಂಡದ ಮಹಿಳೆಯರು ಇತರ ಹೆಣ್ಣು ಮಕ್ಕಳ ಜತೆ ವಿದ್ಯಾರ್ಥಿಗಳಿಗೂ ಗಾಳ ಹಾಕುತ್ತಿದ್ದರು. ಪ್ರಕರಣದಲ್ಲಿ ಸಂತ್ರಸ್ತೆ ಎಂದು ಗುರುತಿಸಲಾಗಿರುವ ಓರ್ವ ಮಹಿಳೆ ಈ ಪ್ರಕರಣದಲ್ಲಿ ಆರೋಪಿಯ ಸ್ಥಾನದಲ್ಲಿದ್ದಾಳೆ. ಆಕೆ ಈ ಹಿಂದೆ ಪೋಕ್ಸೋ ಪ್ರಕರಣದ ಸಂತ್ರಸ್ತೆಯಾಗಿದ್ದು, ಇದೀಗ ಅಪ್ರಾಪ್ತ ಯುವತಿಗೆ ಧೈರ್ಯ ತುಂಬಿ, ಮನವರಿಕೆ ಮಾಡಿ ವೇಶ್ಯಾವಾಟಿಕೆಯಲ್ಲಿ ಮುಂದುವರಿಯುವಂತೆ ಒತ್ತಡ ಹೇರಿರುವುದು ತಿಳಿದು ಬಂದಿದೆ. ಆರೋಪಿಗಳ ಪೈಕಿ ಓರ್ವ ದುಬೈನಲ್ಲಿ ಹಲವು ವರ್ಷಗಳ ಕಾಲ ಇದ್ದು ಅನಂತರ ಊರಿನಲ್ಲಿ ಬಂದು ವ್ಯವಹಾರಗಳನ್ನು ಮಾಡುತ್ತಿದ್ದ. ನಂದಿಗುಡ್ಡೆಯಲ್ಲಿ ಮಾತ್ರವಲ್ಲದೆ ಬೇರೆ ಕಡೆಗಳಲ್ಲಿಯೂ ಬಾಲಕಿಯರು, ಯುವತಿಯರನ್ನು ಕೃತ್ಯದಲ್ಲಿ ತೊಡಗಿಸಿಕೊಂಡು ಇದೇ ರೀತಿಯ ಕೃತ್ಯಗಳನ್ನು ಮಾಡಿರುವ ಸಾಧ್ಯತೆ ಇದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್, ಸಿಸಿಬಿ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಉಪಸ್ಥಿತರಿದ್ದರು.

ದೌರ್ಜನ್ಯವಾಗಿದ್ದರೆ ಮಾಹಿತಿ ಕೊಡಿ

ವಿದ್ಯಾರ್ಥಿನಿಯೋರ್ವಳು ದೌರ್ಜನ್ಯಕ್ಕೊಳಗಾಗಿ ಮಾನಸಿಕವಾಗಿ ನೊಂದು ಶಾಲಾ ಮುಖ್ಯಸ್ಥರಿಗೆ ಮಾಹಿತಿ ನೀಡಿದ ಕಾರಣ ಪ್ರಕರಣ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಯರು ಸೇರಿದಂತೆ ಯಾವುದೇ ಹೆಣ್ಮಕ್ಕಳು ಈ ರೀತಿ ಬಲವಂತದ ವೇಶ್ಯಾವಾಟಿಕೆಗೆ ತೊಡಗಿಕೊಂಡು ತೊಂದರೆ ಅನುಭವಿಸಿದ್ದರೆ ಅಥವಾ ಈಗ ಅಂತಹ ಸಂಕಷ್ಟ ಎದುರಿಸುತ್ತಿದ್ದರೆ ಮಾಹಿತಿ ನೀಡಿದ್ದಲ್ಲಿ ಅವರ ಗುರುತನ್ನು ಗೌಪ್ಯವಾಗಿರಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News