2018-20ರ ನಡುವೆ ನಿರುದ್ಯೋಗ,ಸಾಲದಿಂದಾಗಿ 25,000ಕ್ಕೂ ಹೆಚ್ಚು ಭಾರತೀಯರ ಆತ್ಮಹತ್ಯೆ: ಕೇಂದ್ರ ಸರಕಾರ

Update: 2022-02-09 15:08 GMT

ಹೊಸದಿಲ್ಲಿ,ಫೆ.9: ನಿರುದ್ಯೋಗ ಸಮಸ್ಯೆಯ ಕುರಿತು ಸಂಸತ್ತಿನಲ್ಲಿ ನಡೆಯುತ್ತಿರುವ ಚರ್ಚೆಗಳ ನಡುವೆಯೇ ಕೇಂದ್ರ ಸರಕಾರವು 2018 ಮತ್ತು 2020ರ ನಡುವಿನ ಅವಧಿಯಲ್ಲಿ ದೇಶದಲ್ಲಿ 25,000ಕ್ಕೂ ಅಧಿಕ ಜನರು ನಿರುದ್ಯೋಗ ಮತ್ತು ಸಾಲದ ಹೊರೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದೆ. ಈ ಅವಧಿಯಲ್ಲಿ ನಿರುದ್ಯೋಗದಿಂದಾಗಿ 9,140 ಮತ್ತು ದಿವಾಳಿತನ ಅಥವಾ ಋಣಭಾರದಿಂದಾಗಿ 16,091 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಬುಧವಾರ ರಾಜ್ಯಸಭೆಯಲ್ಲಿ ಈ ವಿಷಯ ಕುರಿತು ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ಒದಗಿಸಿರುವ ಸಹಾಯಕ ಗೃಹಸಚಿವ ನಿತ್ಯಾನಂದ ರಾಯ್ ಅವರು,ಸರಕಾರದ ಅಂಕಿಅಂಶಗಳು ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (ಎನ್ಸಿಆರ್ಬಿ)ದ ದತ್ತಾಂಶಗಳನ್ನು ಆಧರಿಸಿವೆ ಎಂದು ತಿಳಿಸಿದರು.

ಎನ್ಸಿಆರ್ಬಿ ದತ್ತಾಂಶಗಳಂತೆ ನಿರುದ್ಯೋಗಿಗಳ ಆತ್ಮಹತ್ಯೆಗಳು ಹೆಚ್ಚುತ್ತಿದ್ದು,2020ನೇ ಸಾಂಕ್ರಾಮಿಕ ವರ್ಷದಲ್ಲಿ ಗರಿಷ್ಠ (3,548)ವನ್ನು ತಲುಪಿದ್ದವು. 2018ರಲ್ಲಿ 2,741 ಮತ್ತು 2019ರಲ್ಲಿ 2,851 ಜನರು ನಿರುದ್ಯೋಗದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು.
2018ರಲ್ಲಿ ದಿವಾಳಿತನದಿಂದಾಗಿ 4,970 ಜನರು ಆತ್ಮಹತ್ಯೆಗೆ ಶರಣಾಗಿದ್ದರೆ,2019ರಲ್ಲಿ ಈ ಸಂಖ್ಯೆ 5,908ಕ್ಕೆ ಏರಿತ್ತು. ಆದರೆ 2020ರಲ್ಲಿ ಸಾಲದಿಂದಾಗಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 5,213ಕ್ಕೆ ಇಳಿಕೆಯಾಗಿತ್ತು.

ಹಾಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಪ್ರತಿಪಕ್ಷ ಸಂಸದರು ನಿರುದ್ಯೋಗ ಸಮಸ್ಯೆಯನ್ನು ಹಲವಾರು ಸಲ ಎತ್ತಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ದೇಶವು ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ನಿಭಾಯಿಸಲು ಬಜೆಟ್ನಲ್ಲಿ ಹೆಚ್ಚಿನ ಗಮನವನ್ನು ನೀಡಲಾಗಿಲ್ಲ ಎಂದು ಈ ಸಂಸದರು ಆರೋಪಿಸಿದ್ದಾರೆ.
ಮಾನಸಿಕ ಆರೋಗ್ಯದ ಮೇಲೆ ಗಮನವನ್ನು ಕೇಂದ್ರೀಕರಿಸುವ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಲು ಸರಕಾರವು ಪ್ರಯತ್ನಿಸುತ್ತಿದೆ ಎಂದು ಹೇಳಿದ ರಾಯ್, ಮಾನಸಿಕ ಅಸ್ವಸ್ಥತೆಗಳ ಹೊರೆಯನ್ನು ತಗ್ಗಿಸಲು ಸರಕಾರವು ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ ಮತ್ತು ಕಾರ್ಯಕ್ರಮದಡಿ ದೇಶದ 692 ಜಿಲ್ಲೆಗಳಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಗಳ ಜಾರಿಯನ್ನು ಬೆಂಬಲಿಸುತ್ತಿದೆ ಎಂದು ತಿಳಿಸಿದರು.

ಆತ್ಮಹತ್ಯೆಗಳನ್ನು ತಡೆಯುವ ಸೇವೆಗಳು,ಕೆಲಸದ ಸ್ಥಳಗಳಲ್ಲಿಯ ಒತ್ತಡದ ನಿರ್ವಹಣೆ,ಜೀವನ ಕೌಶಲ್ಯ ತರಬೇತಿ,ಶಾಲಾಕಾಲೇಜುಗಳಲ್ಲಿ ಆಪ್ತ ಸಮಾಲೋಚನೆಗಳನ್ನು ಒದಗಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಸರಕಾರವು ಉದ್ಯೋಗ ಮತ್ತು ಆದಾಯ ಸೃಷ್ಟಿಗಾಗಿ ಆತ್ಮನಿರ್ಭರ ಭಾರತ ರೋಜಗಾರ್ ಯೋಜನೆ, ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮ, ನರೇಗಾ, ಪಂ.ದೀನದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಇತ್ಯಾದಿಗಳ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಆರಂಭಿಸಿದೆ ಎಂದು ತಿಳಿಸಿದ ರಾಯ್,ಮೇಕ್ ಇನ್ ಇಂಡಿಯಾ,ಡಿಜಿಟಲ್ ಇಂಡಿಯಾ,ಸ್ವಚ್ಛ ಭಾರತ ಅಭಿಯಾನ, ಸ್ಮಾರ್ಟ್ ಸಿಟಿ ಅಭಿಯಾನ,ಎಲ್ಲರಿಗೂ ವಸತಿ,ಮೂಲಸೌಕರ್ಯ ಅಭಿವೃದ್ಧಿ ಮತ್ತು ಕೈಗಾರಿಕಾ ಕಾರಿಡಾರ್ಗಳಂತಹ ಸರಕಾರದ ಮುಂಚೂಣಿ ಕಾರ್ಯಕ್ರಮಗಳು ಉತ್ಪಾದಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ತಿಳಿಸಿದರು.
ಭಾರತದ ತಯಾರಿಕೆ ಸಾಮರ್ಥ್ಯಗಳು ಮತ್ತು ರಫ್ತುಗಳನ್ನು ಹೆಚ್ಚಿಸಲು ಪ್ರಮುಖ ಕ್ಷೇತ್ರಗಳಲ್ಲಿ ಉತ್ಪಾದನೆ ಆಧಾರಿತ ಪ್ರೋತ್ಸಾಹನಗಳು ಸಹ ಉದ್ಯೋಗಾವಕಾಶಗಳು ಸೃಷ್ಟಿಸುತ್ತವೆ ಎಂದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News