ಏಷ್ಯನ್ ಫುಟ್ಬಾಲ್ ಕ್ಲಬ್ ಗೆ ದಿ.ಟಿ.ಎ.ರೆಹಮಾನ್ ಸ್ಮಾರಕ ಟ್ರೋಫಿ
ಮಂಗಳೂರು, ಫೆ.9: ದ.ಕ.ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ವತಿಯಿಂದ ನಡೆದ ದಿ.ಟಿ.ಎ.ರೆಹಮಾನ್ ಸ್ಮಾರಕ ಫುಟ್ಬಾಲ್ ನಾಕ್ ಔಟ್ ಪಂದ್ಯಾವಳಿಯನ್ನು ಉಳ್ಳಾಲದ ಏಷ್ಯನ್ ಫುಟ್ಬಾಲ್ ಕ್ಲಬ್ ತಂಡ ದೇರಳಕಟ್ಟೆಯ ಯೆನೆಪೊಯ ತಂಡದ ವಿರುದ್ಧ ಪೆನಾಲ್ಟಿ ಶೂಟ್ಔಟ್ನಲ್ಲಿ 4-3 ಗೋಲ್ ಅಂತರದಿಂದ ಜಯಗಳಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು.
ಪಂದ್ಯಾವಳಿಯಲ್ಲಿ ಈ ಮೊದಲು ಏಷ್ಯನ್ ತಂಡ ಪಜೀರ್ ಯುನೈಟೆಡ್, ಬೆಂಗರೆ ವಿದ್ಯಾರ್ಥಿ ಸಂಘ, ಸೋಕರ್ ಉಳ್ಳಾಲ ತಂಡವನ್ನು ಹಾಗೂ ಜೆನೀಫ ಉಳ್ಳಾಲ ತಂಡಗಳನ್ನು ಸೋಲಿಸಿ ಫೈನಲ್ ತಲುಪಿದರೆ ಯೆನೆಪೊಯ ತಂಡ ಮಾಸ್ಕ್ ಉಳ್ಳಾಲ ಹಾಗೂ ಷೂಟರ್ಝ್ ಬಜ್ಪೆ ತಂಡವನ್ನು ಸೋಲಿಸಿ ಫೈನಲ್ ತಲುಪಿತ್ತು.
ಸಮಾರೋಪ ಕಾರ್ಯಕ್ರಮದಲ್ಲಿ ಜೆಡಿಎಸ್ ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಡಾ.ಸುಮತಿ ಹೆಗ್ಡೆ ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವೇದಿಕೆಯಲ್ಲಿ ದ.ಕ. ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್‌ನ ಅಧ್ಯಕ್ಷ ಡಿ.ಎಂ.ಅಸ್ಲಂ, ರಾಜ್ಯ ಫುಟ್ಬಾಲ್ ಅಸೋಸಿಯೇಶನ್‌ನ ಸದಸ್ಯ ವಿಜಯ ಸುವರ್ಣ, ಖಜಾಂಚಿ ಅನಿಲ್ ಪಿ.ವಿ, ಸದಸ್ಯರಾದ ಎ.ಶಿವರಾಮ್, ಅಬ್ದುಲ್ ಲತೀಫ್, ಆರಿಫ್ ಉಚ್ಚಿಲ, ಫಿರೋಝ್ ಉಳ್ಳಾಲ್, ಜೀವನ್, ಹರಿಶ್ಚಂದ್ರ ಬೆಂಗರೆ, ಫಯಾಝ್ ಉಪಸ್ಥಿತರಿದ್ದರು.
ಫುಟ್ಬಾಲ್ ಅಸೋಸಿಯೇಶನ್‌ನ ಕಾರ್ಯದರ್ಶಿ ಹುಸೇನ್ ಬೋಳಾರ ಕಾರ್ಯಕ್ರಮ ನಿರೂಪಿದರು.
ಫೆ.10ರಿಂದ ಲೀಗ್ ಪಂದ್ಯಾವಳಿ
2021-22ರ ಅಹ್ಮದ್ ಮಾಸ್ಟರ್ ಸ್ಮಾರಕ ಎ ಡಿವಿಜನ್ ಪಂದ್ಯಾವಳಿ ಹಾಗೂ ಪಳ್ಳಿ ಜಯರಾಮ ಶೆಟ್ಟಿ ಸ್ಮಾರಕ ಬಿ ಡಿವಿಜನ್ ಫುಟ್ಬಾಲ್ ಲೀಗ್ ಪಂದ್ಯಾವಳಿಯು ಫೆ.10ರಿಂದ ನಗರದ ನೆಹರೂ ಮೈದಾನದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯಾವಳಿಯಲ್ಲಿ ಎ ಹಾಗೂ ಬಿ ಡಿವಿಜನಿನ ತಲಾ ಹತ್ತು ತಂಡ ಭಾಗವಹಿಸಲಿದೆ ಎಂದು ಪ್ರಕಟನೆ ತಿಳಿಸಿದೆ.