×
Ad

ಬಿಜೆಪಿಯವರು ವಿದ್ಯಾರ್ಥಿಗಳ ತಲೆಯಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ: ಡಿ.ಕೆ.ಶಿವಕುಮಾರ್

Update: 2022-02-10 20:13 IST

ಬೆಂಗಳೂರು, ಫೆ.10: ಬಿಜೆಪಿಯವರು ಯುವಕರನ್ನು ಬೇರೆ ದಾರಿಗೆ ಕರೆದೊಯ್ಯುವ ಪ್ರಯತ್ನ ಮಾಡುತ್ತಿದ್ದಾರೆ. ವಿದ್ಯಾಸಂಸ್ಥೆಗಳ ಮೂಲಕ ಅವರ ತಲೆಯಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮುಹಮ್ಮದ್ ಹಾರೀಸ್ ನಲಪಾಡ್ ಅಧಿಕಾರ ಸ್ವೀಕರಿಸಿದ ‘ಯುವ ಪ್ರತಿಜ್ಞಾ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಎನ್‍ಇಪಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲ, ನಾಗ್ಪುರ ಶಿಕ್ಷಣ ನೀತಿ. 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಇದನ್ನು ಸುಡುವ ಕೆಲಸ ಮಾಡುತ್ತೇವೆ ಎಂದರು.

ಯುವ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿ ಹಳ್ಳಿಗಳಲ್ಲಿ ನಿರುದ್ಯೋಗಿಗಳ ಪಥ ಮಾಡಬೇಕು. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ನಿರುದ್ಯೋಗಿ ಯುವಕರಿಗೆ ಪ್ರತ್ಯೇಕ ಪ್ರಣಾಳಿಕೆ ನೀಡುವ ಕೆಲಸ ಮಾಡುತ್ತೇವೆ ಎಂದು ಶಿವಕುಮಾರ್ ಹೇಳಿದರು.

ನಮ್ಮ ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಏನಾಗುತ್ತಿದೆ. ನಾವು ನಿನ್ನೆ ಸಲೀಮ್ ಅಹ್ಮದ್ ಹಾಗೂ ನಸೀರ್ ಅಹ್ಮದ್ ಸೇರಿದಂತೆ ಇನ್ನಿತರರು ಚರ್ಚೆ ಮಾಡುವಾಗ ಸೌದಿ ಅರೇಬಿಯಾದ ರಾಯಭಾರಿಗಳು ಒಂದು ಸಂದೇಶ ಕಳುಹಿಸಿದರು. ನಮ್ಮಲ್ಲೂ 2 ಕೋಟಿ ಭಾರತೀಯರು ಇದ್ದಾರೆ. ನಾವು ಕೂಡ ಕಾನೂನು ಮಾಡುವ ಅವಕಾಶವಿದೆ. ನಮ್ಮ ಸಹೋದರಿಯರಿಗೆ ಅಪಮಾನವಾಗುತ್ತಿದೆ ಇದು ಗಮನದಲ್ಲಿರಲಿ ಎಂದು ಹೇಳಿದ್ದರು ಎಂದು ಶಿವಕುಮಾರ್ ತಿಳಿಸಿದರು.

ಇದೇ ಪರಿಸ್ಥಿತಿ ಮುಂದುವರೆದರೆ ರಾಜ್ಯಕ್ಕೆ ಯಾವುದೇ ಬಂಡವಾಳ ಬರುವುದಿಲ್ಲ. ದೇಶದಲ್ಲಿ ಮೊದಲು ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆದಿದ್ದು ಗುಜರಾತ್‍ನಲ್ಲಿ ಅಲ್ಲ, ಕರ್ನಾಟಕದಲ್ಲಿ. ಇಂದು ಜಾತಿ, ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಿ ಜನರ ಮನಸ್ಸು ಹಾಳು ಮಾಡುತ್ತಿದ್ದಾರೆ ಎಂದು ಅವರು ಕಿಡಿಗಾರಿದರು.

ಯಾವುದೋ ಒಂದು ಕಾಲೇಜಿನಲ್ಲಿ ವಿವಾದ ಉಂಟಾದಾಗಲೇ ಮುಚ್ಚಿಸಬಹುದಿತ್ತು. ಬಿಜೆಪಿ ಕಾರ್ಯಕರ್ತರು ಲಕ್ಷಾಂತರ ಯುವಕರಿಗೆ ಶಾಲು ಹಂಚಿ ಅವರ ಮನಸ್ಸಿನಲ್ಲಿ ದ್ವೇಷದ ವಿಷ ಬೀಜ ಬಿತ್ತಿ ಇಡೀ ಪ್ರಪಂಚ ರಾಜ್ಯವನ್ನು ನೋಡುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಶಿವಕುಮಾರ್, ನೀವು ಹೋರಾಟದ ಗುಣ ಬೆಳೆಸಿಕೊಳ್ಳಿ. ನಾವು ನಿಮ್ಮ ಜತೆ ಇರುತ್ತೇವೆ. ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.

ಗುಂಪುಗಾರಿಕೆಗೆ ಅವಕಾಶವಿಲ್ಲ. ವ್ಯಕ್ತಿಪೂಜೆಗೂ ಅವಕಾಶವಿಲ್ಲ. ನಿಮ್ಮ ಗುರಿ ಒಂದೇ ಇರಬೇಕು. ಯಾರು ಯಾರ ಮೇಲೂ ದೂರು ಹೇಳಬಾರದು. ನಿಮ್ಮ ಹೋರಾಟ ಬಿಜೆಪಿ ವಿರುದ್ಧ, ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಲು ಸಂಕಲ್ಪ ಮಾಡಿ. ಕೇವಲ ಕೆಲಸದ ಬಗ್ಗೆ ಗಮನಹರಿಸಿ. ಪ್ರತಿ ತಾಲೂಕಿನಲ್ಲಿ 5 ಸಾವಿರ ಹೊಸ ಯುವಕರನ್ನು ಪಕ್ಷದ ಸದಸ್ಯರನ್ನಾಗಿ ಮಾಡಬೇಕು ಎಂದು ಅವರು ಹೇಳಿದರು.

ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಮುಹಮ್ಮದ್ ಹಾರೀಸ್ ನಲಪಾಡ್, ಈ ವೇದಿಕೆ ಮೇಲೆ ನಿಂತು ಮಾತನಾಡಲು ನನಗೆ ಮಾತುಗಳು ಬರುತ್ತಿಲ್ಲ. ಕಳೆದ ವರ್ಷ ಫೆ.4ರಂದು ಫಲಿತಾಂಶ ಬಂದಿತ್ತು. ಇಂದು ನಾನು ಅಧ್ಯಕ್ಷನಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದೇನೆ ಎಂದರು.

ಕಳೆದ ಒಂದು ವರ್ಷದಿಂದ ನಾನು ಈ ದಿನಕ್ಕಾಗಿ ಕಾಯುತ್ತಿದ್ದೆ ಹೋರಾಟ ಮಾಡಿದ್ದೆ. ಕಾರಣ ಅಧಿಕಾರಕ್ಕಾಗಿ ಅಲ್ಲ, ಬದಲಿಗೆ ಈ ಯುವ ಪಡೆಯ ಧ್ವನಿಯಾಗಲು, ನಿಮ್ಮಲ್ಲಿ ಒಬ್ಬನಾಗಲು ಈ ಛಲ ತೊಟ್ಟಿದ್ದೆ. ಯುವ ಕಾಂಗ್ರೆಸ್ ಅನ್ನು ಯಾವ ದಿಕ್ಕಿನಲ್ಲಿ ಮುನ್ನಡೆಸಬೇಕು ಎಂಬುದರ ಬಗ್ಗೆ ನನಗೆ ಒಂದು ಸ್ಪಷ್ಟತೆ ಇದೆ ಎಂದು ಅವರು ಹೇಳಿದರು.

ಯುವ ಕಾಂಗ್ರೆಸ್ ಅನ್ನು ಮುನ್ನಡೆಸಲು ಅಜೆಂಡಾ: ಕಾಂಗ್ರೆಸ್ ಪಕ್ಷದಲ್ಲಿ ಅತೀ ಹೆಚ್ಚು ಸದಸ್ಯತ್ವ ಮಾಡಬೇಕು. ಕಾಂಗ್ರೆಸ್ ಪಕ್ಷವನ್ನು ಕೇಡರ್ ಬೇಸ್ ಪಕ್ಷವಾಗಿ ಮಾಡಲು ಬೂತ್ ಮಟ್ಟದಲ್ಲಿ ಒಬ್ಬ ಡಿಜಿಟಲ್ ಯೂತ್ ಆಯ್ಕೆ ಮಾಡಿ ಅವರಿಗೆ ಸಾಮಾಜಿಕ ತಾಲತಾಣಗಳ ಬಳಕೆ ಸೇರಿದಂತೆ ಎಲ್ಲ ತಂತ್ರಜ್ಞಾನಗಳ ತರಬೇತಿ ನೀಡಿ, ಬಿಜೆಪಿಯ ಷಡ್ಯಂತ್ರ ಜನರಿಗೆ ತಲುಪುವುದನ್ನು ತಡೆದು, ಕಾಂಗ್ರೆಸ್ ಪಕ್ಷದ ಉತ್ತಮ ಕಾರ್ಯಗಳನ್ನು ತಲುಪಿಸುವುದು ಎಂದು ಅವರು ತಿಳಿಸಿದರು.

ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸುವುದು, ಪ್ರತಿ ವರ್ಷ ಬಸವ ಜಯಂತಿ, ಕ್ರಿಸ್ಮಸ್, ಈದ್, ದೀಪಾವಳಿಯಂದು 100 ವಿಧವೆಯರಿಗೆ ಮದುವೆ ಮಾಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ. ಇದಕ್ಕೆ ಎಲ್ಲ ಜಿಲ್ಲಾ ಅಧ್ಯಕ್ಷರು ತಮ್ಮ ಜಿಲ್ಲೆಯಿಂದ ಇಂತಹ ಮಹಿಳೆಯರನ್ನು ಗುರುತಿಸಬೇಕು ಎಂದು ಅವರು ಮನವಿ ಮಾಡಿದರು.

2023ರಲ್ಲಿ ವಿಧಾನಸಭೆ ಚುನಾವಣೆ ಇದೆ. ನಮಗೆ ಇರುವ ಸಮಯ 1 ವರ್ಷ ಎರಡು ತಿಂಗಳು ಮಾತ್ರ. ಇದು ನಾವೆಲ್ಲರು ಸಮರೋಪಾದಿಯಲ್ಲಿ ಸಾಗಬೇಕಾಗಿದೆ. ಬಿಜೆಪಿಯನ್ನು ಮಣಿಸುವುದೇ ನಮ್ಮ ಗುರಿ. ಪ್ರಧಾನಿ ಮೋದಿ ಎಂಜಿನಿಯರಿಂಗ್ ಓದಿದ ವಿದ್ಯಾರ್ಥಿಗಳಿಗೆ ಪಕೋಡ ಮಾರಲು ಸಲಹೆ ನೀಡುತ್ತಾರೆ. ಅವರ ನಿಲುವನ್ನು ನಾನು ಖಂಡಿಸುತ್ತೇನೆ ಎಂದು ನಲಪಾಡ್ ಹೇಳಿದರು.

2023ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ, ನಾವು ನಿದ್ರೆ ಮಾಡುವುದಿಲ್ಲ. 2024ರಲ್ಲಿ ರಾಜ್ಯದಿಂದ ಅತಿ ಹೆಚ್ಚು ಸಂಸದರನ್ನು ಕಳುಹಿಸಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ತರುವವರೆಗೂ ನಮಗೆ ವಿಶ್ರಾಂತಿ ಇಲ್ಲ ಎಂದು ಅವರು ಕರೆ ನೀಡಿದರು.

ರಕ್ಷಾ ರಾಮಯ್ಯ ಗೈರು: ಮುಹಮ್ಮದ್ ಹಾರೀಸ್ ನಲಪಾಡ್‍ಗೆ ಅಧಿಕಾರ ಹಸ್ತಾಂತರ ಮಾಡಬೇಕಿದ್ದ ನಿಕಟಪೂರ್ವ ಅಧ್ಯಕ್ಷ ರಕ್ಷಾ ರಾಮಯ್ಯ ಗೈರು ಹಾಜರಿ ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತಿತ್ತು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಧಿಕಾರವನ್ನು ಹಸ್ತಾಂತರ ಮಾಡಿದರು.

ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಮ್ ಅಹ್ಮದ್, ರಾಮಲಿಂಗಾರೆಡ್ಡಿ, ಧ್ರುವನಾರಾಯಣ್, ಶಾಸಕರಾದ ಎನ್.ಎ.ಹಾರೀಸ್, ಝಮೀರ್ ಅಹ್ಮದ್ ಖಾನ್, ನಸೀರ್ ಅಹ್ಮದ್, ರಹೀಮ್ ಖಾನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಾನು ನನ್ನ ಜೀವನದಲ್ಲಿ ಒಂದು ತಪ್ಪು ಮಾಡಿದ್ದೆ. ಅದು ಎಷ್ಟು ದೊಡ್ಡ ತಪ್ಪು ಎಂದು ನನಗೆ ಅರ್ಥವಾಗಿದ್ದು, ಯೂಥ್ ಕಾಂಗ್ರೆಸ್ ಚುನಾವಣೆಗೆ ಸ್ಪರ್ಧಿಸಿ ಗೆದ್ದ ಮೇಲೂ ಆ ಸ್ಥಾನ ನನಗೆ ಸಿಗದೇ ಇದ್ದಾಗ. ಆ ತಪ್ಪು ಮಾಡಿದ ದಿನದಿಂದ ಇಂದಿನವರೆಗೂ ನಾನು ಅದಕ್ಕಾಗಿ ಪಶ್ಚಾತ್ತಾಪ ಪಡುತ್ತಲೇ ಇದ್ದೇನೆ. ನಾನು ನಿಮ್ಮ ಮನೆಯ ಮಗ, ನಿಮ್ಮ ಮಗ, ಅಣ್ಣ, ತಮ್ಮ ತಪ್ಪು ಮಾಡಿದಾಗ ಹೇಗೆ ಕ್ಷಮಿಸುತ್ತೀರೋ ಅದೇ ರೀತಿ ನನ್ನನ್ನು ಕ್ಷಮಿಸಿ. ಯುವ ಕಾಂಗ್ರೆಸ್ ಕಟ್ಟಲು ನೀವೆಲ್ಲರು ನನ್ನ ಜತೆ ಕೈ ಜೋಡಿಸಬೇಕು ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ.

ಮುಹಮ್ಮದ್ ಹಾರೀಸ್ ನಲಪಾಡ್, ಯುವ ಕಾಂಗ್ರೆಸ್ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News