ಬೆಂಗಳೂರು: ಮರದ ಕೊಂಬೆ ಬಿದ್ದು ಗಾಯಗೊಂಡಿದ್ದ ಬಾಲಕಿ ಮೃತ್ಯು
Update: 2022-02-10 20:29 IST
ಬೆಂಗಳೂರು, ಫೆ.10: ಬೈಕ್‍ನಲ್ಲಿ ಸಾಗುತ್ತಿದ್ದ ಸಂದರ್ಭದಲ್ಲಿ ಮರದ ಕೊಂಬೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಬಾಲಕಿ ಮೃತಪಟ್ಟಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕೋಮಾದಲ್ಲಿದ್ದ ರಿಚೆಲ್ ಪ್ರಿಶಾ(10) ಎಂಬ ಬಾಲಕಿ ಗುರುವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಕಳೆದ ವಾರ್ಷಿಕ ಸಾಲಿನ ಮಾ.11ರಂದು ತಂದೆ ಜೊತೆ ಬೈಕ್‍ನಲ್ಲಿ ತೆರಳುತ್ತಿದ್ದಾಗ ರಾಮಮೂರ್ತಿನಗರದ ಕೌಡಲಹಳ್ಳಿ ಸಮೀಪ ಒಣಮರದ ಕೊಂಬೆ ಬಿದ್ದು ಈಕೆ ತಲೆಗೆ ಗಂಭೀರವಾಗಿ ಗಾಯವಾಗಿತ್ತು. ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಎರಡು ವರ್ಷಗಳಿಂದ ಸತತ ಚಿಕಿತ್ಸೆ ನೀಡಿದರೂ ಬಾಲಕಿ ಬದುಕುಳಿಯಲಿಲ್ಲ.
ಒಣ ಕೊಂಬೆಗಳನ್ನು ತೆರವು ಮಾಡದೆ ಬಿಬಿಎಂಪಿ ನಿರ್ಲಕ್ಷ್ಯ ತೋರಿದ ಕಾರಣ ಬಾಲಕಿಯ ಜೀವ ಬಲಿಯಾಯಿತು ಎನ್ನುವ ಆರೋಪ ಕೇಳಿಬಂದು ಈ ಘಟನೆಗೆ ಬಿಬಿಎಂಪಿಯೇ ಕಾರಣ ಎಂದು ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.