ಬೆಂಗಳೂರು: ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಡಿಎಚ್‍ಎಸ್ ಧರಣಿ ಸತ್ಯಾಗ್ರಹ

Update: 2022-02-10 16:57 GMT

ಬೆಂಗಳೂರು, ಫೆ. 10: ಗಣರಾಜ್ಯೋತ್ಸವದಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ತೆರವುಗೊಳಿಸಿ ಅವಮಾನ ಮಾಡಿದ ರಾಯಚೂರಿನ ನ್ಯಾಯಧೀಶ ಮಲ್ಲಿಕಾರ್ಜುನ ಗೌಡ ಅವರ ವಿರುದ್ಧ ಹೈಕೋರ್ಟ್ ಕೂಡಲೇ ತನಿಖೆ ನಡೆಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ(ಡಿಎಚ್‍ಎಸ್) ಕಾರ್ಯಕರ್ತರು ಇಲ್ಲಿನ ಮೌರ್ಯ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

ಗುರುವಾರ ಡಿಎಚ್‍ಎಸ್ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ನೇತೃತ್ವದಲ್ಲಿ ಧರಣಿ ನಡೆಸಿದ ಕಾರ್ಯಕರ್ತರು, ನ್ಯಾಯಮೂರ್ತಿ ಮಲ್ಲಿಕಾರ್ಜುನಗೌಡ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಕೋರ್ಟ್‍ಗಳಲ್ಲಿ ಕಡ್ಡಾಯವಾಗಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರವನ್ನಿಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಮುಖಂಡರು, ಅಂಬೇಡ್ಕರ್ ಅವರ ಭಾವಚಿತ್ರ ತೆರವು ಮಾಡಿದರೆ ಮಾತ್ರವೇ ಧ್ವಜಾರೋಹಣ ನೆರವೇರಿಸುತ್ತೇನೆಂದು ಪಟ್ಟು ಹಿಡಿದು ಉದ್ಧಟತನ ಮೆರೆದ ಮಲ್ಲಿಕಾರ್ಜುನಗೌಡ ಕ್ರಮ ಅಕ್ಷಮ್ಯ. ಅಂಬೇಡ್ಕರ್ ಅವರು ಬದುಕಿದ್ದಾಗ ತಮ್ಮ ಜೀವನದುದ್ದಕ್ಕೂ ಇಂತಹ ಅವಮಾನ ಅನುಭವಿಸಿದ್ದು, ಅದು ಇಂದಿಗೂ ಮುಂದುವರಿಸಿದೆ ಎಂದು ಟೀಕಿಸಿದರು.

ಮನುವಾದಿ ಪ್ರೇರಿತ ಜಾತಿವಾದಿ ಶಕ್ತಿಗಳು ಅಕ್ರಮಣಕಾರಿಯಾಗಿ ಅವಮಾನ ಮಾಡಿಕೊಂಡು ಬರುತ್ತಿದ್ದು, ಇಂತಹ ಸಂವಿಧಾನ ವಿರೋಧಿ ಕ್ರಮಗಳನ್ನು ತಡೆಯಬೇಕಾದ, ನ್ಯಾಯಾಧೀಶರೆ, ಈ ಪ್ರಕರಣದಲ್ಲಿ ಹೀಗೆ ವರ್ತಿಸಿರುವುದು ಎಷ್ಟು ಸರಿ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಇಂತಹ ಕೃತ್ಯ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವಿರುದ್ಧ ಕೂಡಲೇ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಅವರನ್ನು ನ್ಯಾಯಾಧೀಶ ಸ್ಥಾನದಿಂದ ಕೂಡಲೇ ವಜಾಗೊಳಿಸಬೇಕು. ಜೊತೆಗೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಭಾವಚಿತ್ರವನ್ನು ಕೋರ್ಟ್‍ಗಳಲ್ಲಿ ಹಾಗೂ ಗಣರಾಜೋತ್ಸವ, ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ಎಲ್ಲ ರಾಷ್ಟ್ರೀಯ ಹಬ್ಬಗಳಂದು ಕಡ್ಡಾಯವಾಗಿ ಇರಿಸಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News