ಅಲ್ಪಸಂಖ್ಯಾತರ ಕಲ್ಯಾಣಕ್ಕೆ 2359.87 ಕೋಟಿ ರೂ.ಮೀಸಲಿಡುವಂತೆ ಅಬ್ದುಲ್ ಅಝೀಮ್ ಮನವಿ
ಬೆಂಗಳೂರು, ಫೆ.11: 2022-23ನೆ ಸಾಲಿನ ರಾಜ್ಯ ಬಜೆಟ್‍ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 2359.87 ಕೋಟಿ ರೂ.ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ಮನವಿ ಮಾಡಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು, ಅಲ್ಪಸಂಖ್ಯಾತರ ನಿರ್ದೇಶನಾಲಯಕ್ಕೆ 1941.33 ಕೋಟಿ ರೂ., ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ 293.03 ಕೋಟಿ ರೂ., ರಾಜ್ಯ ವಕ್ಫ್ ಮಂಡಳಿಗೆ 120.26 ಕೋಟಿ ರೂ., ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ 2.75 ಕೋಟಿ ರೂ. ಹಾಗೂ ರಾಜ್ಯ ಉರ್ದು ಅಕಾಡೆಮಿಗೆ 2.50 ಕೋಟಿ ರೂ.ಸೇರಿದಂತೆ ಒಟ್ಟು 2359.87 ಕೋಟಿ ರೂ.ಗಳನ್ನು ಮೀಸಲಿಡುವಂತೆ ಕೋರಿದ್ದಾರೆ.
ಇದಲ್ಲದೆ, ಅಲ್ಪಸಂಖ್ಯಾತರ ನಿರ್ದೇಶನಾಲಯಕ್ಕೆ ಅಲ್ಪಸಂಖ್ಯಾತರ ಬಾಹುಳ್ಯವಿರುವ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆ 500 ಕೋಟಿ ರೂ., ನಾಲ್ಕು ಐಟಿಐ ಅಥವಾ ಡಿಪ್ಲೊಮಾ ಕಾಲೇಜುಗಳನ್ನು ತೆರೆಯಲು 5.69 ಕೋಟಿ ರೂ., ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರಗಳನ್ನು ಆರಂಭಿಸಲು 1.22 ಕೋಟಿ ರೂ., ಭಗವಾನ್ ಬುದ್ಧ ಧರ್ಮ ಪ್ರವರ್ತನ ಸಂಘಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಶೇಷ ಅನುದಾನವಾಗಿ 2 ಕೋಟಿ ರೂ.ಗಳನ್ನು ನೀಡುವಂತೆ ಅಬ್ದುಲ್ ಅಝೀಮ್ ಮನವಿ ಮಾಡಿದ್ದಾರೆ.
ಬೌದ್ಧರು, ಜೈನರು, ಮುಸ್ಲಿಮರು, ಸಿಖ್ಖರು ಹಾಗೂ ಪಾರ್ಸಿ ಸಮುದಾಯಗಳ ಅನಾಥಾಶ್ರಮಗಳು, ವೃದ್ಧಾಶ್ರಮಗಳಿಗೆ 1 ಕೋಟಿ ರೂ., ಸಿಬಿಎಸ್‍ಇ ಪಠ್ಯಕ್ರಮ ಹೊಂದಿರುವ ಐದು ಮೊರಾರ್ಜಿ ದೇಸಾಯಿ ಶಾಲೆಗಳನ್ನು ಆರಂಭಿಸಲು 8.35 ಕೋಟಿ ರೂ., ಐದು ಮೋರಾರ್ಜಿ ದೇಸಾಯಿ ವಸತಿ ಕಾಲೇಜುಗಳು(ವಿಜ್ಞಾನ ಮತ್ತು ವಾಣಿಜ್ಯ) ತೆರೆಯಲು 8.15 ಕೋಟಿ ರೂ., 25 ಮೌಲಾನ ಆಝಾದ್ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲು 25 ಕೋಟಿ ರೂ.ಗಳನ್ನು ಒದಗಿಸುವಂತೆ ಅವರು ಮನವಿ ಮಾಡಿದ್ದಾರೆ.
200 ಮೌಲಾನ ಆಝಾದ್ ಶಾಲೆಗಳಿಗೆ ಶಿಕ್ಷಕರನ್ನು ನೇಮಕ ಮಾಡಲು 36.12 ಕೋಟಿ ರೂ., ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಶಿಕ್ಷಕರ ನೇಮಕ ಮಾಡಲು 3.94 ಕೋಟಿ ರೂ., ಹಾಸ್ಟೆಲ್ ಹಾಗೂ ವಸತಿ ಶಾಲೆಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ತಲಾ 300 ಹೆಚ್ಚುವರಿ ಆಹಾರ ಭತ್ತೆ ನೀಡಲು 19.45 ಕೋಟಿ ರೂ. ಹಾಗೂ ಸಮುದಾಯ ಭವನಗಳ ಕಾಮಗಾರಿಯನ್ನು ಪೂರ್ಣಗೊಳಿಸಲು 54 ಕೋಟಿ ರೂ.ಗಳನ್ನು ಒದಗಿಸುವಂತೆ ಅಬ್ದುಲ್ ಅಝೀಮ್ ಕೋರಿದ್ದಾರೆ.
ಮುಜುರಾಯಿ ಇಲಾಖೆಯಲ್ಲಿ ಜಾರಿಯಲ್ಲಿರುವ ಸಪ್ತಪದಿ ಯೋಜನೆಯಡಿ ವಿವಾಹ ನೆರವೇರಿಸಲು 55 ಸಾವಿರ ರೂ.ಗಳ ಆರ್ಥಿಕ ನೆರವನ್ನು ನೀಡಲಾಗುತ್ತಿದೆ. ಅದೇ ರೀತಿ ಅಲ್ಪಸಂಖ್ಯಾತರಿಗಾಗಿ ಜಾರಿಯಲ್ಲಿದ್ದ ಬಿದಾಯಿ ಯೋಜನೆಯನ್ನು ಪುನಃ ಆರಂಭಿಸಿ 55 ಸಾವಿರ ರೂ.ಗಳ ಆರ್ಥಿಕ ನೆರವನ್ನು ನೀಡಬೇಕು. ವಿದೇಶಗಳಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಯೋಜನೆಯನ್ನು ಪುನರ್ ಆರಂಭಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಕ್ರೈಸ್ತ ಅಭಿವೃದ್ಧಿ ಮಂಡಳಿಯ ಮಾದರಿಯಲ್ಲಿ ಜೈನ ಅಭಿವೃದ್ಧಿ ಮಂಡಳಿ ಆರಂಭಿಸಬೇಕು. ವಕ್ಫ್ ಆಸ್ತಿಗಳ ಸಂರಕ್ಷಣೆಗಾಗಿ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಕಾರ್ಯಪಡೆಯನ್ನು ರಚಿಸಬೇಕು. ವಕ್ಫ್ ಮಂಡಳಿಯ ಕಚೇರಿಗಳನ್ನು ಕಂದಾಯ ವಿಭಾಗವಾರು ಬೆಳಗಾವಿ, ಗುಲ್ಬರ್ಗ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಸ್ಥಾಪಿಸಲು ಅನುದಾನ ನೀಡಬೇಕು. ಮುಸ್ಲಿಮ್ ಸ್ಮಶಾನಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಬಜೆಟ್‍ನಲ್ಲಿ ಅನುದಾನ ನೀಡಬೇಕು ಎಂದು ಅವರು ಕೋರಿದ್ದಾರೆ.