ಸಂಘಪರಿವಾರವು ಜನರ ಭಾವನೆಗಳ ಮೇಲೆ ಪ್ರಹಾರ ಮಾಡುತ್ತಿದೆ: ಮಾವಳ್ಳಿ ಶಂಕರ್

Update: 2022-02-11 17:58 GMT
ಮಾವಳ್ಳಿ ಶಂಕರ್

ಬೆಂಗಳೂರು, ಫೆ.11: ಪ್ರಸ್ತುತ ಸನ್ನಿವೇಶದಲ್ಲಿ ರಾಜ್ಯ ಸೇರಿದಂತೆ ಇಡೀ ದೇಶದಲ್ಲೇ ಕೋಮುವಾದಿ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸಂಘಪರಿವಾರವು ಸಂವಿಧಾನಬಾಹಿರ ಚಟುವಟಿಕೆಗಳ ಮೂಲಕ ಜನರ ಭಾವನೆಗಳ ಮೇಲೆ ಪ್ರಹಾರ ಮಾಡುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‍ವಾದ)ದ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದ್ದಾರೆ. 

ಶುಕ್ರವಾರದಂದು ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರವು ನಾರಾಯಣಗುರು ಸ್ತಬ್ಧಚಿತ್ರವನ್ನು ವಿರೋಧಿಸಿದ ಬೆನ್ನಲ್ಲೆ ರಾಜ್ಯದ ಕರಾವಳಿ ಪ್ರದೇಶದಲ್ಲಿ ಪರಿಸ್ಥಿತಿ ಬಿಗಡಾಯಿಸಿತ್ತು. ಕೆಲವರು ಕರಾವಳಿಯ ಪ್ರಮುಖ ನಗರಗಳಲ್ಲಿ ನಾರಾಯಣಗುರು ಚಿತ್ರವನ್ನು ಮೆರವಣಿಗೆ ಮಾಡಿದರು. ಸರಕಾರಕ್ಕೆ ಇದು ಎಚ್ಚರಿಕೆಯಾಗಬೇಕಿತ್ತು. ಇದರ ಬನ್ನಲ್ಲೇ ಹಿಜಾಬ್ ವಿವಾದವನ್ನು ಸೃಷ್ಟಿಸಿದೆ. ಇದು ಅಲ್ಪಸಂಖ್ಯಾತರ ಹಕ್ಕುಗಳಿಗೆ ಧಕ್ಕೆಯಾಗಿದೆ ಎಂದು ಹೇಳಿದರು. 

ಕೇಸರಿಧ್ವಜವನ್ನು ರಾಷ್ಟ್ರಧ್ವಜದ ಸ್ಥಾನದಲ್ಲಿಟ್ಟು ಹಾರಿಸಲಾಗಿದೆ. ಇದು ದೇಶದ್ರೋಹವಾಗಿದ್ದರೂ, ರಾಜ್ಯದ ಮುಖ್ಯಮಂತ್ರಿಗಳು ಮೌನ ವಹಿಸಿದ್ದಾರೆ. ಆದರೆ, ಮಂತ್ರಿಗಳು ಅವಹೇಳನ ಮಾಡಿ ಮಾತನಾಡುತ್ತಿದ್ದಾರೆ. ಸಾಮಾನ್ಯ ಪ್ರಜೆಗಳು ಇಂತಹ ಅವಹೇಳನ ಹೇಳಿಕೆಗಳನ್ನು ನೀಡಿದ್ದರೆ, ಸರಕಾರವು ಅವರ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸುತ್ತಿತ್ತು ಎಂದು ತಿಳಿಸಿದರು. 

ದಲಿತ ಸಂಘರ್ಷ ಸಮಿತಿ(ಭೀಮವಾದ)ದ ಮುಖಂಡ ಮೋಹನ್ ರಾಜ್ ಮಾತನಾಡಿ, ಬಿಜೆಪಿ ಸರಕಾರವು ಅಧಿಕಾರವನ್ನು ವಹಿಸಿಕೊಂಡ ಬೆನ್ನಲ್ಲೇ, ದೇಶದಲ್ಲಿ ಸಮಸ್ಯೆಗಳು ಸೃಷ್ಟಿಯಾಗುತ್ತಿದೆ. ಆರೆಸ್ಸೆಸ್ ತನ್ನ ಪುಂಡಾಟಿಕೆಯನ್ನು ಮುಂದುವರೆಸುತ್ತಿದೆ. ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ಕಾಯ್ದೆಗಳಂತಹ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಕಾಯ್ದೆಗಳನ್ನು ಜಾರಿ ಮಾಡಿ ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆಯುಂಟು ಮಾಡಲಾಗುತ್ತಿದೆ ಎಂದು ಆರೋಪಿಸಿದರು. 

ವಕೀಲೆ ಮತ್ತು ಸಾಮಾಜಿಕ ಹೋರಾಟಗಾರ್ತಿ ಮೈತ್ರಿಯೀ ಮೆನನ್ ಮಾತನಾಡಿ, ಸರಕಾರವು ಮುಸಲ್ಮಾನ ವಿದ್ಯಾರ್ಥಿನಿಯರ ಶೈಕ್ಷಣಿಕ ಹಕ್ಕನ್ನು ಕಸಿದುಕೊಳ್ಳುವ ಸುತ್ತೋಲೆಯನ್ನು ಹೊರಡಿಸಿದೆ. ಇದನ್ನು ಕೂಡಲೇ ಹಿಂಪಡೆದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ  ಜಮಾಅತೆ -ಇ- ಇಸ್ಲಾಮಿ ಹಿಂದ್ ಕರ್ನಾಟಕ ಇದರ ಉಪಾಧ್ಯಕ್ಷ ಮುಹಮ್ಮದ್ ಯೂಸುಫ್ ಕನ್ನಿ, ವೈ.ಜೆ. ರಾಜೇಂದ್ರ, ಪಿರ್ದೋಸಾ ಖಾನ್, ವೀರಸಂಗಯ್ಯ, ಅರವಿಂದ ನಾರಾಯಣ, ಅಕ್ಕಯ್ ಪದ್ಮಸಾಲಿ ಉಪಸ್ಥಿತರಿದ್ದರು. 

ಸಂವಿಧಾನದ ಮೇಲೆ ಸರಕಾರವು ಪ್ರಹಾರ ಮಾಡುತ್ತಿದೆ

ಇತ್ತೀಚೆಗೆ ಸರಕಾರವು ಸಂವಿಧಾನದ ಮೇಲೆ ಪ್ರಹಾರವನ್ನು ಮಾಡುತ್ತಿದೆ. ರಾಯಚೂರಿನ ಘಟನೆಯು ಐತಿಹಾಸಿಕವಾಗಿ ಕರಾಳ ಘಟನೆಯಾಗಿದ್ದು, ದಲಿತರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ರಾಯಚೂರಿನಲ್ಲಿ ಗಣರಾಜ್ಯೋತ್ಸವದಂದು ಅಂಬೇಡ್ಕರ್ ಭಾವಚಿತ್ರವನ್ನು ತೆರವುಗೊಳಿಸಿ ಧ್ವಜಾರೋಹಣ ಮಾಡಲಾಯಿತು. ಅಂಬೇಡ್ಕರ್ ಭಾವಚಿತ್ರವನ್ನು ಇಡದಿದ್ದರೆ, ಕ್ಷಮಿಸಬಹುದಿತ್ತು. ಆದರೆ ಭಾವಚಿತ್ರವನ್ನು ಇಟ್ಟು, ಅದನ್ನು ತೆಗೆದ ಬಳಿಕವೇ ಧ್ವಜವನ್ನು ಹಾರಿಸುತ್ತೇನೆ ಎಂದಿದ್ದು, ಸಂವಿಧಾನದ ಆಶಯಗಳಿಗೆ ಧಕ್ಕೆಯಾಗಿದೆ. ಇದರ ವಿರುದ್ಧ ಸರಕಾರವು ಯಾವುದೇ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗದಿರುವುದು ದುರಂತದ ವಿಷಯವಾಗಿದೆ. 

-ಮಾವಳ್ಳಿ ಶಂಕರ್, ರಾಜ್ಯ ಸಂಚಾಲಕರು, ದಸಂಸ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News