×
Ad

ಬೆಂಗಳೂರು: ಹಿಜಾಬ್ ಕುರಿತು ಶಿಕ್ಷಕಿ ಅಸಭ್ಯ ಪದ ಬಳಕೆ ಆರೋಪ; ಪೋಷಕರ ಆಕ್ರೋಶ

Update: 2022-02-12 11:08 IST

ಬೆಂಗಳೂರು, ಫೆ.12: ಇತ್ತೀಚಿಗೆ ರಾಜ್ಯದೆಲ್ಲೆಡೆ ಉಲ್ಬಣಗೊಂಡಿರುವ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದ ನಡುವೆ ರಾಜಧಾನಿ ಬೆಂಗಳೂರಿನಲ್ಲಿ ಖಾಸಗಿ ಶಾಲಾ ಶಿಕ್ಷಕಿಯೊಬ್ಬರು ಹಿಜಾಬ್ ಕುರಿತು ಅಸಭ್ಯ ಪದ ಬಳಸಿದ್ದಾರೆಂದು ಆರೋಪಿಸಿ ಪೋಷಕರು ಆಕ್ರೋಶ ಹೊರಹಾಕಿದರು.

ಶನಿವಾರ ಇಲ್ಲಿನ ಚಂದ್ರಾ ಲೇಔಟ್‍ನ ಪ್ರತಿಷ್ಠಿತ ವಿದ್ಯಾಸಾಗರ್ ಇಂಗ್ಲಿಷ್ ಪಬ್ಲಿಕ್ ಸ್ಕೂಲ್ ಶಿಕ್ಷಕಿ ಶಶಿಕಲಾ ಎಂಬುವರು ಎಂದಿನಂತೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಉಲ್ಲೇಖಿಸಿ ಅಸಭ್ಯ ಪದ ಬಳಸಿ ಮಾತನಾಡಿದ್ದಲ್ಲದೆ, ಫಲಕದ ಮೇಲೂ ನಿಂದಿಸುವ ಬರಹಗಳನ್ನು ಬರೆದರು ಎಂದು ಆರೋಪಿಸಿ ಪೋಷಕರು ಶಾಲಾ ಆವರಣದಲ್ಲಿ ಜಮಾಯಿಸಿದರು. ಈ ಸಂದರ್ಭದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಶಿಕ್ಷಕರು ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೆ, ಮುಸ್ಲಿಮ್ ಸಮುದಾಯ, ಧರ್ಮ ಕುರಿತು ಶಿಕ್ಷಕರು ಉದ್ದೇಶಪೂರ್ವಕವಾಗಿ ಮಕ್ಕಳಿಗೆ ನಿಂದಿಸಿದ್ದಾರೆ. ಈ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನಾವೂ ಶಾಲೆ ಆವರಣಕ್ಕೆ ಬಂದು ಆಡಳಿತ ಮಂಡಳಿಯ ಗಮನ ಸೆಳೆದವು ಎಂದು ಪೋಷಕರು ಹೇಳಿದರು.

ಪ್ರಮುಖವಾಗಿ ಶಿಕ್ಷಕಿ ಫಲಕದ ಮೇಲೆ ಅಸಭ್ಯ ಬರಹಗಳನ್ನು ಬರೆದಿದ್ದಾರೆ. ಇದನ್ನು ಮಕ್ಕಳೇ ನಮ್ಮ ಬಳಿ ಬಂದು ಹೇಳಿದ್ದಾರೆ. ನಾವೂ ಅಲ್ಲಿಗೆ ಹೋದಾಗ ಎಲ್ಲವನ್ನು ಅಳಿಸಲಾಗಿತ್ತು. ಆದರೆ, ತಪ್ಪಿತಸ್ಥರ ಶಿಕ್ಷಕಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಡಳಿತ ಮಂಡಳಿಗೆ ಮನವಿ ಮಾಡಿದ್ದೇವೆ ಎಂದು ಪೋಷಕರು ತಿಳಿಸಿದರು.

ಸ್ಥಳಕ್ಕೆ ಧಾವಿಸಿದ ಪೋಲಿಸರು, ಪೋಷಕರು ಹಾಗೂ ವಿದ್ಯಾರ್ಥಿಗಳ ಮನವೊಲಿಸಿದರು. ಆನಂತರ ಪೋಷಕರು ಮನೆಗಳಿಗೆ ವಾಪಸ್ಸು ಹೊರಟರು.

ಶಿಕ್ಷಕಿ ವಿರುದ್ಧ ದೂರು: ಶಾಲಾ ತರಗತಿಯಲ್ಲಿ ಫಲಕದ ಮೇಲೆ ಶಿಕ್ಷಕಿಯೊಬ್ಬರು ಬರಹ ಬರೆದು ಮಕ್ಕಳನ್ನು ಅವಮಾನಿಸಿದ್ದಾರೆಂದು ಆರೋಪಿಸಿ ಪೋಷಕರು, ಚಂದ್ರಾ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಬೈಲಾಂಜನಪ್ಪ, ಹಿಜಾಬ್ ವಿಚಾರಕ್ಕೆ ಶಾಲೆಬಳಿ ಪ್ರತಿಭಟನೆ ನಡೆದಿಲ್ಲ. ಶಿಕ್ಷಕಿಯೊಬ್ಬರು ಅಸಭ್ಯ ಪದ ಬಳಸಿದರು ಎನ್ನುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಶಿಕ್ಷಕರು ಮತ್ತು ಕೆಲ ಪೋಷಕರ ಜೊತೆ ಮಾತುಕತೆ ನಡೆಸಿದ್ದೇವೆ ಎಂದರು.

ಶಿಕ್ಷಕಿಯ ಬಳಿಯೂ ನಾವು ವಿವರಣೆಯನ್ನು ಪಡೆದುಕೊಂಡಿದ್ದೇವೆ. ಯಾವುದೇ ದುರುದ್ದೇಶ, ಧರ್ಮ ನಿಂದನೆ ಮಾಡಿಲ್ಲ ಎಂದು ಹೇಳಿದ್ದಾರೆ. ಆದರೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಶಿಕ್ಷಕಿ ಅಮಾನತು
ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪದ ಹಿನ್ನೆಲೆಯಲ್ಲಿ ಚಂದ್ರಾ ಲೇಔಟ್‍ನ ವಿದ್ಯಾಸಾಗರ್ ಶಾಲೆಯ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ. 

ವಿದ್ಯಾಸಾಗರ್ ಶಾಲೆಯ 7ನೇ ತರಗತಿ ಮಕ್ಕಳಿಗೆ ಶಿಕ್ಷಕರೊಬ್ಬರು ಹಿಜಾಬ್ ವಿಚಾರವಾಗಿ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಕಿ ಶಶಿಕಲಾರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಪೋಷಕರ ಆಕ್ರೋಶಕ್ಕೆ ಹಿಜಾಬ್ ಕಾರಣವಲ್ಲ: ಕಮಲ್ ಪಂತ್

ಖಾಸಗಿ ಶಾಲೆ ಮುಂಭಾಗ ನಡೆದ ಪೋಷಕರ ಪ್ರತಿಭಟನೆ, ಆಕ್ರೋಶಕ್ಕೆ ಹಿಜಾಬ್ ಧರಿಸುವುದು ಕಾರಣವಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಕಾರಣಕ್ಕಾಗಿ ಪ್ರತಿಭಟನೆ ನಡೆದಿಲ್ಲ. ಹೈಕೋರ್ಟ್ ಆದೇಶ ಏನು ಬಂದಿದೆ ಎಂದು ತಿಳಿ ಹೇಳಿದ್ದೇವೆ. ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟಿದ್ದೇವೆ. ಹಿಜಾಬ್ ಸಂಬಂಧ ಯಾರೂ ಪರ ಮತ್ತು ವಿರೋಧ ಸಂದೇಶಗಳನ್ನು ಹಾಕಬಾರದು ಎಂದು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News