ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ
ಬಂಟ್ವಾಳ, ಫೆ.12: ಹಲವು ಸಮಯದಿಂದ ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದ ನಾಗರಿಕರು ಮನವಿ ಮೇಲೆ ಮನವಿ ನೀಡಿದರು ಯಾವುದೇ ಸ್ಪಂದನೆ ನೀಡಿಲ್ಲ ಎಂದು ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರ ಕಾರನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದು ನಿಲ್ಲಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪುರಸಭಾ ವ್ಯಾಪ್ತಿಯ ಮೆಲ್ಕಾರ್, ರೆಂಗೇಲು ಮೊದಲಾದ ಭಾಗಗಳ ಸಾವಿರಕ್ಕೂ ಅಧಿಕ ಮನೆಗಳಿಗೆ ಹಲವು ದಿನಗಳಿಂದ ಕುಡಿಯುವ ನೀರು ಇಲ್ಲದೆ ಜನರು ಹಾಹಾಕಾರ ಪಡುತ್ತಿದ್ದಾರೆ. ಈ ಬಗ್ಗೆ ಪುರಸಭೆ ಜನರು ಮನವಿ ಮೇಲೆ ಮನವಿ ಮಾಡಿದರೂ ಮುಖ್ಯಾಧಿಕಾರಿ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಜನರು ತೀವ್ರ ಆಕ್ರೋಶಗೊಂಡಿದ್ದರು.
ಮೆಲ್ಕಾರ್ ಗೆ ಆಗಮಿಸಿದ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರಲ್ಲಿ ಸ್ಥಳೀಯ ಜನರು ನೀರಿನ ಸಮಸ್ಯೆಯ ಬಗ್ಗೆ ವಿವರಿಸಿ ಮತ್ತೆ ಮನವಿ ಮಾಡಿದರು. ಈ ವೇಳೆ ಮುಖ್ಯಾಧಿಕಾರಿ ಜನರಿಗೆ ಸಮಸ್ಯೆಯನ್ನು ಪರಿಹಾರ ಮಾಡುವ ಬಗ್ಗೆ ಸ್ಪಂದನೆ ನೀಡುವ ಬದಲು ಜನರೊಂದಿಗೆ ದರ್ಪದ ಮಾತುಗಳನ್ನಾಡಿದ್ದಾರೆ ಎನ್ನಲಾಗಿದ್ದು, ಸ್ಥಳದಲ್ಲಿದ ಜನರು ಆಕ್ರೋಶ ವ್ಯಕ್ತಪಡಿಸಿದರು.
ಜನರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಮತ್ತು ಇಂಜಿನಿಯರ್ ತಮ್ಮ ಕಾರಿನಲ್ಲಿ ಕುಳಿತು ಸ್ಥಳದಿಂದ ಹೊರಡಲು ಮುಂದಾಗುತ್ತಿದ್ದಂತೆ ರೊಚ್ಚಿಗೆದ್ದ ಜನರು ಕಾರಿಗೆ ಅಡ್ಡನಿಂತು ತಡೆದು ಮುಖ್ಯಾಧಿಕಾರಿಗೆ ಧಿಕ್ಕಾರ ಕೂಗಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಹಿತ ವಿವಿಧ ಕಾರಣದಿಂದ ಬಂಟ್ವಾಳ ಪುರಸಭೆಯ ವ್ಯಾಪ್ತಿಯ ಹಲವು ಭಾಗದಲ್ಲಿ ಕುಡಿಯುವ ನೀರಿಲ್ಲದೆ ಜನರು ಹಾಹಾಕಾರ ಪಡುತ್ತಿದ್ದಾರೆ. ಹಲವು ದಿನಗಳು ಕಳೆದರೂ ಸಮಸ್ಯೆಗೆ ಪರಿಹಾರ ಕಾಣುತ್ತಿಲ್ಲ ಎಂದು ಜನರು ಆರೋಪಿಸಿದ್ದಾರೆ.
ಈ ಬಗ್ಗೆ ಪುರಸಭೆಯ ಸದಸ್ಯರಲ್ಲಿ ವಿಚಾರಿಸಿದರೆ, ಸಮಸ್ಯೆ ಪರಿಹಾರಕ್ಕೆ ಮುಖ್ಯಾಧಿಕಾರಿಯಿಂದ ಸ್ಪಂದನೆ ದೊರೆಯುತ್ತಿಲ್ಲ. ಮುಖ್ಯಾಧಿಕಾರಿಗೆ ಕರೆ ಮಾಡಿದರೆ ನನಗೆ ಜಿಲ್ಲಾಧಿಕಾರಿ ಬೇರೆಡೆ ಕೆಲಸ ನೀಡಿದ್ದಾರೆ ಎಂದು ಸಬೂಬು ಹೇಳುತ್ತಿದ್ದಾರೆ. ಇದರಿಂದ ಇಲ್ಲಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.