×
Ad

ಪರಿಷತ್‌ ಸದಸ್ಯರ ಆಯ್ಕೆ ಸರಿಯಾಗಿ ನಡೆಯುತ್ತಿಲ್ಲ: ಸಭಾಪತಿ ಬಸವರಾಜ ಹೊರಟ್ಟಿ

Update: 2022-02-12 16:31 IST

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯರ ಆಯ್ಕೆ ಸಮರ್ಪಕವಾಗಿ ನಡೆಯುತ್ತಿಲ್ಲ. ಕಲೆ, ಸಾಹಿತ್ಯ, ರಂಗಭೂಮಿ ಮತ್ತಿತರ ಕ್ಷೇತ್ರಗಳ ಸಾಧಕರಿಗೆ ಮೀಸಲಾಗಿದ್ದ ಸ್ಥಾನಗಳನ್ನೂ ಚುನಾವಣೆಗಳಲ್ಲಿ ಸೋತ ರಾಜಕಾರಣಿಗಳಿಗೆ ನೀಡಲಾಗುತ್ತಿದೆ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಹಿತಿ ಎಂದು ಹೇಳಿಕೊಂಡು ಪುಸ್ತಕ ಬರೆದ ರಾಜಕಾರಣಿಯನ್ನು ಪರಿಷತ್‌ಗೆ ತಂದು ಕೂರಿಸುತ್ತಾರೆ. ಚುನಾವಣೆಯಲ್ಲಿ ಸೋತವರನ್ನು ಇಲ್ಲಿ ನಾಯಕರನ್ನಾಗಿ ಮಾಡಲಾಗುತ್ತಿದೆ. ಇದರಿಂದಾಗಿ ಮೇಲ್ಮನೆಯ ಕುರಿತು ಟೀಕೆಗಳು ಬರುವಂತಾಗಿದೆ’ ಎಂದರು.

ಡಿ.ವಿ. ಗುಂಡಪ್ಪ, ಸಿದ್ದಲಿಂಗಯ್ಯ, ಖಾದ್ರಿ ಶಾಮಣ್ಣ, ಎ.ಕೆ. ಸುಬ್ಬಯ್ಯ ಅವರಂತಹ ಮಹಾನ್‌ ವ್ಯಕ್ತಿಗಳು ಸದಸ್ಯರಾಗಿದ್ದ ಸದನ ಇದು. ಬೆಳಿಗ್ಗೆ 9.30ಕ್ಕೆ ಆರಂಭವಾಗುವ ಕಲಾಪ ರಾತ್ರಿಯವರೆಗೂ ನಡೆಯುತ್ತಿತ್ತು. ಈಗ ಚುನಾವಣೆಗಳಲ್ಲಿ ಸೋತವರು ಬಳಿಕ ಮೇಲ್ಮನೆ ಸದಸ್ಯರಾಗುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದರು.

ಆಯಾ ಕ್ಷೇತ್ರಗಳಿಗೆ ಮೀಸಲಾದ ಸ್ಥಾನಗಳನ್ನು ಅದೇ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಬೇಕು. ಯಾವುದೇ ಪಕ್ಷದ ಸರ್ಕಾರ ಇದ್ದರೂ ಈ ನೀತಿ ಪಾಲಿಸಬೇಕು. ಆಗ ಮೇಲ್ಮನೆಯ ಗೌರವ ಹೆಚ್ಚಿಸಬಹುದು. ಈ ದಿಸೆಯಲ್ಲಿ ಎಲ್ಲರೂ ಪ್ರಾಮಾಣಿಕವಾದ ಪ್ರಯತ್ನ ನಡೆಸಬೇಕು ಎಂದು ಸಲಹೆ ನೀಡಿದರು.

ಅಡ್ಡ ದಾರಿ ಹಿಡಿಸುವ ಕೆಲಸ: ಹಿಜಾಬ್‌– ಕೇಸರಿ ಶಾಲು ವಿವಾದದ ಕುರಿತು ಪ್ರತಿಕ್ರಿಯಿಸಿದ ಸಭಾಪತಿ, ‘ಮಕ್ಕಳನ್ನು ಅಡ್ಡ ದಾರಿ ಹಿಡಿಸುವ ಕೆಲಸವನ್ನು ಪೋಷಕರು ಮತ್ತು ರಾಜಕಾರಣಿಗಳು ಮಾಡುತ್ತಿದ್ದಾರೆ. ಇಂತಹ ಕೆಟ್ಟ ಸಂಪ್ರದಾಯವನ್ನು ಶಾಲೆಗಳಲ್ಲಿ ತರಬಾರದು’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News