×
Ad

ಹೆಬ್ರಿ ತಾಲೂಕು ಪಂಚಾಯಿತಿಗೆ ಶೀಘ್ರ ನೂತನ ಕಟ್ಟಡ: ಸಚಿವ ಸುನಿಲ್ ಕುಮಾರ್

Update: 2022-02-12 20:20 IST

ಹೆಬ್ರಿ, ಫೆ.12: ಹೊಸ ತಾಲೂಕಾಗಿರುವ ಹೆಬ್ರಿಯ ಎಲ್ಲಾ ಅವಶ್ಯಕತೆಗಳನ್ನು ಆದ್ಯತೆ ನೀಡಿ ಮಾಡಲಾಗುತ್ತಿದೆ. ಅತೀ ಶೀಘ್ರದಲ್ಲಿ ಹೆಬ್ರಿ ತಾಲೂಕು ಪಂಚಾಯತ್‌ಗೆ ನೂತನ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

ಹೆಬ್ರಿಯ ರಿಂಗ್ ರಸ್ತೆಯ ಬಳಿ 2.38 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಹೆಬ್ರಿ ಪೊಲೀಸ್ ಠಾಣೆಯ ನೂತನ ಕಟ್ಟಡಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡುತಿದ್ದರು.

ರಾಷ್ಟ್ರೀಯ ಹೆದ್ದಾರಿ ಸಹಿತ ಹಲವು ಸಮಸ್ಯೆಯಿಂದಾಗಿ ಹೆಬ್ರಿ ಪೇಟೆಯ ನಡುವೆ ಮುಖ್ಯ ರಸ್ತೆಯಲ್ಲಿರುವ ಪೊಲೀಸ್ ಠಾಣೆಯನ್ನು ಸ್ಥಳಾಂತರಿಸುವ ಅನಿವಾರ್ಯತೆ ಇದ್ದು, ವಿಶಾಲ ಜಾಗದಲ್ಲಿ ಸಕಲ ವ್ಯವಸ್ಥೆಗಳೊಂದಿಗೆ ನೂತನ ಠಾಣೆಯು ಶೀಘ್ರದಲ್ಲೇ ನಿರ್ಮಾಣಗೊಳ್ಳಲಿದೆ ಎಂದರು.

ಉಡುಪಿ ಎಸ್ಪಿ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಸಿದ್ಧಲಿಂಗಪ್ಪ, ಕುಂದಾಪುರ ಉಪ ವಿಭಾಗಾಧಿಕಾರಿ ಕೆ.ರಾಜು, ಹೆಬ್ರಿ ತಹಶೀಲ್ಧಾರ್ ಪುರಂದರ ಕೆ., ಹೆಬ್ರಿ ಪಂಚಾಯಿತಿ ಅಧ್ಯಕ್ಷೆ ಮಾಲತಿ, ಮೆಸ್ಕಾಂ ನಿರ್ದೇಶಕ ಮುನಿಯಾಲು ದಿನೇಶ ಪೈ, ಹೆಬ್ರಿ ತಾಲೂಕು ಪಂಚಾಯಿತ್ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಕೆಜಿ, ಕಾರ್ಕಳ ಪೊಲೀಸ್ ಉಪಾಧೀಕ್ಷಕ ವಿಜಯ ಪ್ರಸಾದ್, ಸರ್ಕಲ್ ಇನ್ ಸ್ಪೆಕ್ಟರ್ ಸಂಪತ್ ಕುಮಾರ್, ಹೆಬ್ರಿ ಸಬ್ ಇನ್‌ಸ್ಪೆಕ್ಟರ್ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

ಎಚ್.ಗುರುದಾಸ ಶೆಣೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News