ಸಾವರ್ಕರ್ ಜೀವನ ಚರಿತ್ರೆಯ ಲೇಖಕ ವಿಕ್ರಮ ಸಂಪತ್ ವಿರುದ್ಧ ಇತಿಹಾಸಕಾರರಿಂದ ಕೃತಿಚೌರ್ಯದ ಆರೋಪ

Update: 2022-02-14 15:35 GMT
Photo: Twitter

ಹೊಸದಿಲ್ಲಿ,ಫೆ.14: ಹಿಂದುತ್ವ ಸಿದ್ಧಾಂತವಾದಿ ವಿ.ಡಿ.ಸಾವರ್ಕರ್ ಅವರ ಎರಡು ಸಂಪುಟಗಳಲ್ಲಿಯ ಜೀವನ ಚರಿತ್ರೆಯ ಲೇಖಕ ವಿಕ್ರಮ ಸಂಪತ್ ಅವರು ಕೃತಿಚೌರ್ಯವನ್ನೆಸಗಿದ್ದಾರೆಂದು ಆರೋಪಿಸಿ ಅಮೆರಿಕದಲ್ಲಿ ನೆಲೆಸಿರುವ ಮೂವರು ಭಾರತೀಯ ಇತಿಹಾಸಕಾರರು ಬ್ರಿಟನ್ ನ ರಾಯಲ್ ಹಿಸ್ಟಾರಿಕಲ್ ಸೊಸೈಟಿ (ಆರ್ಎಚ್ಎಸ್)ಗೆ ಪತ್ರವನ್ನು ಬರೆದಿದ್ದಾರೆ.

ಆರ್ಎಚ್ಎಸ್ ಇತ್ತೀಚಿಗೆ ಸಂಪತ್ ಅವರಿಗೆ ತನ್ನ ಸದಸ್ಯತ್ವವನ್ನು ನೀಡಿದೆ.
ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಇತಿಹಾಸಕಾರರಾದ ಜಾರ್ಜ್ಟೌನ್ ವಿವಿಯ ಪ್ರೊಫೆಸರ್ ಅನನ್ಯಾ ಚಕ್ರವರ್ತಿ, ಸಾಂತಾ ಕ್ಲಾರಾ ವಿವಿಯ ರೋಹಿತ ಚೋಪ್ರಾ ಮತ್ತು ರಟ್ಗಝ್ ವಿವಿಯ ಆಡ್ರೆ ಟ್ರಶ್ಕ್ ಅವರು ಆರ್ಎಚ್ಎಸ್ನ ಅಧ್ಯಕ್ಷೆ ಎಮ್ಮಾ ಗ್ರಿಫಿನ್ ಅವರಿಗೆ ಬರೆದಿರುವ ಪತ್ರದಲ್ಲಿ 2017ರಲ್ಲಿ ಸಂಪತ್ ಪ್ರಕಟಿಸಿದ್ದ ಲೇಖನವೊಂದರಲ್ಲಿಯ ಹಲವಾರು ವಾಕ್ಯಗಳನ್ನು ಬೇರೆ ಎರಡು ಲೇಖನಗಳಿಂದ ನೇರವಾಗಿ ಪದಶಃ ಎತ್ತಿಕೊಳ್ಳಲಾಗಿದೆ ಅಥವಾ ಮೂಲ ಲೇಖನಗಳನ್ನು ಉಲ್ಲೇಖಿಸದೆ ಬೇರೆ ಶಬ್ದಗಳನ್ನು ಬಳಸಿ ರಚಿಸಲಾಗಿದೆ ಎಂದು ಬೆಟ್ಟು ಮಾಡಿದ್ದಾರೆ.

ಎರಡು ಲೇಖನಗಳ ಪೈಕಿ ಒಂದು ಉಲ್ಲೇಖಿತ ‘ಪೋಸ್ಟ್ಕೊಲೊನಿಯಲ್ ಸ್ಟಡೀಸ್’ ನಲ್ಲಿ 2013ರಲ್ಲಿ ಪ್ರಕಟಗೊಂಡಿದ್ದ ಕ್ಯಾಲಿಫೋರ್ನಿಯಾ ವಿವಿಯ ಐರ್ವಿನ್ ಇತಿಹಾಸಕಾರ ವಿನಾಯಕ ಚತುರ್ವೇದಿಯವರ ‘ಓರ್ವ ಕ್ರಾಂತಿಕಾರಿಯ ಜೀವನ ಚರಿತ್ರೆ:ವಿ.ಡಿ.ಸಾವರ್ಕರ್ ಅವರ ಪ್ರಕರಣ’ ಶೀರ್ಷಿಕೆಯದ್ದಾಗಿದ್ದರೆ, ಇನ್ನೊಂದು 2010ರಲ್ಲಿ ಸೋಷಿಯಲ್ ಹಿಸ್ಟರಿ ಜರ್ನಲ್ನಲ್ಲಿ ಪ್ರಕಟಗೊಂಡಿದ್ದ ಕ್ಯಾಲಿಫೋರ್ನಿಯಾ ವಿವಿಯ ಪ್ರೊಫೆಸರ್ ಜಾನಕಿ ಬಾಖ್ಲೆ ಅವರು ಬರೆದಿದ್ದ ‘ಸಾವರ್ಕರ್ (1883-1966),ದೇಶದ್ರೋಹ ಮತ್ತು ಕಣ್ಗಾವಲು:ವಸಾಹತು ಯುಗದಲ್ಲಿ ಕಾನೂನಿನ ಆಡಳಿತ ’ಎಂಬ ಲೇಖನವಾಗಿದೆ.


 
ಸಂಪತ್ ಅವರ ಎರಡು ಸಂಪುಟಗಳ ಸಾವರ್ಕರ್ ಜೀವನ ಚರಿತ್ರೆಯ ಒಂದು ಭಾಗ ಮತ್ತು ವೆಸ್ಲಿಯನ್ ವಿವಿಯ ವಿದ್ಯಾರ್ಥಿ ಪಾಲ್ ಶಾಫೆಲ್ ಅವರು 2012ರಲ್ಲಿ ಬರೆದಿದ್ದ ಪ್ರಶಸ್ತಿ ಪುರಸ್ಕೃತ ಪ್ರಬಂಧದ ನಡುವೆ ಹಲವಾರು ಹೋಲಿಕೆಗಳನ್ನೂ ಮೂವರು ಇತಿಹಾಸಕಾರರು ಉಲ್ಲೇಖಿಸಿದ್ದಾರೆ. ಇವೆಲ್ಲವೂ ಕೃತಿ ಚೌರ್ಯ,ಹಕ್ಕುಸ್ವಾಮ್ಯ ಉಲ್ಲಂಘನೆ ಮತ್ತು ಆರ್ಎಚ್ಎಸ್ನ ನೀತಿ ಸಂಹಿತೆಯ ಉಲ್ಲಂಘನೆಗೆ ಸಮನಾಗಿವೆ ಎಂದು ಆರೋಪಿಸಿರುವ ಅವರು,ಸೊಸೈಟಿಯು ಸಂಪತ್ ಸದಸ್ಯತ್ವವನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಇಂಡಿಯಾ ಫೌಂಡೇಷನ್ ಜರ್ನಲ್ನಲ್ಲಿ ಪ್ರಕಟವಾಗಿದ್ದ ಸಂಪತ್ ರ ‘ಕ್ರಾಂತಿಕಾರಿ ನಾಯಕ ವಿನಾಯಕ ದಾಮೋದರ ಸಾವರ್ಕರ್ ’ ಪ್ರಬಂಧವನ್ನು ಓದಿದಾಗ ಮೊದಲ ಬಾರಿಗೆ ತಮ್ಮಲ್ಲಿ ಸಂಶಯಗಳು ಮೂಡಿದ್ದವು ಮತ್ತು ಕೆಲವು ನುಡಿಗಟ್ಟುಗಳು ವಿನಾಯಕ ಚತುರ್ವೇದಿಯವರ ಲೇಖನವನ್ನು ಗಮನಾರ್ಹವಾಗಿ ಹೋಲುತ್ತಿದ್ದುದು ಕಂಡು ಬಂದಿತ್ತು ಎಂದು ಈ ಮೂವರು ಇತಿಹಾಸಕಾರರು ಆರ್ಎಚ್ಎಸ್ಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ಸಂಪತ್ ಅವರ ಪ್ರಬಂಧವು ಸುಮಾರು ಶೇ.50ರಷ್ಟು ಕೃತಿಚೌರ್ಯವಾಗಿದೆ ಎನ್ನುವುದನ್ನು ಕೃತಿಚೌರ್ಯ ಪತ್ತೆ ತಂತ್ರಾಂಶವು ಬಯಲುಗೊಳಿಸಿದೆ ಮತ್ತು ಈ ಕೃತಿಚೌರ್ಯದ ಶೇ.50ರಷ್ಟನ್ನು ಚತುರ್ವೇದಿ ಮತ್ತು ಬಾಖ್ಲೆ ಅವರ ಲೇಖನಗಳಿಂದ ಎತ್ತಿಕೊಳ್ಳಲಾಗಿದೆ ಎಂದು ಈ ಇತಿಹಾಸಕಾರರು ಬೆಟ್ಟು ಮಾಡಿದ್ದಾರೆ.
 
ಸಂಪತ್‌ ರಿಂದ ಇಂತಹುದೇ ಉಲ್ಲಂಘನೆಗಳ ಇತರ ಉದಾಹರಣೆಗಳು ತಮ್ಮ ಬಳಿಯಿವೆ ಎಂದು ಹೇಳಿರುವ ಚಕ್ರವರ್ತಿ, ಚೋಪ್ರಾ ಮತ್ತು ಟ್ರಶ್ಕ್ ಅವರು, ಆರ್ಎಚ್ಎಸ್ ಸಂಪತ್ ರ ಸದಸ್ಯತ್ವವನ್ನು ಮರುಪರಿಶೀಲಿಸಬೇಕು ಮತ್ತು ಅವರ ಬರಹಗಳನ್ನು ಇನ್ನಷ್ಟು ಪರಿಶೀಲನೆಗೊಳಪಡಿಸಬೇಕು ಎಂಬ ಉದ್ದೇಶದೊಂದಿಗೆ ಮಾತ್ರ ತಾವು ಪ್ರಾಥಮಿಕವಾಗಿ ಕಂಡುಕೊಂಡಿರುವ ಅಂಶಗಳನ್ನು ಹಂಚಿಕೊಂಡಿರುವುದಾಗಿ ತಿಳಿಸಿದ್ದಾರೆ. ವಿದ್ವಾಂಸರು ಈವರೆಗೆ ಸಂಪತ್ ಅವರ ಬರಹಗಳನ್ನು ಭಾಗಶಃ ಕಡೆಗಣಿಸಿದ್ದಾರೆ,ಏಕೆಂದರೆ ಸಂಪತ್ ಅವರ ಲೇಖನಗಳು ಹೆಚ್ಚಾಗಿ ವಿಮರ್ಶೆಗೊಳಪಟ್ಟಿಲ್ಲ ಎಂದು ಅವರು ಹೇಳಿದ್ದಾರೆ.

ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿರುವ ಸಂಪತ್, ತನ್ನ ಬರಹಗಳಲ್ಲಿ ಉಲ್ಲೇಖಗಳ ಆಕರಗಳನ್ನು ತಾನು ಸೂಚಿಸಿದ್ದೇನೆ ಎಂದಿದ್ದಾರೆ. ಮೂವರು ಇತಿಹಾಸಕಾರರನ್ನು ಸಂಶಯಾಸ್ಪದ ತ್ರಿಮೂರ್ತಿಗಳು ಎಂದು ಬಣ್ಣಿಸಿರುವ ಸಂಪತ್, ಕೃತಿಚೌರ್ಯವೆಂದರೇನು ಮತ್ತು ಹಕ್ಕುಸ್ವಾಮ್ಯ ಕಾನೂನುಗಳು ಏತಕ್ಕಾಗಿ ಇವೆ ಎಂಬ ಬಗ್ಗೆ ಅವರ ತಿಳುವಳಿಕೆ ತುಂಬ ಕಡಿಮೆಯಿದೆ ಎಂದಿದ್ದಾರೆ.

ಈ ಇತಿಹಾಸಕಾರರು ಬೆಟ್ಟು ಮಾಡಿರುವ ಇಂಡಿಯಾ ಫೌಂಡೇಷನ್ ಜರ್ನಲ್ನಲ್ಲಿಯ ಲೇಖನವು ಪ್ರಬಂಧ ಅಥವಾ ಶೈಕ್ಷಣಿಕ ಜರ್ನಲ್ ಲೇಖನವಾಗಿರಲಿಲ್ಲ ಮತ್ತು 2017ರಲ್ಲಿ ದಿಲ್ಲಿಯಲ್ಲಿ ನಡೆದಿದ್ದ ಸಮ್ಮೇಳನವೊಂದರಲ್ಲಿ ತಾನು ಮಾಡಿದ್ದ ಭಾಷಣದ ಲಿಪ್ಯಂತರವಾಗಿತ್ತಷ್ಟೇ ಎಂದು ಸಂಪತ್ ಸಮಜಾಯಿಷಿ ನೀಡಿದ್ದಾರೆ.

Writer - ವರದಿ ಕೃಪೆ: thewire.in

contributor

Editor - ವರದಿ ಕೃಪೆ: thewire.in

contributor

Similar News