×
Ad

ನ್ಯಾಯವಾದಿ ದೇವದತ್ ಕಾಮತ್‌ಗೆ ಬೆಂಬಲ ವ್ಯಕ್ತಪಡಿಸಿದ ವಿಚಾರವಾದಿ ನರೇಂದ್ರ ನಾಯಕ್

Update: 2022-02-14 21:12 IST
ದೇವದತ್ ಕಾಮತ್‌ / ನರೇಂದ್ರ ನಾಯಕ್ 

ಮಂಗಳೂರು, ಫೆ.14: ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ಪರವಾಗಿ ರಾಜ್ಯ ಹೈಕೋರ್ಟ್‌ನಲ್ಲಿ ವಾದ ಮಂಡಿಸುವ ನ್ಯಾಯವಾದಿ ದೇವದತ್ ಕಾಮತ್ ವಿರುದ್ಧ ಕೆಲವು ದಿನದಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಅಪಪ್ರಚಾರ ನಡೆಯುತ್ತಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ಮಂಗಳೂರಿನ ಹಿರಿಯ ವಿಚಾರವಾದಿ ನರೇಂದ್ರ ನಾಯಕ್ ಅವರು ನ್ಯಾಯವಾದಿ ದೇವದತ್ ಕಾಮತ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

"ನಮ್ಮ ಸಮಾಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಶ್ರೀಗಳ ಸನ್ನಿಧಾನಕ್ಕೆ ಅರಿಕೆ ಮಾಡಲು ಪ್ರಥಮವಾಗಿ ಅನುಮತಿ ಯಾಚಿಸುತ್ತೇನೆ. ಜಿಎಸ್‌ಬಿ ಸಮಾಜದ ನಮ್ಮ ಮಠದ ಪರಂಪರೆಯಿಂದ ಬಂದಿರುವ ವಕೀಲ ದೇವದತ್ ಕಾಮತ್ ಜಿಎಸ್‌ಬಿ ಸಮಾಜದ ಮಾನ ಮರ್ಯಾದೆ ಹರಾಜು ಹಾಕುವ ಹಂತ ತಲುಪಿರುವುದು ಉಹಿಸಲೂ ಅಸಾಧ್ಯವಾದ ವಿಷಯವಾಗಿದೆ. ಮುಸ್ಲಿಮರ ಹಿಜಾಬ್ ವಿಚಾರವು ಹಿಂದೂಗಳ ಮನಸ್ಸಿಗೆ ತುಂಬಾ ಘಾಸಿಯಾಗಿದೆ. ಈ ವಿಚಾರ ಗೊತ್ತಿದ್ದರೂ ವಕೀಲ ದೇವದತ್ ಕಾಮತ್ ಮುಸ್ಲಿಮರ ಪರ ಉಚ್ಛ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಹಿಂದೂ ವಿರೋಧಿ ನಿಲುವು ಅನುಸರಿಸಿರುವುದು ಟೀಕೆಗೆ ಗುರಿಯಾಗಿದೆ. ಈವರೆಗೆ ಗೌರವ ಅಭಿಮಾನಗಳಿಂದ ನೋಡುತ್ತಿರುವ ಜಿಎಸ್‌ಬಿ ಸಮಾಜವು ತಲೆ ಎತ್ತಿ ನಡೆಯದಂತೆ ಆಗಿದೆ. ಸದ್ರಿ ವಕೀಲರು ಯಾವುದೇ ರಾಜಕೀಯ ಪಕ್ಷದ ಬಗ್ಗೆ ತಮ್ಮ ಒಲವು, ತಮ್ಮ ನಿಷ್ಠೆಯ ಬಗ್ಗೆ ನಮ್ಮದು ಯಾವುದೇ ತಕರಾರಿಲ್ಲ. ಆದರೆ ಸಮಾಜ ತಲೆತಗ್ಗಿಸುವಂತಹ ನೀಚ ಕೆಲಸ ಮಾಡಿರುವುದು ಅಸಹನೀಯವೆನಿಸಿದೆ. ಆದುದರಿಂದ ದೇವದತ್ ಕಾಮತರನ್ನು ನಮ್ಮ ಮಠದ ಪರಂಪರೆಯಿಂದ ಬಹಿಷ್ಕರಿಸಿ ಹೊರದಬ್ಬುವಂತೆ ಭಿನ್ನವಿಸಿಕೊಳ್ಳುತ್ತಿದ್ದೇನೆ" ಎಂಬ ಒಕ್ಕಣೆಯುಳ್ಳ ಮನವಿ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಚಾರವಾದಿಗಳ ಸಂಘದ ರಾಷ್ಟ್ರೀಯ ಅಧ್ಯಕ್ಷ ನರೇಂದ್ರ ನಾಯಕ್ "ನಾನೊಬ್ಬ ಜಿಎಸ್‌ಬಿ ಸಮಾಜದ ಸುಜೀರ್‌ಕಾರ್ ಕುಟುಂಬಕ್ಕೆ ಸೇರಿದವ. ಕಾಶಿಮಠವು ವ್ಯಕ್ತಿಗತವಾಗಿ ಯಾರೊಬ್ಬನ ಸೊತ್ತಲ್ಲ. ಅದು ಸಮಾಜಕ್ಕೆ ಸೇರಿದ್ದಾಗಿದೆ. ನ್ಯಾಯವಾದಿ ದೇವದತ್ ಕಾಮತ್ ತನ್ನ ವೃತ್ತಿಯ ಭಾಗವಾಗಿ ಹಿಜಾಬ್ ಪರವಾಗಿ ವಾದಿಸಿದ್ದಾರೆ. ಅವರ ವೃತ್ತಿ ನಿಷ್ಠೆಗೆ ನನ್ನ ಸಂಪೂರ್ಣ ಬೆಂಬಲವಿದೆ. ಅವರ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ. ನ್ಯಾಯವಾದಿಯ ವಿರುದ್ಧ ಅಪಪ್ರಚಾರ ಮಾಡಿರುವುದು ಯಾರೆಂಬುದನ್ನು ಪೊಲೀಸರು ಪತ್ತೆ ಹಚ್ಚಬೇಕು. ಇಂತಹ ಅಪಪ್ರಚಾರವು ಸಮಾಜದಲ್ಲಿ ಒಡಕು ಸೃಷ್ಟಿಸಲಿದೆ. ಮಾನವತಾವಾದಕ್ಕೆ ಹೊಡೆತ ಬೀಳಲಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ವೃತ್ತಿ ಧರ್ಮ ಮಾಡುತ್ತಿರುವ ದೇವದತ್ ಕಾಮತ್‌ರನ್ನು ಸಮಾಜದ ಸ್ವಾಮೀಜಿಗಳು ಬಹಿಷ್ಕರಿಸಬೇಕಂತೆ. ಆದರೆ, ಕೊಲೆ ಆರೋಪಿಯನ್ನು ಸ್ವಾಮೀಜಿಗಳು ಮತ್ತು ಸಮಾಜ ಏನು ಮಾಡಬೇಕು ಎಂದು ನೆಟ್ಟಿಗರು ಪ್ರಶ್ನಿಸತೊಡಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News