ಬೆಂಗಳೂರು: ಸಾರಿಗೆ ಸಚಿವರ ಮನೆಯೆದುರು ನೂರಾರು ಕಾರು ನಿಲ್ಲಿಸಿ ಕ್ಯಾಬ್ ಚಾಲಕರಿಂದ ಧರಣಿ
Update: 2022-02-15 09:59 IST
ಬೆಂಗಳೂರು, ಫೆ.15: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತ್ ಟ್ರಾನ್ಸ್ ಪೋರ್ಟ್ ಅಸೋಸಿಯೇಶನ್ ನೇತೃತ್ವದಲ್ಲಿ ಕ್ಯಾಬ್ ಚಾಲಕರು ಇಂದು ಬೆಳಗ್ಗೆಯಿಂದ ಸಾರಿಗೆ ಸಚಿವ ಶ್ರೀರಾಮುಲು ಮನೆ ಎದುರು ಧರಣಿ ನಡೆಸಿದರು.
ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್ ನಲ್ಲಿರುವ ಶ್ರೀರಾಮುಲು ಮನೆ ಮುಂದೆ ನೂರಾರು ಕ್ಯಾಬ್ ನಿಲ್ಲಿಸಿರುವ ಧರಣಿನಿರತರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರ್ಯಾಪಿಡೋ ಬೈಕ್ ಟ್ಯಾಕ್ಸಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು, ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸ್ಕೀಮ್ ಕೂಡಲೇ ಹಿಂಪಡೆಯಬೇಕು ಸೇರಿದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಧರಣಿನಿರತರು ಒತ್ತಾಯಿಸುತ್ತಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಕ್ಯಾಬ್ ಗಳನ್ನು ತೆರವು ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಆದರೆ ಸಚಿವ ಶ್ರೀ ರಾಮುಲು ಬಂದು ನಮ್ಮ ಬೇಡಿಕೆಗಳನ್ನು ಈಡೇರಿಸುವ ವರೆಗೂ ಇಲ್ಲಿಂದ ಕ್ಯಾಬ್ ತೆಗೆಯುವುದಿಲ್ಲ ಎಂದು ಕ್ಯಾಬ್ ಚಾಲಕರು ಪಟ್ಟು ಹಿಡಿದಿದ್ದಾರೆ.