×
Ad

ಬೆಂಗಳೂರು: ರಸ್ತೆ ಗುಂಡಿ ಸರಿಪಡಿಸದ ವಿಚಾರ; ಗೈರಾದ ಪಾಲಿಕೆ ಪ್ರಧಾನ ಅಭಿಯಂತರರಿಗೆ ಹೈಕೋರ್ಟ್ ವಾರೆಂಟ್

Update: 2022-02-15 22:03 IST

ಬೆಂಗಳೂರು, ಫೆ.15: ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ಹಾಜರಾಗಲು ವಿಫಲರಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಪ್ರಧಾನ ಅಭಿಯಂತರರಿಗೆ ಹೈಕೋರ್ಟ್ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.

ರಸ್ತೆ ಗುಂಡಿಗಳನ್ನು ಮುಚ್ಚಲು ಪಾಲಿಕೆ ಹಾಗೂ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ 2015ರಲ್ಲಿ ಬೆಂಗಳೂರಿನ ವಿಜಯನ್ ಮೆನನ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಬೆಂಗಳೂರಿನ ರಸ್ತೆಗುಂಡಿ ಸಮಸ್ಯೆಗೆ ಸಂಬಂಧಿಸಿದಂತೆ ಪಿಐಎಲ್ ವಿಚಾರಣೆ ನಡೆಸಿದ್ದ ಹೈಕೋರ್ಟ್ ಬಿಬಿಎಂಪಿ ರಸ್ತೆ ಮತ್ತು ಮೂಲಭೂತ ಸೌಕರ್ಯದ ವಿಭಾಗದ ಮುಖ್ಯ ಅಭಿಯಂತರು ಫೆ.15ರಂದು ಖುದ್ದು ಹಾಜರಾಗಲು ಸೂಚಿಸಿತ್ತು. ಇದೀಗ ವಿಚಾರಣೆಗೆ ಹಾಜರಾಗಲು ವಿಫಲವಾಗಿರುವ ಹಿನ್ನೆಲೆಯಲ್ಲಿ ವಾರಂಟ್ ಜಾರಿ ಮಾಡಿದೆ. ಅಲ್ಲದೆ, ಈ ವೇಳೆ ಪಾಲಿಕೆ ಪರ ವಕೀಲರು ಹಾಜರಾತಿಗೆ ವಿನಾಯಿತಿ ಕೋರಿದರು.

ಆದರೆ, ಹಾಜರಾತಿಗೆ ವಿನಾಯಿತಿ ಕೋರುವ ರೀತಿ ಇದಲ್ಲ. ದಿನದ ಕಲಾಪ ಆರಂಭವಾಗುತ್ತಿದ್ದಂತೆಯೇ ಅರ್ಜಿ ಸಲ್ಲಿಸಿ ಮನವಿ ಮಾಡಬೇಕು. ಪ್ರಕರಣದ ವಿಚಾರಣೆ ಆರಂಭವಾದಾಗ ವಿನಾಯಿತಿ ಕೋರುವುದಲ್ಲ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. 

ಬಳಿಕ ಬಿಬಿಎಂಪಿ ರಸ್ತೆ ಮತ್ತು ಮೂಲಭೂತ ಸೌಕರ್ಯದ ವಿಭಾಗದ ಪ್ರಧಾನ ಅಭಿಯಂತರ ವಿರುದ್ಧ ವಾರಂಟ್ ಜಾರಿಗೊಳಿಸಿ ಫೆ.17ಕ್ಕೆ ವಿಚಾರಣೆಯನ್ನು ಪೀಠ ಮುಂದೂಡಿತು.

ಪ್ರಧಾನ ಅಭಿಯಂತರರನ್ನು ಕೋರ್ಟ್ ಮುಂದೆ ಹಾಜರುಪಡಿಸಲು ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದು, ಇದಕ್ಕಿಂತ ಕಠಿಣ ಆದೇಶ ಹೊರಡಿಸಲು ಹಿಂದೇಟು ಹಾಕುವುದಿಲ್ಲ. ಜಾಮೀನು ರಹಿತ ವಾರಂಟ್ ಜಾರಿಗೊಳಿಸುವುದು ನಮಗೆ ಕಷ್ಟವಲ್ಲ ಎಂದೂ ಪೀಠ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News