ಆದೇಶ ಉಲ್ಲಂಘಿಸಿ ಘನತ್ಯಾಜ್ಯ ವಿಲೇವಾರಿ: ಬಿಬಿಎಂಪಿ ಅಧಿಕಾರಿಗಳನ್ನು ಜೈಲಿಗಟ್ಟುವುದಾಗಿ ಹೈಕೋರ್ಟ್ ಎಚ್ಚರಿಕೆ
ಬೆಂಗಳೂರು, ಫೆ.15: ನ್ಯಾಯಾಲಯದ ಆದೇಶ ಉಲ್ಲಂಘಿಸಿ ಮಿಟ್ಟಗಾನಹಳ್ಳಿ ಕ್ವಾರಿ ಗುಂಡಿಯಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಬಿಬಿಎಂಪಿ ಅಧಿಕಾರಿಗಳನ್ನು ಜೈಲಿಗಟ್ಟುವುದಾಗಿ ಎಚ್ಚರಿಕೆ ನೀಡಿದೆ. ಮಾ.5ರಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಖುದ್ದು ಹಾಜರಿಗೆ ಆದೇಶ ನೀಡಿದೆ.
ಬಿಬಿಎಂಪಿಯ ಅಸಮರ್ಪಕ ತ್ಯಾಜ್ಯ ವಿಲೇವಾರಿ ನಿರ್ವಹಣೆ ಪ್ರಶ್ನಿಸಿ ಸಲ್ಲಿಸಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಈ ವೇಳೆ ಪಾಲಿಕೆ ಪರ ವಕೀಲರು ಸಲ್ಲಿಸಿದ್ದ ಅಸಮರ್ಪಕ ವಿವರಗಳುಳ್ಳ ಪ್ರಮಾಣಪತ್ರ ಗಮನಿಸಿದ ಪೀಠ ಬಿಬಿಎಂಪಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಹೈಕೋರ್ಟ್ ನಿರ್ಬಂಧಿಸಿದ್ದರೂ ಮಿಟ್ಟಗಾನಹಳ್ಳಿ ಕ್ವಾರಿ ಗುಂಡಿಯಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡಲಾಗಿದೆ. ಈ ಕಾರಣದಿಂದ ಬಿಬಿಎಂಪಿ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದೆ.
ಕೋರ್ಟ್‍ನಿಂದಲೇ ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದ್ದು, ಜೈಲಿಗೆ ಹೋಗಲು ಗಂಟುಮೂಟೆ ಕಟ್ಟಿಕೊಂಡು ಬನ್ನಿ ಎಂದು ಖಡಕ್ ಸೂಚನೆ ಕೊಡಲಾಗಿದೆ. ಕೋರ್ಟ್ ಆದೇಶ ಬಿಬಿಎಂಪಿ ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಇದು ಸಂಪೂರ್ಣವಾಗಿ ನ್ಯಾಯಾಂಗ ನಿಂದನೆಯಾಗಿದೆ. ಯಾರ ಆದೇಶದ ಮೇರೆಗೆ ತ್ಯಾಜ್ಯ ಸುರಿಯಲಾಗಿದೆ. ಈ ಬಗ್ಗೆ ಮಾಹಿತಿ ನೀಡುವಂತೆ ಬಿಬಿಎಂಪಿಗೆ ಕೋರ್ಟ್ ತಾಕೀತು ಮಾಡಿದೆ.