×
Ad

ಹಿಜಾಬ್ ವಿದ್ಯಾರ್ಥಿನಿಯರಿಗೆ ಶಿಕ್ಷಣ ಸಂಸ್ಥೆಗಳ ಬಹಿಷ್ಕಾರ: ಮುಸ್ಲಿಂ ಉಲೆಮಾಗಳು, ಸಂಘಟನೆಗಳಿಂದ ಖಂಡನೆ

Update: 2022-02-16 19:13 IST

ಬೆಂಗಳೂರು, ಫೆ.16: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬನ್ನು ಬಲವಂತವಾಗಿ ತೆಗೆಯುವುದಕ್ಕೆ ಮುಸ್ಲಿಮ್ ಉಲೆಮಾಗಳು ಮತ್ತು ಮುಸ್ಲಿಮ್ ಸಂಘಟನೆಗಳು ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಹಿಜಾಬ್ ಧರಿಸುವ ಮುಸ್ಲಿಮ್ ಮಹಿಳೆಯರ ಹಕ್ಕಿಗೆ ಬೆಂಬಲ ನೀಡಿವೆ.

ಗೌರವಾನ್ವಿತ ಕರ್ನಾಟಕ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ವ್ಯಾಖ್ಯಾನಿಸಿ ಎಳೆಯ ವಿದ್ಯಾರ್ಥಿನಿಯರ ಹಿಜಾಬ್ ಅನ್ನು ಬಲವಂತವಾಗಿ ತೆಗೆಯುವ ಕೆಲವು ಸ್ಥಾಪಿತ ಹಿತಾಸಕ್ತಿಗಳ ಕಾನೂನುಬಾಹಿರ ಹಾಗೂ ಅವಮಾನಕರ ಕೃತ್ಯವನ್ನು ಖಂಡಿಸುತ್ತಿದ್ದೇವೆ ಎಂದು ಮುಸ್ಲಿಮ್ ಉಲೆಮಾಗಳು ಮತ್ತು ಮುಸ್ಲಿಮ್ ಸಂಘಟನೆಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಅಮೀರ್-ಇ-ಶರಿಯತ್ ಕರ್ನಾಟಕ-ಮೊಲಾನಾ ಸಗೀರ್ ಅಹ್ಮದ್ ರಶಾದಿ, ಜಮೀಯತ್-ಇ-ಉಲೆಮಾ, ಕರ್ನಾಟಕ ಇದರ ಅಧ್ಯಕ್ಷ ಮೊಲಾನಾ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ, ಜಮಾಅತೆ ಅಹ್ಲೆ ಸುನ್ನತ್, ಕರ್ನಾಟಕ ಇದರ ಅಧ್ಯಕ್ಷ ಹಝ್ರತ್ ಮುಹಮ್ಮದ್ ಸೈಯದ್ ತನ್ವೀರ್ ಹಾಶ್ಮಿ, ಬೆಂಗಳೂರು ಸಿಟಿ ಜಾಮಿಯ ಮಸೀದಿಯ ಖತೀಬ್ ಹಾಗೂ ಇಮಾಮ್ ವೌಲಾನಾ ಮಕ್ಸೂದ್ ಇಮ್ರಾನ್ ರಶಾದಿ, ಜಮಾಅತೆ ಇಸ್ಲಾಮಿ ಹಿಂದ್, ಕರ್ನಾಟಕ ಇದರ ಅಧ್ಯಕ್ಷ ಡಾ.ಬೆಳ್ಗಾಮಿ ಮುಹಮ್ಮದ್ ಸಅದ್, ಅಹ್ಲೆ ಸುನ್ನತ್ ವಾಲ್ ಜಮ್ಮಾ-ಕರ್ನಾಟಕ ಇದರ ಅಧ್ಯಕ್ಷ ವೌಲಾನಾ ಸೈಯದ್ ಶಬೀರ್ ನದ್ವಿ, ಜಾಮಿಯ ಹಝ್ರತ್ ಬಿಲಾಲ್-ಅಹ್ಲೆ ಸುನ್ನತ್ ವಲ್ ಜಮಾಸತ್-ಬೆಂಗಳೂರು ವೌಲಾನಾ ಝುಲ್ಫೀಕರ್ ಅಹ್ಮದ್ ನೂರಿ, ಮರ್ಕಝ್ ಮಸ್ಜಿದ್ ಅಹ್ಲೆ ಹದೀತ್ ಖತೀಬ್ ಹಾಗೂ ಇಮಾಮ್ ಮೊಲಾನಾ ಇಜಾಝ್ ಅಹ್ಮದ್ ನದ್ವಿ, ಜಮೀಯತೆ-ಉಲಮಾ, ಕರ್ನಾಟಕ ಕಾರ್ಯದರ್ಶಿ ವೌಲಾನಾ ಮುಹೀಬುಲ್ಲಾ ಅಮೀನ್, ಕರ್ನಾಟಕ ಮುಸ್ಲಿಮ್ ಮುತ್ತಾಹಿದ ಮಹಝ್ ಸಂಚಾಲಕ ಮಸೂದ್ ಅಬ್ದುಲ್ ಖಾದರ್, ಎಪಿಸಿಆರ್, ಕರ್ನಾಟಕ ಅಧ್ಯಕ್ಷ ಅಡ್ವೊಕೇಟ್ ಉಸ್ಮಾನ್, ಮೂಮ್‌ಮೆಂಟ್ ಫಾರ್ ಜಸ್ಟೀಸ್-ಕರ್ನಾಟಕ ಕಾರ್ಯದರ್ಶಿ ಅಡ್ವೊಕೇಟ್ ಅಕ್ಮಲ್ ರಝ್ವಿ, ಅಡ್ವೊಕೇಟ್ ನವೀದ್ ಅಹ್ಮದ್ ಅಡ್ವೊಕೇಟ್ ಝಾಕಿ ಎಮ್.ಎನ್.ಮೊದಲಾದವರು ಪ್ರಕಟನೆಯಲ್ಲಿ ತಮ್ಮ ಆಕ್ರೋಶ ಹಂಚಿ ಕೊಂಡಿದ್ದಾರೆ.

ಪ್ರಕಟನೆಯ ಸಾರಾಂಶ: ಚುಟುಕಾಗಿ ಹೇಳಬೇಕೆಂದರೆ, ಮಕ್ಕಳನ್ನು ಅವಮಾನಕ್ಕೆ ಗುರಿಪಡಿಸುವ ಕೆಲವು ಮಾಧ್ಯಮ ಸಂಸ್ಥೆಗಳು ಮತ್ತು ಶಾಲಾ ಆಡಳಿತ ಮಂಡಳಿಗಳ ಆಕ್ರಮಣಕಾರಿ ಮನೋಭಾವವು ಅತ್ಯಂತ ಆಘಾತಕಾರಿಯಾಗಿದೆ. ಕಾಲೇಜು ಅಭಿವೃದ್ಧಿ ಸಮಿತಿಗಳು (ಸಿಡಿಸಿ) ಸಮವಸ್ತ್ರವನ್ನು ನಿಗದಿಪಡಿಸಿರುವ ಕಾಲೇಜುಗಳಲ್ಲಿ ಮಾತ್ರ ಹಿಜಾಬ್‌ಗೆ ಅವಕಾಶ ನೀಡಬಾರದು ಎಂಬುದಾಗಿ ಗೌರವಾನ್ವಿತ ಹೈಕೋರ್ಟ್ ನ ಆದೇಶವು ಸ್ಪಷ್ಟವಾಗಿ ಹೇಳುತ್ತದೆ. ಹಾಗಾಗಿ, ಹೈಕೋರ್ಟ್ ಆದೇಶವು ಶೈಕ್ಷಣಿಕ ಸಂಸ್ಥೆಯೊಂದಕ್ಕೆ ಅನ್ವಯವಾಗಬೇಕಾದರೆ ಆ ಸಂಸ್ಥೆಯು ಎರಡು ಅವಶ್ಯಕತೆಗಳನ್ನು ಪೂರೈಸಬೇಕಾಗುತ್ತದೆ. ಅವುಗಳೆಂದರೆ:

1.ಆ ಸಂಸ್ಥೆಯಲ್ಲಿ ಸಿಡಿಸಿ ಇರಬೇಕು.

2.ಸಿಡಿಸಿಯು ಸಮವಸ್ತ್ರವನ್ನು ನಿಗದಿಪಡಿಸಿರಬೇಕು. ಹಾಗಾಗಿ, ಹೈಕೋರ್ಟ್‌ನ ಮಧ್ಯಂತರ ಆದೇಶವು ಶಾಲೆಗಳಿಗೆ ಅನ್ವಯಿಸುವುದಿಲ್ಲ ಎನ್ನುವುದು ಅತ್ಯಂತ ಸ್ಪಷ್ಟ. ಹಾಗಾಗಿ, ಎಳೆಯ ಬಾಲಕಿಯರ ಹಿಜಾಬ್‌ಅನ್ನು ತೆಗೆಯುವುದು ಹಾಗೂ ಅದನ್ನು ಚಿತ್ರೀಕರಿಸುವುದು ಅವಮಾನಕರ ಮತ್ತು ಅವರ ಘನತೆಗೆ ತಂದ ಚ್ಯುತಿ ಮಾತ್ರವಲ್ಲ, ಬಾಲಕಿಯರ ಖಾಸಗಿತನದ ಹಕ್ಕಿನ ಉಲ್ಲಂಘನೆಯೂ ಆಗಿದೆ.

ಶಾಲೆ ಎಂಬುದು ಮಕ್ಕಳ ಎರಡನೇ ಮನೆಯಾಗಿದೆ. ಹಾಗಾಗಿ, ಶಾಲೆಯಲ್ಲಿ ತಾವು ಸುರಕ್ಷಿತರಾಗಿದ್ದೇವೆ ಎಂಬ ಭಾವನೆಯನ್ನು ಮಕ್ಕಳಲ್ಲಿ ಹುಟ್ಟಿಸುವುದು ಶಾಲಾ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆದರೆ, ಶಾಲಾ ಅಧಿಕಾರಿಗಳು ತಮ್ಮ ಈ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಅವರು ಹೊರಗಿನ ವ್ಯಕ್ತಿಗಳಿಗೆ ಶಾಲಾ ಆವರಣವನ್ನು ಪ್ರವೇಶಿಸಿ ವಿದ್ಯಾರ್ಥಿನಿಯರ ಅನುಮತಿಯಿಲ್ಲದೆ ಅವರನ್ನು ಚಿತ್ರೀಕರಿಸಲು ಅನುಮತಿ ನೀಡಿರುವುದಷ್ಟೇ ಅಲ್ಲ, ವಿದ್ಯಾರ್ಥಿನಿಯರ ಹಿಜಾಬನ್ನು ಸಾರ್ವಜನಿಕವಾಗಿ ತೆಗೆಯುವ ಮೂಲಕ ಇಂಥ ವ್ಯಕ್ತಿಗಳ ಅಕ್ರಮ ಬೇಡಿಕೆಗಳಿಗೆ ಬೆಂಬಲವನ್ನೂ ನೀಡಿದ್ದಾರೆ.

ಅದೂ ಅಲ್ಲದೆ, ಸಿಡಿಸಿ ಅಸ್ತಿತ್ವದಲ್ಲಿರುವ ಕಾಲೇಜುಗಳಲ್ಲಿಯೂ, ಹಿಜಾಬ್ ಧರಿಸುವುದು ನಿಗದಿತ ಸಮವಸ್ತ್ರದ ಉಲ್ಲಂಘನೆಯಾಗುತ್ತದೆಯೇ, ಇಲ್ಲವೇ ಎನ್ನುವುದನ್ನು ನಿರ್ಧರಿಸುವುದು ಕೇವಲ ಸಿಡಿಸಿಯ ಪರಮಾಧಿಕಾರವಾಗಿರುತ್ತದೆ. ಆದೇಶವು ತರಗತಿ ಕೋಣೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿರ್ಬಂಧಿಸುತ್ತದೆಯೇ, ವಿನಾ ಕಾಲೇಜು ಆವರಣದಲ್ಲಿ ಅಲ್ಲ.

ಶಾಲೆಗಳ ದ್ವಾರಗಳ ಹೊರಗೆ ಸಾರ್ವಜನಿಕವಾಗಿ ತಮ್ಮ ಬುರ್ಖಾಗಳನ್ನು ತೆಗೆಯುವಂತೆ ಮುಸ್ಲಿಮ್ ಮಹಿಳೆಯರನ್ನು ಬಲವಂತಪಡಿಸುವ ಮೂಲಕ ಅವರನ್ನು ಅಗೌರವಯುತವಾಗಿ ನಡೆಸಿಕೊಳ್ಳುತ್ತಿರುವ ಹಾಗೂ ಅವಮಾನಪಡಿಸುತ್ತಿರುವ ಬಗ್ಗೆ ನಾವು ತೀವ್ರ ಯಾತನೆಗೆ ಒಳಗಾಗಿದ್ದೇವೆ. ಈ ಕೃತ್ಯವು ಹೈಕೋರ್ಟ್ ಆದೇಶ ಉಲ್ಲಂಘನೆಯಾಗಿದೆ. ಇಂತಹ ಸಂಕಟ ಮತ್ತು ಅವಮಾನಕ್ಕೆ ಬಲವಂತವಾಗಿ ಗುರಿಯಾದ ಮಹಿಳೆಯರಿಗೆ ನಾವು ಬೆಂಬಲ ನೀಡುತ್ತೇವೆ ಹಾಗೂ ನ್ಯಾಯಾಲಯಗಳಲ್ಲಿ ಮೊಕದ್ದಮೆಗಳನ್ನು ಹೂಡಲು ಬಯಸುವ ಮಹಿಳೆಯರಿಗೆ ನಾವು ಎಲ್ಲ ಬೆಂಬಲವನ್ನು ನೀಡುತ್ತೇವೆ. ಹಿಜಾಬ್ ಇಲ್ಲದೆ ತರಗತಿಗಳಿಗೆ ಹಾಜರಾಗದಿರುವ ಮೂಲಕ ಪ್ರತಿಭಟನೆ ನಡೆಸಲು ನಿರ್ಧರಿಸುವ ಮಹಿಳೆಯರಿಗೆ, ಹಾಗೆ ಮಾಡುವ ಸ್ವಾತಂತ್ರವಿದೆ ಎಂಬುದನ್ನು ನಾವು ದೃಢಪಡಿಸುತ್ತೇವೆ.

ಕೆಲವು ವಿದ್ಯಾ ಸಂಸ್ಥೆಗಳು ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಅನುಮತಿ ನೀಡಿರುವುದನ್ನು ಕೆಲವು ಮಾಧ್ಯಮಗಳು ಚಿತ್ರೀಕರಿಸಿವೆ ಹಾಗೂ ಇಂತಹ ವಿದ್ಯಾ ಸಂಸ್ಥೆಗಳನ್ನು ಬಯಲುಗೊಳಿಸಿದ್ದೇವೆ ಎಂದು ಹೇಳಿಕೊಳ್ಳುವ ವರದಿಗಳನ್ನು ಈ ಮಾಧ್ಯಮಗಳು ಪ್ರಸಾರಿಸಿವೆ. ಬಳಿಕ, ಈ ಮಾಧ್ಯಮಗಳು ಕಾಲೇಜು ಅಧಿಕಾರಿಗಳ ಮೇಲೆ ಒತ್ತಡ ಹೇರಿ, ಮಕ್ಕಳು ತಮ್ಮ ಹಿಜಾಬ್‌ಗಳನ್ನು ತೆಗೆಯುವಂತೆ ಮಾಡಿವೆ ಹಾಗೂ ಅದನ್ನು ತಮ್ಮ ಸಾಧನೆಯೆಂಬಂತೆ ಜಂಭ ಕೊಚ್ಚಿಕೊಂಡಿವೆ. ಈ ಕೃತ್ಯಗಳು ಅತ್ಯಂತ ಪ್ರಚೋದನಾತ್ಮಕವಾಗಿದ್ದು, ವಿವಿಧ ಕಾನೂನುಗಳ ಉಲ್ಲಂಘನೆಯಾಗಿದೆ ಹಾಗೂ ನಾವು ಇದನ್ನು ಖಂಡಿಸುತ್ತೇವೆ. ಹಾಗಾಗಿ, ಈ ಮಾಧ್ಯಮಗಳ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿದ್ಯಾರ್ಥಿಗಳು ಮತ್ತು ಹೆತ್ತವರನ್ನು ಒತ್ತಾಯಿಸುತ್ತೇವೆ.

ಎಲ್ಲ ನಾಗರಿಕರಲ್ಲಿ ಸುರಕ್ಷತೆಯ ಮನೋಭಾವ ಇರುವಂತೆ ನೋಡಿಕೊಳ್ಳುವ ತಮ್ಮ ಜವಾಬ್ದಾರಿಯನ್ನು ಈಡೇರಿಸುವಂತೆ ರಾಜ್ಯ ಸರಕಾರ ಮತ್ತು ಕಾನೂನು ಅನುಷ್ಠಾನ ಸಂಸ್ಥೆಗಳಿಗೆ ನಾವು ಮನವಿ ಮಾಡುತ್ತೇವೆ. ಬೆದರಿಕೆ ಮತ್ತು ಕಿರುಕುಳದ ಇಂತಹ ಘಟನೆಗಳು ಪುನರಾವರ್ತನೆ ಯಾಗದಂತೆ ನೋಡಿಕೊಳ್ಳುವುದು ಅವುಗಳ ಕರ್ತವ್ಯವಾಗಿದೆ.

ಹಾಗಾಗಿ, ಗೌರವಾನ್ವಿತ ಹೈಕೋರ್ಟ್‌ನ ಆದೇಶಗಳ ತಪ್ಪು ವ್ಯಾಖ್ಯಾನವಾಗದಂತೆ ನೋಡಿಕೊಳ್ಳಬೇಕು, ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಯನ್ನು ಖಾತರಿಪಡಿಸಬೇಕು ಮತ್ತು ನಮ್ಮ ಸಮಾಜದ ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿರುವ ದುಷ್ಟ ಶಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ನಾವು ಸರಕಾರ ಮತ್ತು ಮಾಧ್ಯಮಗಳನ್ನು ಒತ್ತಾಯಿಸುತ್ತೇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News