ನ್ಯಾಯಾಧೀಶರಿಂದ ಅಂಬೇಡ್ಕರ್ ಗೆ ಅಪಮಾನ: ಫೆ.19ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಪ್ರತಿಭಟನಾ ರ್‍ಯಾಲಿ

Update: 2022-02-16 17:13 GMT

ಬೆಂಗಳೂರು, ಫೆ.16: ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನವನ್ನು ಮಾಡಿರುವ ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಪಾಟೀಲರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕೆಂದು ಒತ್ತಾಯಿಸಿ ಫೆ.19ರಂದು ನಡೆಯುವ ರಾಜ್ಯಮಟ್ಟದ ಪ್ರತಿಭಟನಾ ರ್‍ಯಾಲಿಯಲ್ಲಿ ರಾಜ್ಯದ ಎಲ್ಲ 31 ಜಿಲ್ಲೆಗಳಿಂದ ಜನತೆ ಭಾಗವಹಿಸಬೇಕೆಂದು ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ಬೆಂಗಳೂರು ರಾಜ್ಯ ಸಮಿತಿ ಮನವಿ ಮಾಡಿದೆ.

ಬುಧವಾರ ನಗರದಲ್ಲಿ ಸಂವಿಧಾನ ಸಂರಕ್ಷಣಾ ಮಹಾಒಕ್ಕೂಟ ಬೆಂಗಳೂರು ರಾಜ್ಯ ಸಮಿತಿಯ ವತಿಯಿಂದ ರಾಜ್ಯ ಸಮಿತಿಯ ಪದಾಧಿಕಾರಿಗಳು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. 

ಅಂಬೇಡ್ಕರ್ ಗೆ ಅಪಮಾನ ಮಾಡಿರುವ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಪಾಟೀಲರನ್ನು ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಬಂಧಿಸಬೇಕು. ರಾಜ್ಯದ ಎಲ್ಲ ಕೋರ್ಟ್ ಹಾಲ್‍ಗಳಲ್ಲಿ ಅಂಬೇಡ್ಕರ್ ರವರ ಭಾವಚಿತ್ರವನ್ನು ಅಳವಡಿಸುವಂತೆ ಸರಕಾರ ಮತ್ತು ಹೈಕೋರ್ಟ್‍ಗಳು ಆದೇಶಗಳನ್ನು ಹೊರಡಿಸಬೇಕು ಎಂದು ಸಮಿತಿ ಆಗ್ರಹಿಸಿದೆ.

ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹುದ್ದೆಗಳ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ಜಾತಿ ಧಾರ್ಮಿಕ ಅಲ್ಪಸಂಖ್ಯಾತರು ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಕಾನೂನು ಜಾರಿಗೊಳಿಸಬೇಕು ಮತ್ತು ಹುಮನಾಬಾದ್ ತಹಶೀಲ್ದಾರ್ ಅವರನ್ನು ಬಂಧಿಸಬೇಕು ಎಂದು ಸಮಿತಿಯ ಪದಾಧಿಕಾರಿಗಳು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ರಾಜ್ಯ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News