×
Ad

ಅನಾಥ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿದ್ದ ವೃದ್ಧೆಯನ್ನು ಕಡಬದ ಆಶ್ರಮಕ್ಕೆ ಸೇರಿಸಿದ ಪುತ್ತೂರು ಸಿಡಿಪಿಒ

Update: 2022-02-17 21:40 IST

ಪುತ್ತೂರು: ಕುಟುಂಬಸ್ಥರಿದ್ದರೂ ಅವರಿದ ನಿರ್ಲಕ್ಷ್ಯಕ್ಕೆ ಒಳಗಾಗಿ ಕಳೆದ ಸುಮಾರು 3 ತಿಂಗಳಿನಿಂದ ಪುತ್ತೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಅನಾಥ ಸ್ಥಿತಿಯಲ್ಲಿ ಬದುಕುತ್ತಿದ್ದ ವಯೋವೃದ್ಧ ಮಹಿಳೆಯೊಬ್ಬರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪುತ್ತೂರಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಅವರು ಗುರುವಾರ ಕಡಬದ ವೃದ್ಧಾಶ್ರಮಕ್ಕೆ ದಾಖಲಿಸಿದ್ದಾರೆ. 

ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಸಮೀಪದ ಜಿಡೆಕಲ್ಲು ನಿವಾಸಿ ಸಂಕಮ್ಮ ಎಂಬ ಸುಮಾರು 85 ವರ್ಷ ಪ್ರಾಯದ ಮಹಿಳೆ ಕಳೆದ 3 ತಿಂಗಳ ಹಿಂದೆ ಅನಾಥ ಸ್ಥಿತಿಯಲ್ಲಿ  ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ದ್ದರು. ಆಸ್ಪತ್ರೆಯ ವೈದ್ಯರ ಮಾಹಿತಿ ಮೇರೆಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ವೃದ್ಧೆಯ ಸಂಬಂಧಿಕರು ಅವರನ್ನು ನೋಡಿಕೊಳ್ಳದೆ ದೂರ ಮಾಡಿದ್ದರು. ವೃದ್ಧೆಯ ಕುಟುಂಬಸ್ಥರನ್ನು ಮೊಬೈಲ್ ಮೂಲಕ ಸಂಪರ್ಕಿಸಲು ಸಿಡಿಪಿಒ ಪ್ರಯತ್ನ ನಡೆಸಿದ್ದರಾದರೂ ಅವರಿಂದ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ ಎನ್ನಲಾಗಿದ್ದು, ಬಳಿಕ ಸಂಕಮ್ಮ ಅವರನ್ನು ಕಡಬ ನೂಜಿಬಾಳ್ತಿಲದ ಮರಿಯಾಲಮ್ಮ ಎಂಬ ಖಾಸಗಿ ಆಶ್ರಮಕ್ಕೆ ದಾಖಲು ಮಾಡಿದ್ದಾರೆ.

ಪುತ್ತೂರಿನಲ್ಲಿ ಇಂತಹ ಪ್ರಕರಣಗಳು ಕಂಡು ಬರುತ್ತಿದೆ. ಆದರೆ ಇಂತಹ ಸಂದರ್ಭದಲ್ಲಿ ಬದುಕಿನ ಸಂದ್ಯಾ ಕಾಲದಲ್ಲಿರುವ ಹಿರಿಯರಿಗೆ ನೆಮ್ಮದಿಯ ಬದುಕು ಕಲ್ಪಿಸಿ ಕೊಡಲು ಸರಿಯಾದ ಆಶ್ರಮದ ವ್ಯವಸ್ಥೆ ಪುತ್ತೂರಿನಲ್ಲಿ ಇಲ್ಲ. ಇಂತಹ ಪ್ರಕರಣಗಳು ಪತ್ತೆಯಾದಾಗ ಪುತ್ತೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸಾಕಷ್ಟು ಪರದಾಡುವ ಸ್ಥಿತಿ ನಿರ್ಮಾವಾಗುತ್ತದೆ. ಇದನ್ನು ತಡೆಯಲು ಪುತ್ತೂರಿನಲ್ಲಿ ಸರ್ಕಾರಿ ವೃದ್ಧಾಶ್ರಮದ ವ್ಯವಸ್ಥೆಯನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾಡಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.

''ಪುತ್ತೂರಿನಲ್ಲಿ ಇಂತಹ ಹಲವಾರು ಘಟನೆಗಳು ನಡೆಯುತ್ತಿದೆ. ಆದರೆ ಅಂತಹವರಿಗೆ ಮಾನವಿಯ ನೆಲೆಯಲ್ಲಿ ಮರಿಯಾಲಮ್ಮ ಆಶ್ರಮದವರು ವ್ಯವಸ್ಥೆ ಕಲ್ಪಿಸಿದ್ದಾರೆ. ಇವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೃತಜ್ಞತೆಯನ್ನು ಸಲ್ಲಿಸುತ್ತದೆ''

- ಶ್ರೀಲತಾ, ಸಿಡಿಪಿಒ, ಪುತ್ತೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News