×
Ad

ಮಂಗಳೂರು: ಪಾಸ್‌ಪೋರ್ಟ್‌ಗೆ ನಕಲಿ ಅಂಕಪಟ್ಟಿ ಸಲ್ಲಿಸಿದ ಆರೋಪಿಗೆ ಶಿಕ್ಷೆ

Update: 2022-02-18 21:28 IST

ಮಂಗಳೂರು, ಫೆ.18 ನಕಲಿ ಅಂಕಪಟ್ಟಿ ಸಲ್ಲಿಸಿ ಪಾಸ್‌ಪೋರ್ಟ್ ನವೀಕರಿಸಲು ಯತ್ನಿಸಿದ ಬೆಳ್ತಂಗಡಿ ತಾಲೂಕು ಕತ್ತರಿಗುಡ್ಡೆ ನಿವಾಸಿ ಮುಹಮ್ಮದ್ ಶರೀಫ್ ಪನೇಲ್ (31) ಎಂಬಾತನ ವಿರುದ್ಧ ದಾಖಲಾಗಿದ್ದ ಆರೋಪವು ನ್ಯಾಯಾಲಯದಲ್ಲಿ ಸಾಬೀತಾಗಿದ್ದು, 1.6 ವರ್ಷ ಜೈಲು ಶಿಕ್ಷೆ ಹಾಗೂ 45 ಸಾವಿರ ರೂ. ದಂಡ ವಿಧಿಸಿ 2ನೇ ಸಿಜೆಂಎ ನ್ಯಾಯಾಲಯ ತೀರ್ಪು ನೀಡಿದೆ.

ಆರೋಪಿ ಶರೀಫ್ ವಿಸಿಟಿಂಗ್ ವೀಸಾದಲ್ಲಿ ದುಬೈಗೆ ತೆರಳಿ ಅಲ್ಲೇ ಕೆಲಸಕ್ಕೆ ಸೇರಿ ಖಾಯಂ ವೀಸಾ ಪಡೆದಿದ್ದ. ಈ ಸಂದರ್ಭ ಎಸೆಸೆಲ್ಸಿ ಅಂಕಪಟ್ಟಿಯ ಬೇಕೆಂದಾಗ ಅಪರಿಚಿತ ವ್ಯಕ್ತಿ ಮೂಲಕ ಸರಕಾರಿ ಅಭ್ಯಾಸಿ ಹೈಸ್ಕೂಲ್ ಮಂಗಳೂರು ಶಾಲೆಯಲ್ಲಿ ಎಸೆಸೆಲ್ಸಿ ಮಾಡಿರುವುದಾಗಿ ನಕಲಿ ಅಂಕಪಟ್ಟಿ ಸೃಷ್ಠಿಸಿದ್ದ. ಅಲ್ಲದೆ ತನ್ನ ಖಾಯಂ ವಿಸಾಕ್ಕೆ ಬಳಸಿ 6 ವರ್ಷ ದುಬೈಯಲ್ಲಿ ಕೆಲಸ ಮಾಡಿ ಭಾರತಕ್ಕೆ ಬಂದಿದ್ದ.

2012ರ ಜ.19ರಂದು ಮಂಗಳೂರು ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಪಾಸ್‌ಪೋರ್ಟ್ ನವೀಕರಿಸಲು ಹೋದಾಗ ಅಲ್ಲಿನ ಅಧಿಕಾರಿ ಅಂಕಪಟ್ಟಿಯ ನೈಜತೆಯ ಬಗ್ಗೆ ಸಂಶಯಗೊಂಡು ಅದನ್ನು ಬೆಂಗಳೂರು ಪಾಸ್‌ಪೋರ್ಟ್ ಕಚೇರಿಗೆ ಕಳುಹಿಸಿದ್ದರು. ಅಲ್ಲಿಂದ ಅಂಕಪಟ್ಟಿಯ ಪ್ರತಿಯನ್ನು ಮಂಗಳೂರು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಿಗೆ ಕಳುಹಿಸಲಾಗಿತ್ತು. ಪರಿಶೀಲಿಸಿದಾಗ ಶಾಲೆಯಿಂದ ಈ ಅಂಕಪಟ್ಟಿ ನೀಡಿಲ್ಲ ಎಂದು ತಿಳಿದು ಬಂತು.

ಆ ಬಳಿಕ ಆರೋಪಿಯ ವಿರುದ್ಧ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಅಂದಿನ ಎಸ್ಸೈ ಕೆ.ಕೆ. ರಾಮಕೃಷ್ಣ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ನಕಲಿ ಅಂಕಪಟ್ಟಿ ನೀಡಿದ್ದ ಸೆಂದಿಲ್ ಕುಮಾರ್ ಎಂಬಾತ ನಾಪತ್ತೆಯಾಗಿದ್ದಾನೆ.

ನ್ಯಾಯಾಧೀಶೆ ಶಿಲ್ಪಾ ಎ.ಜಿ. ಪ್ರಕರಣದ ವಿಚಾರಣೆ ನಡೆಸಿ ಶುಕ್ರವಾರ ತೀರ್ಪು ಪ್ರಕಟಿಸಿದ್ದಾರೆ. ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಮೋಹನ ಕುಮಾರ್ ಬಿ. ಸರ್ಕಾರದ ಪರ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News