ಸಿಖ್ ಮುಖಂಡರಿಗೆ ತನ್ನ ನಿವಾಸದಲ್ಲಿ ಆತಿಥ್ಯ ನೀಡಿದ ಪ್ರಧಾನಿ

Update: 2022-02-18 16:22 GMT

ಹೊಸದಿಲ್ಲಿ, ಫೆ. 18: ಪ್ರಧಾನಿ ನರೇಂದ್ರ ಮೋದಿ ಅವರು ಸಿಖ್ ಸಮುದಾಯದ ಪ್ರಮುಖ ಗಣ್ಯರಿಗೆ ಶುಕ್ರವಾರ ತನ್ನ ಮನೆಯಲ್ಲಿ ಆತಿಥ್ಯ ನೀಡಿದ್ದಾರೆ. ಅಲ್ಲದೆ, ಸಿಖ್ ಸಮುದಾಯಕ್ಕೆ ಸರಕಾರ ಮಾಡಿದ ಕೆಲಸಗಳ ಬಗ್ಗೆ ಗಮನ ಸೆಳೆದಿದ್ದಾರೆ.

 ಪಂಜಾಬ್ ವಿಧಾನ ಸಭೆ ಚುನಾವಣೆಗೆ ಎರಡು ದಿನಗಳಿರುವಾಗ ಸಿಖ್ ಸಮುದಾಯವನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ ಹಾಗೂ ಸುಖ್‌ದೇವ್ ಸಿಂಗ್ ಧಿಂಡ್ಸಾ ನೇತೃತ್ವದ ಅಕಾಲಿ ದಳದ ಬಣದ ಮೈತ್ರಿಗೆ ಪ್ರಬಲ ಪೈಪೋಟಿ ನೀಡಲು ಬಿಜೆಪಿ ನಿರ್ಧರಿಸಿದೆ.

ಈ ಆತಿಥ್ಯದ ನಂತರ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಸಿಖ್ ಧಾರ್ಮಿಕ ಹಾಗೂ ಸಮುದಾಯದ ಈ ನಾಯಕರು ಸಿಖ್ ಸಂಸ್ಕೃತಿಯನ್ನು ಜನಪ್ರಿಯಗೊಳಿಸುವಲ್ಲಿ ಹಾಗೂ ಸಿಖ್ ಸಮುದಾಯಕ್ಕೆ ಸೇವೆ ಸಲ್ಲಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದಿದ್ದಾರೆ.

ಸಿಖ್ ಸಮುದಾಯಕ್ಕೆ ಕೇಂದ್ರ ಸರಕಾರ ಮಾಡಿರುವ ವಿವಿಧ ಕೆಲಸಗಳ ಬಗ್ಗೆ ಸಿಖ್ ಸಮುದಾಯದ ಸದಸ್ಯರ ಪ್ರಶಂಸೆಯ ಮಾತುಗಳಿಗೆ ತಾನು ಅಭಾರಿಯಾಗಿದ್ದೇನೆ. ಗೌರವಾನ್ವಿತ ಸಿಖ್ ಗುರುಗಳು ನನ್ನಿಂದ ಸೇವೆ ಸ್ವೀಕರಿಸಿರುವುದು ಹಾಗೂ ಅವರ ಆಶೀರ್ವಾದದಿಂದ ಸಿಖ್ ಸಮುದಾಯಕ್ಕೆ ಕೆಲಸ ಮಾಡಲು ಸಾಧ್ಯವಾಗಿರುವುದು ನನಗೆ ದೊರಕಿದ ಗೌರವ ಎಂದು ಭಾವಿಸುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ. ಸಿಖ್ ಸಮುದಾಯಕ್ಕಾಗಿ ಪ್ರತಿದಿನ ಕೆಲಸ ಮಾಡಲು ಬಯಸುವುದಾಗಿ ಪ್ರಧಾನಿ ಅವರು ಸಂವಹನದ ಸಂದರ್ಭ ತಿಳಿಸಿದ್ದಾರೆ. ಪಾಕಿಸ್ತಾನದಲ್ಲಿರುವ ಕರ್ತಾರ್ಪುರ ಸಾಹಿಬ್‌ನಂತಹ ಸಿಖ್ಖರ ಪವಿತ್ರ ಸ್ಥಳಗಳನ್ನು ಭಾರತದ ಭೂಪ್ರದೇಶಕ್ಕೆ ತರುವ ಅವಕಾಶವನ್ನು ಈ ಹಿಂದಿನ ಕಾಂಗ್ರೆಸ್ ಕಳೆದುಕೊಂಡಿತು ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ. ಪಾಕಿಸ್ತಾನದೊಂದಿಗಿನ 1965 ಹಾಗೂ 1971ರ ಯುದ್ಧದ ಬಳಿಕ ಪ್ರಯತ್ನಿಸಿದ್ದರೆ ಆ ಭೂಭಾಗವನ್ನು ವಶಕ್ಕೆ ಪಡೆದುಕೊಳ್ಳಲು ಭಾರತಕ್ಕೆ ಸಾಧ್ಯವಿತ್ತು ಎಂದು ಪ್ರಧಾನಿ ಅವರು ಹೇಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News