ಹಿರಿಯ ಚಿತ್ರ ನಟ ರಾಜೇಶ್ ನಿಧನ
ಬೆಂಗಳೂರು, ಫೆ.19: ಕನ್ನಡ ಚಲನಚಿತ್ರರಂಗದ ‘ಕಲಾ ತಪಸ್ವಿ’ ಎಂದೇ ಚಿರಪರಿಚಿತರಾದ ನಟ ರಾಜೇಶ್(82) ಶನಿವಾರ ಮಂಜಾನೆ ವಯೋಸಹಜ ಅನಾರೋಗ್ಯದಿಂದ ನಿಧನರಾದರು.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರು ಎಳೆದಿದ್ದಾರೆ.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬೆಂಗಳೂರು ಉತ್ತರ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಅವರ ಸ್ನೇಹಿತ ಸಿದ್ದಲಿಂಗಯ್ಯರವರ ತೋಟದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಅವರಿಗೆ ಸದಾನಂದ, ಧನಂಜಯ ಎಂಬ ಇಬ್ಬರು ಪುತ್ರರು ಹಾಗೂ ಆಶಾರಾಣಿ ಎಂಬ ಓರ್ವ ಪುತ್ರಿ ಇದ್ದಾರೆ.
ಸೊಸೆ ತಂದ ಸೌಭಾಗ್ಯ, ದೇವರ ದುಡ್ಡ, ಕಲಿಯುಗ, ದೇವರ ಗುಡಿ, ವೀರ ಸಂಕಲ್ಪ, ಗಂಗೆ ಗೌರಿ ಸೇರಿದಂತೆ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಜೇಶ್ ನಟಿಸಿದ್ದು, ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು, ಸೇವೆಯನ್ನು ಗುರುತಿಸಿದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು 2012ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ನಟ ರಾಜೇಶ್ ಅವರ ಪುತ್ರಿ ಆಶಾರಾಣಿ ಕೂಡ ಚಿತ್ರನಟಿಯಾಗಿದ್ದು, ಖ್ಯಾತ ನಟ ಅರ್ಜುನ್ ಸರ್ಜಾರನ್ನು 1988ರಲ್ಲಿ ಮದುವೆಯಾದರು. ಹೀಗೆ ರಾಜೇಶ್ ಅವರ ಕುಟುಂಬದವರು ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಕನ್ನಡ ಚಿತ್ರರಂಗದ ಹಿರಿಕಿರಿ ನಟನಟಿಯರು ಸೇರಿದಂತೆ ಅಭಿಮಾನಿಗಳು ಅವರ ಅಗಲಿಕೆಗೆ ಕಂಬಿನಿ ಮಿಡಿದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ನಾಯಕ ನಟರಾಗಿ ಮತ್ತು ಪೋಷಕ ಪಾತ್ರಗಳಲ್ಲೂ ಮಿಂಚಿದ ರಾಜೇಶ್ ಮೂರು ತಲೆಮಾರಿನ ಕನ್ನಡಿಗರಿಗೆ ಪರಿಚಿತರಾಗಿದ್ದರು. ಒಬ್ಬೊಬ್ಬರಾಗಿ ಹಿರಿಯ ಕಲಾವಿದರನ್ನು ನಮ್ಮ ಕಲಾ ಜಗತ್ತು ಕಳೆದುಕೊಳ್ಳುತ್ತಿರುವುದು ಬಹಳ ದುಃಖದ ಸಂಗತಿ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಯಾವುದೇ ಪಾತ್ರವನ್ನು ನೀಡಿದರೂ ಸುಲಲಿತವಾಗಿ ಅಭಿನಯಿಸುವ ಸಾಮಥ್ರ್ಯ ನಟ ರಾಜೇಶ್ ಅವರಲ್ಲಿತ್ತು. ಕಲಾಸೇವೆಯನ್ನು ಅವರು ಅತ್ಯಂತ ಪ್ರಾಮಾಣಿಕತೆಯಿಂದ ಮಾಡಿದ್ದಾರೆ. ತಾನು ದೊಡ್ಡ ನಟನೆಂಬ ಆಡಂಬರವಿಲ್ಲದೇ ಬದುಕಿದ ಅತ್ಯಂತ ಸರಳಜೀವಿ. ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ