ನ್ಯಾಯಾಲಯದಿಂದ ಅಂತಿಮ ತೀರ್ಮಾನ ಬರುವವರೆಗೂ ಸಾಮರಸ್ಯವಿರಲಿ: ಶಿವಮೂರ್ತಿ ಮುರುಘಾ ಶರಣರು

Update: 2022-02-19 14:26 GMT

ಬೆಂಗಳೂರು, ಫೆ.19: ಹಿಜಾಬ್-ಕೇಶರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಇಡೀ ರಾಜ್ಯವೇ ಉಚ್ಚ ನ್ಯಾಯಾಲಯದ ತೀರ್ಮಾನಕ್ಕೆ ಕಾಯುತ್ತಿದ್ದೇವೆ. ಹಾಗಾಗಿ ನ್ಯಾಯಾಲಯದಿಂದ ಅಂತಿಮ ತೀರ್ಮಾನ ಬರುವವರೆಗೂ ನಾವೆಲ್ಲರೂ ಸಾಮರಸ್ಯದಿಂದ ಜೀವನ ಮಾಡಬೇಕು ಎಂದು ಮುರುಘಾ ಮಠದ ಶಿವಮೂರ್ತಿ ಶರಣರು ತಿಳಿಸಿದ್ದಾರೆ. 

ಶನಿವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ವಿದ್ಯೆ ಕೆಟ್ಟರೆ ಇಡೀ ಜೀವನವೇ ನಾಶವಾಗುತ್ತದೆ. ಹಾಗಾಗಿ ವಿದ್ಯೆ ಹಾಳಾಗದಂತೆ ಸೂಕ್ತ ವಾತಾವರಣವನ್ನು ನಿರ್ಮಿಸಬೇಕು. ನ್ಯಾಯಾಲಯದಿಂದ ಸ್ಪಷ್ಟ ಆದೇಶ ಬರುವವರೆಗೂ ನಾವು ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು. 

ಕೊರೋನ ನಿಸರ್ಗದತ್ತ ಸಮಸ್ಯೆಯಾದರೆ, ಹಿಜಾಬ್-ಕೇಸರಿ ಶಾಲು ವಿವಾದ ಮಾನವ ನಿರ್ಮಿತ ಸಂದಿಗ್ಧತೆಯಾಗಿದೆ. ಇವರೆರಡರ ನಡುವೆ ನಾವೆಲ್ಲರೂ ವೀಕ್ಷಕರಾಗಿದ್ದೇವೆ. ಇಂತಹ ಸಂದರ್ಭದಲ್ಲಿ ಸಾಮರಸ್ಯ ಮೂಡಿಸುವುದು ಮುಖ್ಯವಾಗಿದೆ. ಹಾಗಾಗಿ ಸಭೆಯನ್ನು ಆಯೋಜಿಸಿ ಚರ್ಚೆ ಮಾಡುತ್ತಿದ್ದೇವೆ. ಹಾಗೆಯೇ ರಾಜಕೀಯ ಪಕ್ಷಗಳು ಸಾಮಾನ್ಯ ಸಭೆಯೊಂದನ್ನು ಆಯೋಜಿಸಿ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು. 

ಜಮಾಅತೆ ಅಹ್ಲೆ ಸುನ್ನತ್ ಕರ್ನಾಟಕದ ಅಧ್ಯಕ್ಷ ಮೌಲಾನಾ ಸೈಯದ್ ತನ್ವೀರ್ ಪೀರಾ ಹಾಶ್ಮಿ ಮಾತನಾಡಿ, ಹಿಜಾಬ್ ಕೇವಲ ಒಂದು ತಿಂಗಳಿನಿಂದ ಮಾತ್ರ ಧರಿಸುತ್ತಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಯಬೇಕಾಗಿದೆ. ಇದನ್ನು ತಿಳಿಯದೇ ಸರ್ವದರ್ಮ ಸಾಮರಸ್ಯದಿಂದ ಕೂಡಿದ ರಾಜ್ಯದಲ್ಲಿ ಕೋಮು ವಾತಾವರಣವನ್ನು ಸೃಷ್ಟಿಸಲಾಗಿದೆ. ಶಿಕ್ಷಣವು ಮುಖ್ಯವಾಗಿದ್ದು, ಧರ್ಮದ ಹೆಸರಿನಲ್ಲಿ ಅದನ್ನು ಹಾಳು ಮಾಡುವುದು ಸರಿಯಲ್ಲ. ಹಾಗಾಗಿ ಸರ್ವಧರ್ಮ ಸಾಮರಸ್ಯವನ್ನು ಸ್ಥಾಪಿಸುವುದು ಸರಕಾರದ ಮೊದಲ ಕರ್ತವ್ಯವಾಗಿದೆ ಎಂದು ಹೇಳಿದರು. 

ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು ಮಾತನಾಡಿ, ಬಾಬಾ ಸಾಹೇಬರು ಬರೆದಿರುವ ಸಂವಿಧಾನದಲ್ಲಿ ಎಲ್ಲಾ ವಿಚಾರಗಳಿಗೂ ಪರಿಹಾರವಿದೆ. ಅನೇಕ ಜಾತಿಗಳ ಹಾಗೂ ಸರ್ವ ಧರ್ಮಗಳಿಗೆ ನೆಲೆಯಾಗಿರುವ ದೇಶದಲ್ಲಿ ಧಾರ್ಮಿಕ ವಿಚಾರಗಳಿಗೆ, ಜಾತಿ ವಿವಾದಗಳಿಗೆ ಅವಕಾಶ ನೀಡಬಾರದು. ಸಂವಿಧಾನದ ಮೂಲಭೂತ ಹಕ್ಕಾದ ಶಿಕ್ಷಣಕ್ಕೆ ಯಾವುದೇ ತೊಂದರೆ ಮಾಡಬಾರದು ಎಂದು ತಿಳಿಸಿದರು. 

ನಾಸೀಹ್ ಫೌಂಡೇಶನ್ ಅಧ್ಯಕ್ಷ ಮೌಲಾನಾ ಸೈಯದ್ ಶಬ್ಬೀರ್ ಅಹ್ಮದ್ ನದ್ವಿ ಮಾತನಾಡಿ, ರಾಜ್ಯದಲ್ಲಿ ಶಾಂತಿಯನ್ನು ಕದಡುವ ಕೆಲಸವಾಗುತ್ತಿದೆ. ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಭಾವನೆಗಳು ಕದಡುವಂತೆ ಮಾಡಲಾಗುತ್ತಿದೆ. ಸಂವಿಧಾನದ ಅಧೀನದಲ್ಲೇ ಎಲ್ಲರೂ ನಡೆಯಬೇಕು. ಆದರೆ ಅನಗತ್ಯವಾಗಿ ವಿವಾದವನ್ನು ಸೃಷ್ಟಿ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‌ ರಾಜ್ಯ ಉಪಾಧ್ಯಕ್ಷ ಸುಲೇಮಾನ್ ಖಾನ್ ಉಪಸ್ಥಿತರಿದ್ದರು.

ಕೋವಿಡ್‍ನಿಂದ ಕೆಟ್ಟಿದ್ದ ಶೈಕ್ಷಣಿಕ ವ್ಯವಸ್ಥೆ ಮತ್ತೊಮ್ಮೆ ಹಿಜಾಬ್-ಕೇಸರಿ ಶಾಲು ವಿವಾದದಿಂದ ಕೆಂಗೆಟ್ಟಿದೆ. ಇಸ್ಲಾಂನಲ್ಲಿ ಯಾವುದಕ್ಕೂ ಬಲವಂತ ಎಂಬುದು ಇಲ್ಲ, ಬದಲಾಗಿ ಮಕ್ಕಳಿಗೆ ಒಳ್ಳೆಯ ದಾರಿಯನ್ನು ತೋರಿಸುತ್ತೇವೆ. ಇದನ್ನು ಧಿಕ್ಕರಿಸಿದರೆ, ಅವರ ಇಷ್ಟಕ್ಕೂ ಅವಕಾಶ ನೀಡುತ್ತೇವೆ. ಮಕ್ಕಳು ಹಿಜಾಬ್ ಧರಿಸಿ ಶಾಲೆಗೆ ಬರುವುದರಲ್ಲಿ ಯಾವುದೇ ರಾಜಕೀಯ ಪಕ್ಷಗಳ ಒತ್ತಡವಾಗಲೀ, ಹಿರಿಯರ ಬಲವಂತವಾಗಲೀ ಇಲ್ಲ. ಇಷ್ಟು ದಿನ ಇಲ್ಲದ ವಿವಾದ ಈಗ ಸೃಷ್ಟಿಯಾಗಿದೆ. ಇವೆಲ್ಲದರ ಕುರಿತು, ಶೈಕ್ಷಣಿಕ ಸಂಸ್ಥೆಗಳ ಆಡಳಿತ ಮಂಡಳಿಗಳು ನಿಷ್ಪಕ್ಷಪಾತವಾಗಿ ಅರ್ಥ ಮಾಡಿಕೊಳ್ಳಬೇಕು. ಹಾಗೆಯೇ ಸರಕಾರವು ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದ ಕುರಿತು ಇರುವ ಗೊಂದಲಗಳಿಗೆ ಸ್ಪಷ್ಟನೆ ನೀಡಬೇಕು. 
-ಮೌಲಾನ ಮಕ್ಸೂದ್ ಇಮ್ರಾನ್ ಸಾಹೇಬ್, ಜಾಮೀಯ ಮಸೀದಿ, ಸಿಟಿ ಮಾರ್ಕೆಟ್, ಬೆಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News