ಸರಹದ್ದುಗಳು ಅನ್ವಯಿಸದ ‘ಮೋನು ಸ್ಮೃತಿ’

Update: 2022-02-20 06:50 GMT

 ಮೈಸೂರು ವಿಶ್ವವಿದ್ಯಾಲಯದಿಂದ ಕುವೆಂಪು ಬಂಗಾರದ ಪದಕದೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತಕ ಪದವೀಧರರಾಗಿರುವ ಬೊಳುವಾರು, ಕೇಂದ್ರ ಸಾಹಿತ್ಯ ಅಕಾಡಮಿ’ಯ ಇತಿಹಾಸದಲ್ಲಿ, ಯಾವುದೇ ಭಾಷೆಯ ಸೃಜನಶೀಲ ಗದ್ಯ ಕೃತಿಗಳಿಗಾಗಿ ಎರಡು ಬಾರಿ ಪ್ರಶಸ್ತಿ ಪಡೆದ ದೇಶದ ಏಕೈಕ ಸಾಹಿತಿಯೆಂಬ ದಾಖಲೆ ಬರೆದವರು. ‘ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ಗೌರವ ಪ್ರಶಸ್ತಿಯೊಂದಿಗೆ ಮೂರು ಪ್ರಶಸ್ತಿಗಳನ್ನು ಗಳಿಸಿದ ಇವರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯಿಂದಲೂ ಸನ್ಮಾನಿತರು. ‘‘ಹೂಂಕರಿಸಿ ಓಡುವವುಗಳ ಆಣೆ, ಕಿಡಿ ಹಾರಿಸುತ್ತಾ ಹೋಗುವವುಗಳ ಆಣೆ, ಪ್ರಾತಃಕಾಲದಲ್ಲಿ ಹಲ್ಲೆ ನಡೆಸುವವುಗಳ ಆಣೆ, ಭೂಮಿಯ ಮೇಲೆ ಒಡೆತನ ಮತ್ತು ಅಧಿಕಾರಕ್ಕಾಗಿ ಕಣ್ಣು ಕಿವಿಗಳನ್ನಷ್ಟೇ ಪ್ರಮಾಣವಾಗಿರಿಸಿಕೊಂಡು ನಿನ್ನ ದಿವ್ಯವಾಣಿಯನ್ನು ಅವಿವೇಕದಿಂದ ವಿಚಾರರಹಿತವಾಗಿ ಉದ್ಧರಿಸುವವರನ್ನು ನರಕದ ಕೆಂಡರಾಶಿಯ ಮೇಲೆ ನಿಲಿಸು’’ ಎಂಬ ಹಕ್ಕೊತ್ತಾಯದೊಂದಿಗೆ ಕನ್ನಡ ಗದ್ಯ ಸಾಹಿತ್ಯಕ್ಕೆ ಮುಸ್ಲಿಮ್ ಬದುಕನ್ನು ಮೊತ್ತ ಮೊದಲ ಬಾರಿಗೆ ಪರಿಚಯಿಸಿದ ಇವರ ಬರಹಗಳಲ್ಲಿ, ಮನುಷ್ಯನಿರ್ಮಿತ ಎಲ್ಲ ಧರ್ಮಗಳ ಎಲ್ಲೆ ಮೀರುವ ಚಿಂತನೆಗಳಿರುತ್ತವೆ.

‘ಅತ್ತ ಇತ್ತಗಳ ಸುತ್ತ ಮುತ್ತ’ ಓಡಾಡುತ್ತಾ, ‘ದೇವರುಗಳ ರಾಜ್ಯದಲ್ಲಿ’ ಎಷ್ಟು ಸಿಗಬಹುದು ‘ಅಂಕ’ ಎಂಬ ಲೆಕ್ಕಾಚಾರದಲ್ಲಿ ‘ಆಕಾಶಕ್ಕೆ ನೀಲಿ ಪರದೆ’ ಹೊದಿಸಿ, ‘ಒಂದು ತುಂಡು ಗೋಡೆ’ಯ ನಡುವೆ ಕುಳಿತರು. ಮುಂದುವರಿದು, ‘ಜಿಹಾದ್’ ಕೂಗಿ, ‘ಸ್ವಾತಂತ್ರ್ಯದ ಓಟ’ ಗಳಿಗೆ ಸಾಕ್ಷಿಯಾಗಿ, ‘ಓದಿರಿ’ ಎಂದೂ ಹೇಳಿದರು. ‘ತಟ್ಟು ಚಪ್ಪಾಳೆ ಪುಟ್ಟ ಮಗು’ ಲಾಲಿತ್ಯಪೂರ್ಣವಾಗಿ ಹಾಡಿ ಮಗುವೂ ಆದರು. ‘ಉಮ್ಮಾ’ ಎಂದು ನಿಟ್ಟುಸಿರಿಟ್ಟ ‘ಬೊಳುವಾರು’ ಇದೀಗ ‘ಮೋನುಸ್ಮೃತಿ’ಯ ಮೂಲಕ ನೆನಪುಗಳ ಹಾಡನ್ನು ಹಾಡಿ, ತಾಳವನ್ನು ನಮಗೇ ಹಾಕಲು ಬಿಟ್ಟಿದ್ದಾರೆ. ಅದು ಏಕ್, ತೀನ್ ತಾಳವೋ...ಝೂಮ್ರಾ, ದೀಪ್ಚಂದಿ, ಜಂಪೆ, ರೂಪಕವೋ... ತಾಳಕ್ಕೆ ತಕ್ಕಂತೆ ಕುಣಿಯುವುದನ್ನು ಆಯಾ ಭಾವ-ಭಕುತಿಗೆ ಬಿಟ್ಟುಬಿಟ್ಟಿದ್ದಾರೆ.

ಸಾಮಾನ್ಯವಾಗಿ ‘ಆತ್ಮಕತೆ’ಯಲ್ಲಿ ಎರಡು ಬಗೆಯ ವೈಪರೀತ್ಯಗಳಿರುತ್ತವೆ. ಒಂದೋ, ರಂಜನೀಯ ಅಂಶಗಳಿಂದ ಕೂಡಿದ ವಿಜೃಂಭಣೆ ಅಥವಾ ದಾರುಣ ಕಥನ ಹಂದರಗಳಿಂದ ಕೂಡಿದ ಕಾರುಣ್ಯ. ಚೌಕಟ್ಟಿನೊಳಗೇ ಕುಳಿತು ನೇಯುವ ಕಸುಬುಗಾರಿಕೆ ಸಾಮಾನ್ಯ ‘ಆತ್ಮಕತೆ’ಗಳದ್ದು. ಆದರೆ ಬೊಳುವಾರರು ‘ಹೆಡ್-ಬಾಡಿ-ಟೈಲ್’ ಎಂಬ ಸೂತ್ರ ಮುರಿದು ಆತ್ಮಕಥನ ಪರಂಪರೆಗೇ ಹೊಸಭಾಷ್ಯವನ್ನು ಬರೆದಿದ್ದಾರೆ.
ಆಪ್ತರೊಂದಿಗೆ ಕಾಲುಚಾಚಿ ಕುಳಿತು ಹೇಳುವಂತಿವೆ ಬೊಳುವಾರರ ‘ಆತ್ಮಸ್ಮೃತಿ’ಗಳು. ಸಹಜವಾಗಿಯೇ ಮುಂದೇನು? ಎನ್ನುವ ಪ್ರಶ್ನೆ ಪುಟಗಳುದ್ದಕ್ಕೂ ಕಾಡುತ್ತದೆ. ಕಥಿಸುತ್ತಾ ಹೋಗುವ ಭರದಲ್ಲಿ, ಇನ್ಯಾವುದೋ ಕತೆಯೊಂದು ಹೊಳೆದು, ಹೇಳುತ್ತಿದ್ದ ಕತೆಯು ಬದಿಗೆ ಸರಿದು ಬಿಡುತ್ತದೆ. ಥಟ್ಟನೆ, ಹಳಿತಪ್ಪಿ ಹೋದ ರೈಲನ್ನು ಬೊಳುವಾರರು ಮತ್ತೆ ಎಳೆದು ಹಳಿಯ ಮೇಲೆ ನಿಲ್ಲಿಸುತ್ತಾರೆ. ಹೇಳಲಿಕ್ಕಿರುವುದನ್ನು ಮುಲಾಜಿಲ್ಲದೆ ಹೇಳಿಯೂ ಬಿಡುತ್ತಾರೆ. ಆ ಕಾರಣದಿಂದ ಕೃತಿಯು ಆಪ್ತ ಸಂವಾದದ ರೂಪವನ್ನು ತಾಳಿದೆ. ಹಿಡಿದ ಪುಸ್ತಕವನ್ನು ಓದಿ ಮುಗಿಸುವವರೆಗೂ ಮತ್ತೇನನ್ನೂ ಕಾಣದಾಗುತ್ತೇವೆ. ಬಲು ಎಚ್ಚರ, ಜವಾಬ್ದಾರಿಯಿಂದಲೇ ಸ್ಮತಿಗಳನ್ನು ಹೆಣೆಯುತ್ತಾ ಸಾಗುವ ಬೊಳುವಾರರದ್ದು ಹಲವು ಭಾವಕೋಶಗಳಿರುವ ಜೀವ ಆದರೂ, ಮನುಷ್ಯತ್ವವೇ ಅವರಿಗೆ ಮುಖ್ಯವಾಗುತ್ತದೆ. ಅದು ಅವರ ಬದುಕಿನ ಮೂಲಮಂತ್ರವೂ ಆಗಿಬಿಡುತ್ತದೆ. ಅತಿರೇಕದ ಏರಿಳಿತಗಳಿಲ್ಲ. ಇದ್ದದ್ದನ್ನು ಇದ್ದ ಹಾಗೆಯೇ ದಾಟಿಸಿದ ‘ಮೋಣ್ ಇಚ್ಚಾ’ಗೆ ಅಸ್ಸಲಾಂ ಅಲೈಕುಂ.
ಬೊಳುವಾರು ಕ್ಷೇತ್ರ ಮಹಾತ್ಮೆ, ತೇರಬೀದಿಯ ಸರದಾರರು, ರಾಜಧಾನಿ ಎಕ್ಸ್‌ಪ್ರೆಸ್, ಬೆಂಗಳೂರು ವಾರ್ತೆಗಳು, ಹೇ ರಾಂ! ಎಂಬ ಐದು ಸ್ಮೃತಿಗಳೊಳಗೆ ಹಲವಾರು ಅಧ್ಯಾಯಗಳುಂಟು. ಅಚ್ಚರಿ, ರೋಚಕ, ರಂಜನೀಯ, ಕಾರುಣ್ಯ, ತೃಪ್ತಿ, ಆನಂದಗಳಂತಹ ರಸೋತ್ಪತ್ತಿಗೂ ಕಾರಣವಾಗುವ ಅಕ್ಷರಗಳ ಪುಟಪುಟದಲ್ಲೂ ಹೊಸತನವಿದೆ. ಆಕಾರ-ವಿಕಾರವಿಲ್ಲದ್ದು ಆತ್ಮ. ಅಂತಹದ್ದೊಂದು ಆತ್ಮದ ಸಾಂಗತ್ಯದಲ್ಲಿ ಪಡಿಮೂಡಿದ ಕತೆಯೇ ಈ ‘ಮೋನುಸ್ಮತಿ’. ಇಲ್ಲಿ ‘ಸರಹದ್ದುಗಳು ಅನ್ವಯಿಸುವುದಿಲ್ಲ’. ಅನ್ವಯಿಸಲೂಬಾರದು.
***
ಸ್ಮೃತಿ ಒಂದರ ‘ಬೊಳುವಾರು ಕ್ಷೇತ್ರ ಮಹಾತ್ಮೆ’ಯಲ್ಲಿ ಆರು ಅಧ್ಯಾಯಗಳಿವೆ. ‘ಹಕ್ಕುಸ್ಥಾಪನೆ’ ಅಧ್ಯಾಯದಲ್ಲಿ ತಾನೊಬ್ಬ ಕತೆಗಾರನಾಗಲು ಕಾರಣರಾದ ಮೊದಲಿಗರು ‘ಬನ್ನಂಜೆ ಗೋವಿಂದಾಚಾರ್ಯ’ರು ಹಾಗೂ ಎರಡನೆಯವರು ‘ಆರೂರು ಲಕ್ಷ್ಮಣ ಶೇಟ್’ ಎಂದು ನೆನೆಯುವ ಬೊಳುವಾರು, ಮುಂದೆ ನೇರವಾಗಿ ಹೋಗುವುದು ಹಕ್ಕು ಸ್ಥಾಪಿಸುವ ಮೂರನೆಯ ವ್ಯಕ್ತಿಯತ್ತ. ಅದು ಮತ್ಯಾರೂ ಅಲ್ಲ, ಬೊಳುವಾರು ಒಬ್ಬ ಹರಾಮಿ ಅಂತ ಫೇಮಸ್ಸು ಆಗಲು ಕಾರಣರಾಗಿದ್ದ, ಮಡದಿ ಶ್ರೀಮತಿ ಜುಬೇದಾ ಅವರು. ಮೋನುಸ್ಮತಿ ಆರಂಭವಾಗುವುದೇ ಜುಬೇದಾರ ‘ಪುರಪ್ರವೇಶ’ ಪ್ರಕರಣದಿಂದ. ವಿವಿಧತೆಯಲ್ಲಿ ಏಕತೆಯುಳ್ಳ ಸಂಸಾರವನ್ನು ನಮ್ಮ ಸಂವಿಧಾನಕ್ಕೆ ಹೋಲಿಸಿ, ಬದುಕನ್ನು ಸರಳ ರೇಖೆಯಲ್ಲಿ ತಂದು ನಿಲ್ಲಿಸುವ ಮೂಲಕ, ಹೊಸದಿಶೆಯಲ್ಲಿ ಆತ್ಮಕಥನವು ಆಡಲು ತೊಡಗುತ್ತದೆ. ಅಷ್ಟಕ್ಕೇ, ಓದುವ ಮನಸ್ಸು-ಹೃದಯ ಒಂದು ಹಂತಕ್ಕೆ ಟ್ಯೂನ್ ಆಗಿಬಿಟ್ಟಿರುತ್ತದೆ.
ತಮ್ಮ ‘ಉಗ್ಗುಸ್ಥಾನದ’ ತಳಕ-ಮಳಕವನ್ನು ಎಗ್ಗಿಲ್ಲದೆ ಪ್ರಸ್ತಾಪಿಸಿ, ಅದರಿಂದ ಹೊರಬರಲು ಪಡುವ ಬವಣೆಯನ್ನು ಹೇಳಿ ಹಗುರವಾಗುತ್ತಾರೆ. ‘ಉಗ್ಗ’ನ್ನು ಬಗ್ಗಿಸಲು ‘ದಿನಗೂಲಿ’ಯಾದಿಯಾಗಿ ತಾವು ಮಾಡಿದ ಸಾಹಸವನ್ನೂ ಮುಚ್ಚುಮರೆಯಿಲ್ಲದೆ ಹೇಳುತ್ತಾರೆ.
ಬೊಳುವಾರರಿಗೆ ‘ಉಪ್ಪ’ನೇ ‘ಉಸ್ತಾದ್’. ಆ ಉಸ್ತಾದರೇ ಸೇರಿಸಿದ್ದ ‘ಕಾಫರರ ಕನ್ನಡ’ ಶಾಲೆಗೆ ಹೋದ ಅವರಕ್ಕ ಬೀಪಾತುಮ್ಮರಿಗೆ ಓದಿನ ಹುಚ್ಚು, ನಮ್ಮ ಭಾಷೆಯಲ್ಲಿ ಹೂವಾಗಿರುವ ‘ಜುಬೇದಾ’ ಎಂಬ ಅರೇಬಿಕ್ ಹೆಸರು, ಕಾಲಾಂತರದಲ್ಲಿ ‘ಹಳೆ ಸಿಲೆಬಸ್’ ಅನ್ನು ಅನಿವಾರ್ಯ ಕಾರಣಗಳಿಂದ ತಿದ್ದಿಕೊಳ್ಳುವಂತಾದ ಪ್ರಸಂಗಗಳು..ಮೊದಲ ಹತ್ತು ಓವರಿನಲ್ಲೇ ‘ಸಚಿನ್-ವೀರು’ ಜೋಡಿಯು ರನ್ನುಗಳನ್ನು ಕಲೆಹಾಕಿ ತಂಡಕ್ಕೆ ಭದ್ರಬುನಾದಿ ಒದಗಿಸಿದಂತೇ. ಮಹಾಲಿಂಗೇಶ್ವರ ಕ್ಷೇತ್ರದ ದರ್ಶನ ಭಾಗ್ಯ, ಸ್ಥಳ ಪುರಾಣ, ಜುಮಾದಿ, ಮಾಪುಳ್ತಿ, ಗುಳಿಗ ದೈವ ಆದಿಯಾಗಿ ಜಕಿಣಿಯವರೆಗೂ ‘ಬೊಳುವಾರು’ ಕಥಿಸುತ್ತಾರೆ.
ಭವಬಂಧನದ ಭಾವಗಳಿಗೆ ಯಾರೂ ಹೊರತಲ್ಲ ಎನ್ನುವುದಕ್ಕೆ ಗುಲ್ಬರ್ಗಾಕ್ಕೆ ಹೋದಾಗ ಸಿಗುವ ಹೆಣ್ಣು ಜೀವವೊಂದು ತಮ್ಮ ಅಕ್ಕ ‘ಬೀಪಾತುಮ್ಮ’ರಂತೆಯೇ ಇರುವುದನ್ನು ಕಂಡು, ‘ನಿಮ್ಮನ್ನು ಅಕ್ಕ ಎಂದು ಕರೆಯಲೇ?’-ಕೇಳಿ ‘ಶಕುಂತಲಕ್ಕ’ನ ಜೊತೆಗೆ ಬಂಧವನ್ನು ಬೆಸೆಯುತ್ತಾರೆ. ಆ ಬಂಧವು ‘ಬೊಳುವಾರು ಮಹಮದ್ ಕುಂಞಿ’ ಎಂಬ ಕತೆಗಾರನ ಹುಟ್ಟಿಗೆ ಕಾರಣವಾಗುತ್ತದೆ. ದೇವಿ ಉಳ್ಳಾಲ್ತಿಯ ರೂಪದಲ್ಲಿ ಎರಡನೇ ‘ಉಮ್ಮ’ನಾಗಿ ಬರುವ ‘ಪರಮೇಶ್ವರಿಯಕ್ಕ’ ಹೊಟ್ಟೆ ತುಂಬಿಸಿದ್ದಲ್ಲದೆ, ಬದುಕುವ ದಾರಿಯನ್ನೂ ತೋರಿಸುತ್ತಾರೆ. ಮನುಷ್ಯತ್ವವೊಂದು ಹಲವು ಭಾವ-ರೂಪಗಳನ್ನು ಏಕಶ್ರುತಿಯಲ್ಲಿ ಹೇಗೆ ಹಿಡಿದಿಡುತ್ತದೆ ಎನ್ನುವುದಕ್ಕೆ-ಕಥನದುದ್ದಕ್ಕೂ ‘ಬೊಳುವಾರ’ರ ಬದುಕಿನಲ್ಲಿ ಬರುವ ಕೆಂಪು ಬಣ್ಣದ ರಕ್ತವನ್ನು ಹೊದೆದ ಬಹುಶ್ರದ್ಧೆಯ ಜೀವಗಳು ಉದಾಹರಣೆಯಾಗಿ ಕಾಣಸಿಗುತ್ತವೆ.
ಸಿಂಡಿಕೇಟ್ ಬ್ಯಾಂಕಿನಲ್ಲಿ ನಲ್ವತ್ತು ವರ್ಷಗಳ ಸುದೀರ್ಘ ಸೇವೆಯ ಅನುಭವ, ಕೆ.ಕೆ.ಪೈ ಅವರ ಕಿವಿಮಾತು, ಹಿರಿಯ ಅಧಿಕಾರಿಗಳ ಸೂಕ್ತ ಸಲಹೆ, ಪ್ರೋತ್ಸಾಹ ಎಲ್ಲವೂ ಕೂಡಿ, ಅಲ್ಲೇನಾಯಿತು ಎಂದು ವಿಚಾರಿಸುವ ಬಾಸ್‌ಗಳಿಗೆ ‘ಪತಾ ನಹೀ ಸಾಬ್’ ಎಂದೇ ಉತ್ತರಿಸಿ ಅದೇ ಹೆಸರಲ್ಲಿ ಕರೆಯಿಸಿಕೊಳ್ಳುವವರೆಗೂ ಸಾಗಿ ಬೆಳೆದು ಬೆಳಗಿದ್ದು ಈಗ ಇತಿಹಾಸ. ತಾನು ಏನು ಮಾಡಬಲ್ಲೆ, ತನ್ನ ಶಕ್ತಿಯೇನು ಎನ್ನುವುದರ ಅರಿವು ‘ಬೊಳುವಾರ’ರಿಗೆ ಚೆನ್ನಾಗಿಯೇ ತಿಳಿದಿದ್ದ ಕಾರಣದಿಂದಲೇ ‘ಗುಲ್ಬರ್ಗ-ಟು-ಪುತ್ತೂರು’ಗೆ ಬಂದದ್ದಲ್ಲದೆ, ತಮ್ಮ ಎರಡನೇ ನೆಗೆತದಲ್ಲಿ ನೇರವಾಗಿ ಮಣಿಪಾಲದ ಹೆಡ್ ಆಫೀಸಿನ ಪ್ರಚಾರ ಹಾಗೂ ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ಲ್ಯಾಂಡ್ ಆಗಿಬಿಡುತ್ತಾರೆ.
ಪ್ರಶ್ನಿಸುವ ಮನಸ್ಸು ‘ಬೊಳುವಾರ’ರನ್ನು ಹಲವು ಸಾಹಸಗಳಿಗೆ ಅಣಿಯಾಗಿಸುತ್ತದೆ. ‘ಮೋಣ್‌ಇಚ್ಚಾ’, ಪ್ರಶ್ನಿಸುತ್ತಾರೆ.. ಪ್ರಶ್ನೆಗಳ ಮೇಲೆ ಪ್ರಶ್ನಿಸುತ್ತಾರೆ. ಪ್ರಶ್ನಿಸುತ್ತಲೇ ಸಾಗುತ್ತಾರೆ. ಹಾಗಾಗಿ ಕೆಲವರಿಗೆ ‘ಬೊಳುವಾರ’ರು ಅಪಥ್ಯವಾಗುತ್ತಾರೆ. ಜೀರ್ಣಿಸಿಕೊಳ್ಳಲು ಶಕ್ತವಿರುವ ಜಠರಗಳು ಜೀರ್ಣಿಸಿಕೊಂಡು ಹಗುರವಾದರೆ, ಉಳಿದಂತೆ ಅಜೀರ್ಣಗೊಂಡ ದೇಹ-ಮನಸ್ಸುಗಳು ಬೊಬ್ಬಿರಿದು ಗೊತ್ತು ಗುರಿ ಇಲ್ಲದೆ ಅರಚುತ್ತಲೇ ಇರುತ್ತವೆ.
ಆತ್ಮಕತೆಯುದ್ದಕ್ಕೂ ತಮ್ಮನ್ನು ತಮಾಷೆಯ ವಸ್ತುವನ್ನಾಗಿಸಿಕೊಂಡ ‘ಬೊಳುವಾರು’, ತಮ್ಮ ಅಪ್ರತಿಮ ವಿಡಂಬನೆ, ವ್ಯಂಗ್ಯಗಳಿಂದ ಸ್ಮೃತಿಗಳ ಸ್ಥಿತಿಯನ್ನು ಬೇರೆಯೇ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಈ ಕ್ರಮವೂ ಕೂಡ ‘ಆತ್ಮಕತೆ’ಯ ಸಿದ್ಧ ಚೌಕಟ್ಟನ್ನು ಮುರಿದುದರ ಫಲ. ಮೊನಚು ವಿಡಂಬನೆಗಳು, ಹರಿತ ವ್ಯಂಗ್ಯಗಳು ಅರ್ಥವಾಗುವವರಿಗೆ ಮಾತ್ರ ಅರ್ಥವಾಗುತ್ತದೆ. ಎಲ್ಲರಿಗೂ ಅರ್ಥವಾಗಿಸಲು ಭಗವಂತನಿಂದಲೂ ಸಾಧ್ಯವಿಲ್ಲ ಬಿಡಿ. ತಾನೇ ಶ್ರೇಷ್ಠ, ತನ್ನ ಮಾತೇ ಅಂತಿಮ ಎಂಬ ಹಮ್ಮು-ಬಿಮ್ಮು ‘ಬೊಳುವಾರ’ರಿಗೆ ಇಲ್ಲ. ಕಾಲಾನುಕಾಲದಲ್ಲಿ ಸಮಾಜ, ಸಮುದಾಯಕ್ಕೆ ಯಾವುದು ಅಗತ್ಯವೋ, ಅದನ್ನು ಪೂರ್ಣ ಮನಸ್ಸಿನಿಂದ ಸ್ವೀಕರಿಸಿ ನಡೆಯುವಂತೆ ಹೇಳಿದ್ದಾರೆ, ಹೇಳುತ್ತಿರುತ್ತಾರೆ ಕೂಡಾ. ಆವರ ಪರಿಶ್ರಮದ ಫಲರೂಪವನ್ನು ಅವರ ‘ಆತ್ಮಕತೆ’ಯಲ್ಲಿ ಕಾಣುತ್ತೇವೆ.
ಅವಿಭಜಿತ ದಕ್ಷಿಣ ಕನ್ನಡದ ಭಾಷಾ ಸೊಗಡನ್ನು ಹರಿಸಿರುವ ಬೊಳುವಾರರು ಥಟ್ಟನೆ ‘ರಾಂಗ್’ ಪದ ಬಳಸಿ ಕಾಸ್ಮೋ ಎನಿಸಿಬಿಡುತ್ತಾರೆ. ಸರಳಾತಿ ಸರಳ ಭಾಷೆಯಲ್ಲಿ ‘ಮೋನುವಿನ ಆತ್ಮಸ್ಮೃತಿ’ ಅಚ್ಚಾಗಿವೆ. ‘ಚಂಬಲ್’ ಪ್ರದೇಶದ ರೋಮಾಂಚಕಾರಿ ಅನುಭವ, ‘ಹಿಮಾಲಯ’ದ ಎದುರು ಕುಬ್ಜರಾಗಿ ಬದುಕೇ ನಶ್ವರ ಎನಿಸುವ ಆ ಘಳಿಗೆ, ರೈಲು ಪ್ರಯಾಣದ ಅನುಭವ, ದಿಲ್ಲಿಯಲ್ಲಿ ಸ್ಟಾಫ್ ಕ್ವಾರ್ಟಸ್ ಪಡೆಯುವಲ್ಲಿ ಅನುಭವಿಸುವ ನೋವು, ಲ್ಯಾಕ್ಟೋಕೆಲಮಿನ್-ಕುಟಿಕ್ಕುರ-ಆಯುರ್, ವೇದಿಕೆ ನಿರ್ಮಾಣ, ನಾಟಕ, ಸಿನೆಮಾಗಳು, ಲಂಡನ್‌ನ ಹೋಟೆಲಿನಲ್ಲಿ ನಡೆದ ಪಜೀತಿ..ಒಂದೆರಡಲ್ಲ. ಈ ಎಲ್ಲವೂ ರೋಚಕತೆ, ಕುತೂಹಲವನ್ನು ಸೃಷ್ಟಿಸಿದೆ. ತಮ್ಮ ಅನವರತ ಕಾಳಜಿಯ ವಿಚಾರಗಳನ್ನು ಪ್ರಸ್ತಾಪಿಸಿ ಕೃತಿಯ ಮೌಲ್ಯವನ್ನೂ ಹೆಚ್ಚಿಸಿದ್ದಾರೆ. ನವನವೀನ ಪದಪ್ರಯೋಗಳು, ವಸ್ತು, ವಿನ್ಯಾಸ, ಶೈಲಿಗಳೆಲ್ಲವೂ ಆಸಕ್ತಿದಾಯಕವಾಗಿದ್ದು, ಓದುಗನನ್ನು ಕಿಂಚಿತ್ತೂ ನಿರಾಸೆಗೊಳಿಸುವುದಿಲ್ಲ.
***
‘ಮಾಯಾಜಿಂಕೆ’ ಪ್ರಸಂಗದ ತಾಳಮದ್ದಳೆಯಲ್ಲಿ ದಿಗ್ಗಜ ಅರ್ಥಧಾರಿ ಶೇಣಿ ಗೋಪಾಲಕೃಷ್ಣಭಟ್ಟರು ಕಲಿತ ಪಾಠವು ಅಭಿವ್ಯಕ್ತಿ ಸ್ವಾತಂತ್ರ್ಯವಿರುವ ಎಲ್ಲ ಜೀವಗಳಿಗೂ ಆತ್ಮವಿಮರ್ಶೆಗೆ ಹೇಳಿ ಮಾಡಿಸಿದ್ದು. ಅಭಿವ್ಯಕ್ತಿ ಸ್ವಾತಂತ್ರ್ಯದ ಇನ್ನೊಂದು ಮುಖವನ್ನು ‘ಮಾಯಾಜಿಂಕೆ’ ಅಂದು ತೋರಿಸಿತ್ತು. ಮೇರು ವ್ಯಕ್ತಿತ್ವದ ‘ಶೇಣಿ’ಯವರೇನೋ ಪಾಠ ಕಲಿತರೆನ್ನಿ.
         
ಈಗಲೂ ಅಂತಹ ಆಭಾಸಗಳು ನಡೆಯುತ್ತವೆ ಎನ್ನುವುದನ್ನು ‘ಬೊಳುವಾರು’ ಹೇಳುವುದು ಹೀಗೆ- ‘‘ಸಾಹಿತಿ, ಕಲಾವಿದರಿಗೆ ಕೇಳಿದಷ್ಟು ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟರೆ, ಮುಖ್ಯ ವಿಷಯವನ್ನು ಬದಿಗೊತ್ತಿ ಎಲ್ಲೆಲ್ಲೋ ಹೋಗಿಬಿಡುತ್ತಾರೆ ಎಂಬ ಆರೋಪ ಅರ್ಧಸತ್ಯವೇನೂ ಅಲ್ಲ. ‘ಲೋಕಾರ್ಪಣೆ’ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸುವವರು, ಪ್ರಸ್ತುತ ಪುಸ್ತಕದ ಬಗ್ಗೆ ಏನನ್ನೂ ಹೇಳದೆ, ಪ್ರಸಕ್ತ ದಿನಗಳಲ್ಲಿ ಹೆಚ್ಚು ವಿವಾದಿತವಾಗಿರುವ ವಸ್ತುವೊಂದನ್ನು ಎತ್ತಿಕೊಂಡು, ಅರ್ಧ ತಾಸು ಚರ್ಚಿಸಿ, ಮರುದಿನದ ಪೇಪರುಗಳಲ್ಲಿ ತಮ್ಮ ಭಾಷಣದ ಸಾಲುಗಳನ್ನು ಹುಡುಕಿದಂತೆ ಅದು’’- ಇದು ಒಂದು ರೀತಿಯ ಎಚ್ಚರಿಕೆಯ ಮಾತೂ ಹೌದು. ಹತಾಶ ಮನಸ್ಸುಗಳ ವಿಕೋಪದಾಟಗಳು ಎಂತೆಂತಹ ಅನಾಹುತಕ್ಕೆ ಕಾರಣವಾಗುತ್ತವೆ ಎನ್ನುವುದನ್ನೂ ಕೃತಿಯಲ್ಲಿ ಓದಬಹುದು. ತನ್ನ ಇತಿ-ಮಿತಿಗಳ ಜ್ಞಾನ, ಸಾಗಿಬಂದ ದಾರಿಯ ಅರಿವುಗಳು ‘ಬೊಳುವಾರ’ರಿಂದ ’ಕನ್ಫೆಷನ್’ ಮಾಡಿಸಿಬಿಟ್ಟಿವೆ. ‘ಉಮ್ಮಾ’ರ ಬಳಿ ಔಷಧಿಯ ವಿಚಾರವಾಗಿ ನಡೆಯುವ ಮಾತುಕತೆಯಿವೆ. ‘ಉಮ್ಮ’ರ ಉಬ್ಬಸವು ಹೆಚ್ಚಾಗಿ ಆಸ್ಪತ್ರೆಗೆ ಸೇರುತ್ತಾರೆ.’ ‘ಉಮ್ಮ’ರನ್ನು ಸಾಮಾನ್ಯ ವಾರ್ಡಿನಿಂದ ಸ್ಪೆಷಲ್ ವಾರ್ಡಿಗೆ ವರ್ಗಾಯಿಸುವ ‘ಬೊಳುವಾರು’ ಆ ಮೂಲಕ ನೆನಪುಗಳ ಭಾರವನ್ನು ಹಗುರಗೊಳಿಸುತ್ತಾರೆ. ಕೊನೆಯದಾಗಿ ‘ಬೊಳುವಾರ’ರ ತೊಡೆಯಲ್ಲಿ ‘ಉಮ್ಮ’ ತಲೆ ಇರಿಸಿ, ತಂಗಿ ನಫಿಸಾಳ ಕೈಬಿಡಬೇಡವೆಂದು ಹೇಳಿ, ಈ ಲೋಕದಿಂದಲೇ ನಿರ್ಗಮಿಸುತ್ತಾರೆ.
ಅದರಂತೆಯೇ ‘ಶಾಲೆ ಬಿಡಿಸಿ ಮನೆಗೆ ಕರೆಸಿ’ ತಂಡದಿಂದ ಶಾಲೆ ಬಿಡಿಸಲ್ಪಟ್ಟು, ಎರಡು ವರ್ಷ ‘ಹೊಂ ಕ್ವಾರಂಟೈನ್’ನಲ್ಲಿದ್ದ ತಂಗಿಯನ್ನು ಪುನಃ ಶಾಲೆಗೆ ಸೇರಿಸಿ, ಓದುವಷ್ಟು ಓದಿಸಿ, ಆಕೆ ನೆಲೆ ಕಂಡುಕೊಳ್ಳುವಲ್ಲಿ ಯಶಸ್ವಿಯೆನಿಸಿ, ತೃಪ್ತರಾಗುತ್ತಾರೆ. ತಂಗಿ ‘ನಫಿಸಾ’ ಬದುಕಲ್ಲಿ ಶಿಕ್ಷಿತಳಾಗಿ ನೆಲೆ ಕಂಡುಕೊಂಡದ್ದಲ್ಲದೆ, ಅವರಿಬ್ಬರ ಹೆಣ್ಣುಮಕ್ಕಳೂ ಕೂಡ ಔದ್ಯಮಿಕ ವಲಯದ ಉನ್ನತ ಹುದ್ದೆಯಲ್ಲಿ ಬೆಳಗುವುದನ್ನು ಕಂಡ ‘ಉಮ್ಮಾ’ ನಿಜಕ್ಕೂ ಖುಷಿಪಟ್ಟಿರುತ್ತಾರೆ. ‘ಉಮ್ಮ-ಉಪ್ಪ-ಉಮ್ಮರ್’ ಬಳಿ ಆಡಿದ ಮಾತು, ನಡೆದುಕೊಂಡ ರೀತಿ ‘ಬೊಳುವಾರ’ರನ್ನು ಆಗಾಗ ಕಾಡುತ್ತಿರುತ್ತವೆ ಎಂದನಿಸಿದೆ.
‘ಇಷ್ಟು ಹೊತ್ತು ಎಲ್ಲಿದ್ದಿರಿ’ ಎಂದೆಲ್ಲ ವಿಚಾರಿಸುವುದು ವ್ಯರ್ಥ ಎನ್ನುವುದನ್ನು ‘ಜುಬೇದಾ’ ಚೆನ್ನಾಗಿ ಕಲಿತಿದ್ದರು ಎನ್ನುವ ‘ಬೊಳುವಾರು’, ತಮ್ಮ ಚಟುವಟಿಕೆಗಳಿಗೆ ಎಂದೂ ಅಡ್ಡಿಮಾಡಿದವರಲ್ಲ ತಮ್ಮ ‘ಹೂವು’ ಎನ್ನುವುದು ಅವರ ಪಾಲಿನ ಹೆಮ್ಮೆಯ ಸಂಗತಿ. ಬೊಳುವಾರರ ನಿಲುವು-ಬದ್ಧತೆ, ನಂಬಿಕೆ-ವಿಶ್ವಾಸಗಳೆಲ್ಲವೂ ಸೇರಿ ಸಮಾಜ ಮತ್ತು ಸಮುದಾಯವು ಆಯಾ ಕಾಲಕ್ಕೆ ಒದಗಿಸುವ ಬಹಳಷ್ಟು ಖುಷಿಗಳಿಂದ ‘ಜುಬೇದಾ’ರನ್ನು ದೂರ ಮಾಡಿವೆ ಎನ್ನುವ ಅರಿವು ಅವರಿಗೆ ಚೆನ್ನಾಗಿಯೇ ಇದೆ. ಆ ಕಾರಣದಿಂದಲೇ ಭೇದವಿಲ್ಲದೆ ಪೊರೆದು, ಹೆಜ್ಜೆ ಹೆಜ್ಜೆಯಲ್ಲೂ ಜತೆಯಾದ ಜುಬೇದಾ ಕ್ಷಮಿಸಬಹುದೇನೋ! ಎನ್ನುವುದು ‘ಮೋಣ್‌ಇಚ್ಚಾ’ನ ಪ್ರಾಮಾಣಿಕ ಅನಿಸಿಕೆ.
ಶ್ರದ್ಧೆಯ ಅತಿರೇಖಗಳು ಅವರಿಗೆ ಕಿರಿಕಿರಿಯೆನಿಸಿವೆ. ಅವರು ರೋಸಿ ಹೋಗಿದ್ದನ್ನೂ ಕಾಣುತ್ತೇವೆ. ‘‘ನಾವು ಓದುವುದು, ನಾವು ಆಲಿಸುವುದು, ನಮ್ಮ ಮಾತುಗಳನ್ನು ಮಾತ್ರ’’ ಎನ್ನುವ ಸತ್ಯಶೋಧನೆಯ ಜ್ಞಾನದ ಬೆಳಕು ಬೆಳಗುತ್ತದೆ. ವಿಚಾರ, ನಂಬಿಕೆ, ವಾಸ್ತವ, ಪ್ರೀತಿ, ವಿಶ್ವಾಸ, ನಂಟು, ಬಂಧಗಳ ಬಗೆಗಿನ ಮೊತ್ತದ ದಾಖಲೀಕರಣ ಈ ‘ಮೋನುಸ್ಮೃತಿ’. ‘ಮುತ್ತುಪ್ಪಾಡಿ’ಯ ಲೋಕದೊಳಗೆ ಎಲ್ಲಾ ಸಂಕಟಗಳಿಂದಲೂ ಪಾರು ಮಾಡಿಸುವ ರಹದಾರಿಯನ್ನು ‘ಬೊಳುವಾರು’ ಕಡೆದಿಟ್ಟಿದ್ದಾರೆ. ಮಾನವೀಯ ನೆಲೆಯಲ್ಲಿ ಸಹೋದರ ಉಮ್ಮರನ ಮಗನ ಬಗ್ಗೆ ತಿಳಿಯಬೇಕಿದೆ. ‘ಪೆದಂಬು’ ಅಂದರೆ, ‘ಗುಲ್ಬರ್ಗಾದ ಟೆಲಿಫೋನ್ ಎಕ್ಸ್‌ಚೇಂಜ್ ಕಚೇರಿಯ ವಿಳಾಸಕ್ಕೆ ಕಳುಹಿಸಿದ 1976, ಆಗಸ್ಟ್ 1ರ ‘ಸುಧಾ’ ವಾರಪತ್ರಿಕೆಯು ತಲುಪಬೇಕಾದಲ್ಲಿ ತಲುಪಿತೇ? ತಿಳಿಯುವ ತುಂಟ ಕೌತುಕ ನನಗಿದೆ’...‘ಒಂದು ಶತಮಾನ ಕಾಯಬಲ್ಲವರು’ ಸಿಗುವುದು ಬಹಳ ಅಪರೂಪ ಸ್ವಾಮೀ!
 ಸ್ಮೃತಿಪಟಲದಲ್ಲಿ ಮೂಡಿದ ಅಷ್ಟೂ ಹೆಸರುಗಳನ್ನು ಕೃತಿಯಲ್ಲಿ ಸ್ಮರಿಸಿದ್ದಲ್ಲದೆ, ನೆನಪಿಗೆ ಬಾರದೆ ಇರುವ ಹೆಸರುಗಳಿಂದ ‘ಮಾಫಿ’ಯನ್ನೂ ಕೇಳಿರುವುದು ಬಂಧಕ್ಕೆ ಅವರು ಕೊಡುವ ಪ್ರಾಶಸ್ತ್ಯ ಹಾಗೂ ಗೌರವವನ್ನು ತೋರಿಸುತ್ತದೆ. ‘ಕಡಬಕ್ಕಾರ್ ಅಬ್ದುಲ್ ಖಾದರ್ ಹಾಜಿ’ಯವರಿಗೆ ಸಾಹಿತ್ಯ ಲೋಕ ಋಣಿಯಾಗಬೇಕಾಗಿದೆ. ಪ್ರಾಯಶ: ಅಂದವರು ಆ ಪ್ರತಿಜ್ಞೆ ಮಾಡದಿರುತ್ತಿದ್ದರೆ, ಅದಕ್ಕೆ ಸರಿಯಾಗಿ ‘ಅಬ್ಬೊಣು ಬ್ಯಾರಿ’ಯವರ ಕಣ್ಣಿಗೆ ‘ಮೋನು’ ಬೀಳದಿರುತ್ತಿದ್ದರೆ; ‘ಮೋನುಸ್ಮತಿ’ ಇಂದು ನಮ್ಮ ಕೈಯಲ್ಲಿರುತ್ತಿರಲಿಲ್ಲ.
     
‘ಬೊಳುವಾರು’ ಹಿನ್ನಲೆ ಬಲು ಸೋಜಿಗದ್ದು. ಅಚ್ಚರಿಯ ಬಂಧಗಳು, ಮತ್ತವುಗಳು ಅಂಟಿಸಿಬಿಡುವ ನಂಟುಗಳೆಲ್ಲವೂ ಕನಸಿನಲ್ಲಿ ಘಟಿಸುವಂತೆಯೋ? ಎಂಬ ಯೋಚನೆ ಓದುಗನಿಗೆ ಮೂಡದಿರಲಾರದು. ಆದರೆ, ಅವೆಲ್ಲವೂ ವಾಸ್ತವಗಳೇ. ಎಲ್ಲರಿಗೂ ಎಲ್ಲವೂ ಸಿಗುವುದಿಲ್ಲ. ಸಿಕ್ಕರೂ ದಕ್ಕುವುದಿಲ್ಲ. ಆದರೆ ‘ಬೊಳುವಾರ’ರಿಗೆ ಏನೆಲ್ಲಾ ಕೊಡಬೇಕೋ ಅದೆಲ್ಲವನ್ನೂ ಸಮಯಾನುಸಮಯಕ್ಕೆ ‘ಪರ್ವರ್ದಿಗಾರ್’ ಕೊಟ್ಟಿದ್ದಾನೆ. ಗಟ್ಟಿಯಾಗಿ ಮಾತನಾಡುವ ‘ಹಲ್ಲಾ ಬೋಲ್’ ಲೇಖಕ, ಕತೆ-ಕಾದಂಬರಿಕಾರ ‘ಬೊಳುವಾರು’ ‘ಖುದುರತ್ ಕೇ ಫರಿಸ್ತೇ’. ನಕ್ಕು ಮನ್ನಿಸುವ ಮಾನವ ಧರ್ಮದ ಅಂತಿಮ ಸತ್ಯದ ದರ್ಶನವಾಗಬೇಕು ಎಂಬ ಇಚ್ಛೆಯುಳ್ಳ ವ್ಯಕ್ತಿ ‘ಬೊಳುವಾರು’.

***

‘ನಮ್ಮೂರು ನಮ್ಮ ಹೆಮ್ಮೆ’ ಎಂದನಿಸಿದರಷ್ಟೇ ನಮ್ಮೆಳಗನ್ನು ಕೆದಕಿ, ಬೆದಕಿ ಬೆಳಗಲು ಸಾಧ್ಯ. ನಮ್ಮೂರಲ್ಲಿ ಭಾಷೆಗಳು ಜಗಳವಾಡುವುದಿಲ್ಲ. ರಾಜಕೀಯ ಮತ್ತದರೊಳಗೆ ನುಸುಳುವ ಧರ್ಮ, ನಂಬಿಕೆಗಳು ಜಗಳಕ್ಕಾಗಿ ಹಾತೊರೆಯುತ್ತಿರುತ್ತವೆ. ನಂಬಿಕೆ, ವಿಶ್ವಾಸ, ಶ್ರದ್ಧಾ ಕೇಂದ್ರಗಳು ಎಲ್ಲರ ಹೊಟ್ಟೆಯನ್ನು ತುಂಬಿಸಲಾರವು. ಕೆಲವರ ಇಚ್ಛೆಯನ್ನಷ್ಟೇ ಅವುಗಳು ಪೂರೈಸುತ್ತವೆ. ಅದು ಗೊತ್ತಿದ್ದರೂ ಮತ್ತೆ ಗಾಯವನ್ನು ಕೆರೆದು, ಹುಣ್ಣಾಗಿಸುವ ದುಃಸ್ಸಾಹಸಕ್ಕೆ ಏನನ್ನೋಣ? ಯಾವ ಬಣ್ಣವನ್ನು ಅಪ್ಪಿಕೊಂಡರೂ ತಪ್ಪೇ. ಜೀವಪರ ಮಾತನ್ನಾಡಿದರೆ ಅಪರಾಧ. ಬದುಕುವ ಹಕ್ಕನ್ನು ಕಸಿಯಕೂಡದು ಎಂದರೆ ಅದಕ್ಕೊಂದಿಷ್ಟು ಟೈಟಲ್ಲುಗಳ ಗಂಟು.
‘ಎಂತ ಅವಸ್ಥೆ ಮಾರಾಯ್ರೆ?’ ಒಟ್ಟಿನಲ್ಲಿ ಕುಂತರೂ, ನಿಂತರೂ, ಕೆಮ್ಮಿದರೂ, ಸೀನಿದರೂ ತಪ್ಪಾಗಿಯೇ ಕಾಣಿಸುವ ಹಳದಿ ರಾಚಿದ ಕಣ್ಣುಗಳಿಂದ ಮುಕ್ತಿಯೆಂದು?
ದಣಿದ ಜೀವಕ್ಕೆ ಬೇಕಿರುವುದು ಮೂರು ಹೊತ್ತಿನ ಕೂಳು, ನೆಮ್ಮದಿಯ ನಿದ್ರೆ. ಯಾವ ಜೀವವೂ ಅದನ್ನು ಬೇಡ ಎನ್ನುವುದಿಲ್ಲ. ಆದರೆ ನಡುವೆ ‘ನಂದೆಲ್ಲಿಡಲಿ’ ಎಂದು ಓಡೋಡಿ ಬರುತ್ತಾರೆ ನೋಡಿ, ಅಂತವರದ್ದೇ ಕರಾಮತ್ತು. ಉತ್ತಮ ಶಿಕ್ಷಣ, ಉದ್ಯೋಗ, ನೆಲೆ, ಅಂತಸ್ತು, ಆರ್ಥಿಕ ಸುಧಾರಣೆಗಳು ಎಲ್ಲರ ಬಾಳಲ್ಲಿಯೂ ಬರಬೇಕು. ನಂಬಿಕೆ, ಶ್ರದ್ಧೆಗಳು ಸಮಪ್ರಮಾಣದಲ್ಲಿ ಆಯಾ ಹೃದಯ ಪಾತ್ರೆಯಲ್ಲಿದ್ದರೇನೇ ಅಂದ-ಚಂದ. ಅವರವರ ವಿಶ್ವಾಸಗಳು ಅವರವರ ಭಕುತಿಯ ಸ್ವರೂಪಗಳಷ್ಟೆ. ಅನ್ಯರನ್ನು ಘಾಸಿಗೊಳಿಸಿ ಪಡುವ ಸುಖದಲ್ಲಿ ಅದೆಂತಹ ಖುಷಿ! ವಿವಿಧತೆಯಲ್ಲಿ ಏಕತೆ ಇರುವ ಈ ಮಣ್ಣಿನ ಸಂಪದಕ್ಕೆ ಎಣೆಯುಂಟೇ? ವಿಶ್ವಾಸಗಳು ಆಯಾ ಹೃದಯದೊಳಗೆ ಭದ್ರವಾಗಿರಬೇಕು. ಹೃದಯದಿಂದ ನಂಬಿಕೆಗಳು ಮನಸ್ಸಿನತ್ತ ಚಲಿಸಿದವು ಎಂದಾದರೆ; ಆಪತ್ತು ಬಂತೆಂದೇ ಅರ್ಥ. ಅವಶ್ಯವಿಲ್ಲದೆ ಹುಟ್ಟುವ ಕುರುಡುತನಗಳಿಗೆ ಕಾಲವೇ ಪರಿಹಾರ ಸೂಚಿಸಬೇಕು.
***
‘ಮೋನುಸ್ಮೃತಿ’ ಓದಿದಾಗ ಇಷ್ಟೆಲ್ಲಾ ಹೇಳಬೇಕೆನಿಸಿತು. ಹೇಳಿದ್ದೇನಷ್ಟೇ. ಕಂಡೀಷನ್ನುಗಳು ನಮಗೂ ಅಪ್ಲೈ ಆಗಬಾರದು ಅಲ್ವಾ? ಎಂತ ಮಾರಾಯ್ರೆ..ನೀವು ಹೀಗೂ ಬರೆಯುವುದಾ!.
 ‘ಎಪ್ಪತ್ತು’ ಆಪತ್ತಿನ ಸಂಖ್ಯೆಯೇನೂ ಅಲ್ಲ. ‘ಮೋನು’ ಈಸ್ ಹೆಲ್ದಿ ಹ್ಯಾಂಡಸಮ್. ಹಾಗಿರಲ

Writer - ಸಂತೋಷ್ ಅನಂತಪುರ

contributor

Editor - ಸಂತೋಷ್ ಅನಂತಪುರ

contributor

Similar News